ಜೈನಧರ್ಮದತ್ತ ಆಕರ್ಷಿತರಾಗುತ್ತಿರುವ ಸಾವಿರಾರು ಜಪಾನೀಯರು

Update: 2020-02-23 04:14 GMT

ಟೋಕಿಯೊ, ಫೆ.23: ಝೆನ್ ತತ್ವದ ಪ್ರತಿಪಾದಕರಾದ ಸಾವಿರಾರು ಜಪಾನೀಯರು ಸ್ವಯಂಪ್ರೇರಿತರಾಗಿ ಜೈನಧರ್ಮದತ್ತ ಆಕರ್ಷಿತರಾಗುತ್ತಿದ್ದಾರೆ. ಶುದ್ಧ ಬಿಳಿ ವಸ್ತ್ರ ಧರಿಸಿ, ನವಕರ ಮಂತ್ರ ಪಠಿಸುತ್ತಾ, ಸ್ವಾರ್ಥ ತ್ಯಾಗ, ಸೂರ್ಯೋದಯಕ್ಕೆ ಏಳುವುದು, ಕೇವಲ ಬಿಸಿನೀರು ಸೇವನೆ, ಜೈನಮಂದಿರಗಳಲ್ಲಿ ಗಂಟೆಗಟ್ಟಲೆ ಪ್ರಾರ್ಥನೆ, ಸೂರ್ಯಾಸ್ತಕ್ಕೆ ಮುನ್ನ ರಾತ್ರಿಯೂಟದಂಥ ಜೈನಧರ್ಮದ ಅನುಸರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಕಟ್ಟಾ ಜೈನಧರ್ಮೀಯರಂತೆ ಜೀವನಶೈಲಿ ಬದಲಿಸಿಕೊಂಡಿರುವುದು ಮಾತ್ರವಲ್ಲದೇ, ಭಾರತದ ಜೈನ ಕ್ಷೇತ್ರಗಳಿಗೆ ಪ್ರತಿ ವರ್ಷ ಭೇಟಿ ನೀಡಿ ಹಲವು ದಿನಗಳ ಕಾಲ ಧಾರ್ಮಿಕ ಮುಖಂಡರ ಬಳಿ ಜೈನ ಗ್ರಂಥಗಳ ಅಧ್ಯಯನ ಮಾಡುವ ಅಂಶವನ್ನು ಕೂಡಾ ತಮ್ಮ ವೇಳಾಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.

ಏಳನೇ ಶತಮಾನದ ಸುಪ್ತ ಬುದ್ಧನ ಝೆನ್‌ಕೊ ಜಿ ಮಂದಿರ ಇರುವ ನಗನಕೆನ್ ಪಟ್ಟಣದಿಂದ ನೂರಾರು ಮಂದಿ ಜಪಾನೀಯರು ಪಾಟಿಯಾಲಾ ಮತ್ತು ಶಂಕೇಶ್ವರಕ್ಕೆ ತೆರಳಿ ಜೈನಧರ್ಮವನ್ನು ಒಪ್ಪಿಕೊಳ್ಳುತ್ತಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಪ್ರವಾಸಿಯಾಗಿ ಆಗಮಿಸಿದ ಚುರುಷಿ ಮಿಯಾಝವಾ ಅವರು ಹಿರಿಯ ಸ್ವಾಮೀಜಿ ಗಜಾಧಿಪತಿ ಸ್ವರ್ಗೀಯ ಜಯಂತ್‌ಸೇನ್ ಸುರೀಶ್ವರ್‌ಜೀ ಮಹಾರಾಜ್ ಸಾಹಿಬ್ ಅವರನ್ನು ಭೇಟಿ ಮಾಡಿ ಜೈನಧರ್ಮಕ್ಕೆ ಮತಾಂತರಗೊಂಡಿದ್ದರು. ಹೀಗೆ ತಮ್ಮ ಹಿಂದಿನ ಜೀವನದ ಎಲ್ಲ ವೈಭೋಗಗಳನ್ನು ತ್ಯಜಿಸಿ ಸರಳ ಜೀವನಶೈಲಿ ಅಳವಡಿಸಿಕೊಂಡಿದ್ದರು. ಬಳಿಕ ದೀಕ್ಷೆ ತೆಗೆದುಕೊಳ್ಳುವ ಬಯಕೆ ಮುಂದಿಟ್ಟಿದ್ದರು.

