ಮೆಲಾನಿಯಾ ಟ್ರಂಪ್ ರ ದಿಲ್ಲಿ ಶಾಲಾ ಭೇಟಿ ಕಾರ್ಯಕ್ರಮ ಆಹ್ವಾನಿತರ ಪಟ್ಟಿಯಿಂದ ಕೇಜ್ರಿವಾಲ್, ಸಿಸೋಡಿಯಾ ಹೊರಕ್ಕೆ

Update: 2020-02-22 07:02 GMT

ಹೊಸದಿಲ್ಲಿ: ಮುಂದಿನ ವಾರದ ತಮ್ಮ ಭಾರತ ಭೇಟಿಯ ವೇಳೆ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದಿಲ್ಲಿಯ ಸರಕಾರಿ ಶಾಲೆಯೊಂದರಲ್ಲಿ ನಡೆಯುವ 'ಹ್ಯಾಪಿನೆಸ್ ಕ್ಲಾಸ್' ವೀಕ್ಷಿಸಲಿರುವ ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಿಂದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆಪ್ ಮೂಲಗಳು ತಿಳಿಸಿವೆ.

ಈ ಹಿಂದೆ ನಿಗದಿಯಾದ ಕಾರ್ಯಕ್ರಮದಂತೆ ದಕ್ಷಿಣ ದಿಲ್ಲಿಯ ಸರಕಾರಿ ಶಾಲೆಗೆ ಮೆಲಾನಿಯಾ ಮುಂದಿನ ಮಂಗಳವಾರ ಆಗಮಿಸುವ ವೇಳೆ ಆಕೆಯನ್ನು ಕೇಜ್ರಿವಾಲ್ ಹಾಗೂ ಸಿಸೋಡಿಯಾ ಆಹ್ವಾನಿಸಬೇಕಿತ್ತು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಎರಡನೇ ದಿನ ಮೆಲಾನಿಯಾ ಈ ಶಾಲೆಗೆ ಭೇಟಿ ನೀಡಿ  ತಮ್ಮ ಒಂದು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಅಲ್ಲಿನ ಮಕ್ಕಳೊಂದಿಗೆ ಸಂವಹನ ನಡೆಸಲಿದ್ದಾರೆ.

ಈ ವಿವಿಐಪಿ ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಿಂದ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರನ್ನು ಕೈಬಿಟ್ಟಿರುವ ಹಿಂದೆ ಕೇಂದ್ರದ ಕೈವಾಡವಿದೆ ಎಂದು ಆಪ್  ಆರೋಪಿಸಿದೆ. ವಾಸ್ತವವಾಗಿ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಗೊಳಿಸುವ ಉದ್ದೇಶದಿಂದ  ಶಾಲೆಗಳಲ್ಲಿ ಹ್ಯಾಪಿನೆಸ್ ಪಠ್ಯಕ್ರಮವನ್ನು ಎರಡು ವರ್ಷದ ಹಿಂದೆ ಸಿಸೋಡಿಯಾ ಅವರೇ ಆರಂಭಿಸಿದ್ದರು. ಈ ಹ್ಯಾಪಿನೆಸ್ ಕ್ಲಾಸಿನಲ್ಲಿ ಒಟ್ಟು 40 ನಿಮಿಷಗಳ ಕಾಲ ವಿದ್ಯಾರ್ಥಿಗಳು ಧ್ಯಾನ, ಹೊರಾಂಗಣ ಚಟುವಟಿಕೆಗಳು ಹಾಗೂ ಇತರ ರಿಲ್ಯಾಕ್ಸಿಂಗ್  ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News