ಪಾಕ್ ಅಧ್ಯಕ್ಷರನ್ನು ಭೇಟಿ ಮಾಡಿದ ಶತ್ರುಘ್ನ ಸಿನ್ಹಾ ಚರ್ಚಿಸಿದ್ದೇನು?

Update: 2020-02-23 04:34 GMT

ಇಸ್ಲಾಮಾಬಾದ್, ಫೆ.23: ಕಾಂಗ್ರೆಸ್ ಮುಖಂಡ ಶತ್ರುಘ್ನ ಸಿನ್ಹಾ ಅವರು ಶನಿವಾರ ಲಾಹೋರ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಉಭಯ ದೇಶಗಳ ಗಡಿಯಲ್ಲಿ ಶಾಂತಿ ಸ್ಥಾಪನೆಯ ಅಗತ್ಯತೆಯ ಬಗ್ಗೆ ಉಭಯ ಮುಖಂಡರು ಚರ್ಚೆ ನಡೆಸಿದ್ದಾಗಿ ಪಾಕಿಸ್ತಾನದ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.

ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸುವುದಕ್ಕಾಗಿ ಪಾಕಿಸ್ತಾನಕ್ಕೆ ಆಗಮಿಸಿದ್ದ ನಟ- ರಾಜಕಾರಣಿ ಸಿನ್ಹಾ, ರಾಜ್ಯಪಾಲರ ನಿವಾಸದಲ್ಲಿ ಪಾಕಿಸ್ತಾನದ ಅಧ್ಯಕ್ಷರನ್ನು ಭೇಟಿ ಮಾಡಿ ಕಾಶ್ಮೀರ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಅಲ್ವಿಯವರ ಕಚೇರಿಯ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಭಾರತ ಉಪಖಂಡದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯತೆಯನ್ನು ಅಲ್ವಿ ಹಾಗೂ ಸಿನ್ಹಾ ಪ್ರತಿಪಾದಿಸಿದರು.
"ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷದ ಆಗಸ್ಟ್ 5ರಂದು ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಕಾಶ್ಮೀರದಲ್ಲಿ ವಿಧಿಸಿರುವ ನಿರ್ಬಂಧಕ್ಕೆ ಸಂಬಂಧಿಸಿದಂತೆ ನಾವು ವ್ಯಕ್ತಪಡಿಸಿದ ಕಳವಳಕ್ಕೆ ಶತ್ರುಘ್ನ ಸಿನ್ಹಾ ಸಹಮತ ವ್ಯಕ್ತಪಡಿಸಿದರು" ಎಂದು ಅಲ್ವಿ ಅವರ ಟ್ವೀಟ್ ವಿವರಿಸಿದೆ.

ಬಿಜೆಪಿಯ ಮಾಜಿ ಸಂಸದರೂ ಆಗಿರುವ ಶತ್ರುಘ್ನ ಸಿನ್ಹಾ ಪಾಕಿಸ್ತಾನಿ ಉದ್ಯಮಿ ಮಿಯಾನ್ ಅಸಾದ್ ಅಶನ್ ಅವರ ಆಹ್ವಾನದ ಮೇರೆಗೆ ವಿವಾಹ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಆಗಮಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಿನ್ಹಾ, "ಇದು ವೈಯಕ್ತಿಕ ಭೇಟಿ. ಇದರಲ್ಲಿ ಅಧಿಕೃತ ಅಥವಾ ರಾಜಕೀಯದ ಯಾವ ಅಂಶವೂ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News