"ನನ್ನ ಗುರು ನನಗೆ ದೊಡ್ಡ ಹೊಣೆ ಹೊರಿಸಿದ್ದಾರೆ. ಜಪಾನ್‌ನಾದ್ಯಂತ ಜೈನ ಧರ್ಮ ಪ್ರಸಾರಕ್ಕೆ ಸೂಚಿಸಿದ್ದಾರೆ. ಆ ಬಳಿಕ ತಿಂಗಳಿಗೆ ನಾಲ್ಕೈದು ಬಾರಿ ಜೈನಧರ್ಮದಲ್ಲಿ ಆಸಕ್ತಿ ಇರುವ ನೂರಾರು ಮಂದಿಯನ್ನು ಭಾರತಕ್ಕೆ ಕರೆದೊಯ್ಯುತ್ತಿದ್ದೇನೆ" ಎಂದು ತುಳಸಿ ಎಂದು ಹೆಸರು ಬದಲಿಸಿಕೊಂಡಿರುವ ಚುರುಶಿ ವಿವರಿಸುತ್ತಾರೆ. ನಗನೊಕೆನ್ ನಗರದ ಬಳಿಕ ಒಸಾಕಾ ಹಾಗೂ ಟೋಕಿಯೊದಲ್ಲಿ ಕೂಡಾ ಜೈನಧರ್ಮ ಜನಪ್ರಿಯವಾಗುತ್ತಿದೆ.

ಹಲವು ಮಂದಿ ಜೈನಧರ್ಮಕ್ಕೆ ಮತಾಂತರ ಹೊಂದಿರುವುದು ಮಾತ್ರವಲ್ಲದೇ ಸನ್ಯಾಸ ಸ್ವೀಕರಿಸಲೂ ಸಜ್ಜಾಗಿದ್ದಾರೆ. ಸಾಂಪ್ರದಾಯಿಕವಾಗಿ ಸನ್ಯಾಸ ಸ್ವೀಕಾರಕ್ಕೆ ಕಠಿಣ ತರಬೇತಿ ಅಗತ್ಯ. ಜೈನ ಮಂದಿರಗಳಲ್ಲಿ ಆರು ತಿಂಗಳಿನಿಂದ ಹಿಡಿದು ಹತ್ತು ವರ್ಷದವರೆಗೆ ಹಿರಿಯ ಸ್ವಾಮೀಜಿಯವರ ಜತೆಗೆ ವಾಸದೊಂದಿಗೆ ದೀಕ್ಷಾ ಪೀಠಿಕೆ ಆರಂಭವಾಗುತ್ತದೆ" ಎಂದು ಬಾಬುಲಾಲ್ ಜೈನ್ ಹೇಳುತ್ತಾರೆ.

ಒಂದು ತಿಂಗಳ ಹಿಂದೆ 2500 ಮಂದಿ ಜಪಾನೀಯರು ಉತ್ತರ ಗುಜರಾತ್‌ನ ಥರಾಡ್ ಪಟ್ಟಣಕ್ಕೆ ಆಗಮಿಸಿ ಜಯಂತ್ ಸೇನ ಸುರೀಶ್ವರ್‌ಜಿ ಮಹಾರಾಜ್ ಸಾಹೇಬ್ ಜತೆ ಹಲವು ವಾರಗಳನ್ನು ಕಳೆದಿದ್ದರು. "ಹಲವಾರು ಮಂದಿ ಜಪಾನೀಯರು ಬರುತ್ತಾರೆ. ನಮ್ಮ ನಿಯಮ ಪಾಲಿಸುತ್ತರೆ. ನಮ್ಮೊಂದಿಗೆ ಪ್ರಾರ್ಥಿಸುತ್ತಾರೆ. ಸಾತ್ವಿಕ ಆಹಾರವನ್ನು ಸೂರ್ಯಾಸ್ತಕ್ಕೆ ಮುನ್ನ ಸ್ವೀಕರಿಸುತ್ತಾರೆ. ಧ್ಯಾನ ಮಾಡುತ್ತಾರೆ. ಮನೆಗೆ ಹೋದ ಬಳಿಕವೂ ಅದನ್ನೇ ಮುಂದುವರಿಸುತ್ತಾರೆ" ಎಂದು ನಿತ್ಯಸೇನ ಸುರೇಶ್ವರ್‌ಜಿ ಮಹಾರಾಜ್ ಸಾಹೇಬ್ ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News