ಜನಪರ ಮೌಲ್ಯಗಳಿಗೆ ಪತ್ರಕರ್ತರು ಗೌರವ ನೀಡುತ್ತಿಲ್ಲ: ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ

Update: 2020-02-23 18:36 GMT

ಬೆಂಗಳೂರು, ಫೆ. 23: ಜನಪರ ಮೌಲ್ಯಗಳಿಗೆ ಹಿಂದಿನ ಪತ್ರಕರ್ತರು ನೀಡುತ್ತಿದ್ದ ಗೌರವವನ್ನು ಇಂದಿನವರು ನೀಡುತ್ತಿಲ್ಲ ಎಂದು ಹಿರಿಯ ಪತ್ರಕರ್ತೆ ಡಾ.ಆರ್. ಪೂರ್ಣಿಮಾ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಬಿಎಂಶ್ರೀ ಪ್ರತಿಷ್ಠಾನ ಎನ್.ಆರ್ ಕಾಲನಿಯ ಎಂವಿಸೀ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪತ್ರಕರ್ತ ವಿ.ನಾಗರಾಜರಾವ್ ಅವರ ಕರ್ತವ್ಯ ನಿಷ್ಠೆ, ಅವರ ಸಮಯಪ್ರಜ್ಞೆ ಮಾಧ್ಯಮ ಕ್ಷೇತ್ರಕ್ಕೆ ಮಾದರಿ. ಆದರೆ, ಇತ್ತೀಚಿನ ಪತ್ರಿಕೋದ್ಯಮ ತನ್ನ ಜವಾಬ್ದಾರಿ, ಕರ್ತವ್ಯ ನಿರ್ವಹಿಸುವಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಮಾಧ್ಯಮಗಳ ಕರ್ತವ್ಯ, ವಸ್ತುನಿಷ್ಠೆ ಬಗ್ಗೆ ಎಲ್ಲ ಕಿರಿಯರಿಗೆ ಅರ್ಥೈಸಬೇಕಾದ ಅನಿವಾರ್ಯತೆ ಇದೆ. ಸಮಾಜಿಕ ಜವಾಬ್ದಾರಿಯನ್ನು ಮಾಧ್ಯಮ ಕ್ಷೇತ್ರ ತಿಳಿಯಬೇಕಿದೆ. ಇವತ್ತಿನ ಆತಂಕಕಾರಿ ಬೆಳವಣಿಗೆಗಳ ಬಗ್ಗೆ ಚಿಂತನೆ ಅಗತ್ಯವಿದೆ. ಕರ್ತವ್ಯ ನಿಷ್ಠ ವಿ.ನಾಗರಾಜರಾವ್ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ಸಂತೋಷ ತಂದಿದೆ ಎಂದರು.

ಪ್ರೊ.ಡಾ.ಬಿ.ಯು.ಸುಮಾ ಮಾತನಾಡಿ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ನಿರ್ಣಾಯಕ ಬದಲಾವಣೆಗೆ ಜನಾಂಗೀಯ ಸಮಸ್ಯೆಗಳ ಬಗ್ಗೆ ಬಹುತ್ವದ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಲೇಖಕ ಡಾ.ಬಾಬು ಕೃಷ್ಣಮೂರ್ತಿ ಮಾತನಾಡಿ, ಎಲ್.ಎಸ್. ಶೇಷಗಿರಿರಾವ್ ಮತ್ತು ವಿ.ನಾಗರಾಜರಾವ್ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ನಿರ್ವಹಿಸಿದ್ದಾರೆ. ಯಾವುದೇ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಪತ್ರಕರ್ತೆ ಭಾರತಿ ಹೆಗಡೆ ಮಾತನಾಡಿ, ಪ್ರತಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಆರ್. ಪೂರ್ಣಿಮಾ ಅವರು ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ನಾಲ್ಕು ದಶಕದಿಂದ ಈವರೆಗೆ ಆದರ್ಶ ಮತ್ತು ಆತ್ಮವಿಶ್ವಾಸದ ಹಾದಿಯಲ್ಲಿ ನಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಯೋಗಶೀಲ ಮಹಿಳೆಯಾಗಿ, ಹಲವು ಪ್ರಥಮಗಳನ್ನು ದಾಖಲಿಸಿದವರು. ಇಂದಿಗೂ ಕಲಿಕಾ ಉತ್ಸಾಹಿ ಎಂದು ತಿಳಿಸಿದರು.

ಇದೇ ವೇಳೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿಯನ್ನು ಪತ್ರಕರ್ತೆ ಡಾ.ಆರ್.ಪೂರ್ಣಿಮಾ, ಪ್ರೊ.ಎಲ್.ಎಸ್.ಶೇಷಗಿರಿರಾವ್ ವಿಮರ್ಶಾ ಪ್ರಶಸ್ತಿಯನ್ನು ಕನ್ನಡ ಪ್ರಾಧ್ಯಾಪಕಿ ಡಾ.ಬಿ.ಯು.ಸುಮಾ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್. ಲಕ್ಷ್ಮೀನಾರಾಯಣ, ಗೌರವಾಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ, ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ಎಲ್.ಜಿ.ಮೀರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News