ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಬಿಡುಗಡೆಗೆ ಪ್ರಾರ್ಥಿಸುವುದಾಗಿ ರಕ್ಷಣಾ ಸಚಿವರು ಹೇಳಿದ್ದೇಕೆ ಗೊತ್ತಾ?

Update: 2020-02-23 03:53 GMT

ಹೊಸದಿಲ್ಲಿ, ಫೆ.23: ಹಲವು ದಿನಗಳಿಂದ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳು ತಕ್ಷಣವೇ ಬಿಡುಗಡೆಯಾಗಲಿ ಎಂದು ತಾನು ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂಬ ಹೇಳಿಕೆ ನೀಡುವ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಚ್ಚರಿ ಮೂಡಿಸಿದ್ದಾರೆ. ಬಿಡುಗಡೆ ಬಳಿಕ ಅವರು ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಸಹಜವಾಗಿಸಲು ನೆರವಾಗಲಿದ್ದಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಪಡಿಸಿ, ಅವುಗಳನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಮೂವರು ಮಾಜಿ ಮುಖ್ಯಮಂತ್ರಿಗಳಾದ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಒಮರ್ ಅಬ್ದುಲ್ಲಾ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ನೂರಾರು ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿತ್ತು.

"ಕಾಶ್ಮೀರ ಶಾಂತಿಯುತವಾಗಿದೆ. ಪರಿಸ್ಥಿತಿ ಸುಧಾರಿಸುತ್ತಿದೆ. ಬಂಧಿತ ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡುವ ಬಗ್ಗೆ ಶೀಘ್ರ ನಿರ್ಧರಿಸಲಾಗುವುದು. ಸರ್ಕಾರ ಈ ಯಾರಿಗೂ ಯಾವುದೇ ಚಿತ್ರಹಿಂಸೆ ನೀಡಿಲ್ಲ" ಎಂದು ಐಎಎನ್‌ಎಸ್ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಕ್ಷಣಾ ಸಚಿವರು ಸಮರ್ಥಿಸಿಕೊಂಡರು.

"ಅವರು ಬೇಗ ಬಿಡುಗಡೆಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಬಿಡುಗಡೆ ಬಳಿಕ ಕಾಶ್ಮೀರದ ಪರಿಸ್ಥಿತಿ ಸುಧಾರಿಸಲು ಅವರು ನೆರವಾಗಲಿ ಎಂಬ ನಿರೀಕ್ಷೆ ನನ್ನದು" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News