ಶೀಘ್ರದಲ್ಲೆ 212 ಕುಟುಂಬಗಳು ಮಾರತ್ತಹಳ್ಳಿಗೆ ಸ್ಥಳಾಂತರ: ಬಿಬಿಎಂಪಿ ಸದಸ್ಯ ಎ.ಆರ್.ಝಾಕಿರ್

Update: 2020-02-24 18:20 GMT

ಬೆಂಗಳೂರು, ಫೆ.24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪುಲಿಕೇಶಿ ವಾರ್ಡ್‌ನ ನೇತಾಜಿ ರಸ್ತೆಯ ರೈಲ್ವೆ ಸೇತುವೆ ಬಳಿಯಿರುವ 212 ಕುಟುಂಬಗಳನ್ನು ಮಾರತ್ತಹಳ್ಳಿ ಬಳಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಲಾಗಿರುವ ಮನೆಗಳಿಗೆ ಶೀಘ್ರದಲ್ಲೆ ಸ್ಥಳಾಂತರಗೊಳಿಸಲಾಗುವುದು ಎಂದು ಬಿಬಿಎಂಪಿ ಸದಸ್ಯ ಎ.ಆರ್.ಝಾಕಿರ್ ತಿಳಿಸಿದರು.

ನಗರದ ಫ್ರೇಜರ್ ಟೌನ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ಬಡವರು ನೇತಾಜಿ ರಸ್ತೆಯಲ್ಲಿ ಸಣ್ಣ ಸಣ್ಣ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಶಾಶ್ವತವಾದ ಸೂರು ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆ ಪ್ರಾರಂಭವಾಗುತ್ತಿದ್ದಂತೆ ರೈಲ್ವೆ ಇಲಾಖೆಯವರೇ ಇವರನ್ನು ಒಕ್ಕಲೆಬ್ಬಿಸುತ್ತಿದ್ದರು. ಆದುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಿಸಲಾಗಿರುವ ಮನೆಗಳಿಗೆ ಇವರನ್ನು ಸ್ಥಳಾಂತರಿಸಲಾಗುತ್ತಿದೆ. ಇದಕ್ಕೆ ಅಲ್ಲಿನ ಜನರು ಒಪ್ಪಿದ್ದಾರೆ ಎಂದು ಝಾಕಿರ್ ಹೇಳಿದರು.

ಬಿಬಿಎಂಪಿ ವತಿಯಿಂದ ನೇತಾಜಿ ರಸ್ತೆಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ 10 ಕೋಟಿ ರೂ.ಮಂಜೂರಾಗಿದೆ. ಎಂ.ಎಂ.ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯವನ್ನು ಬಿಬಿಎಂಪಿ ಹಾಗೂ ಸರಕಾರದ ಸಹಭಾಗಿತ್ವದಲ್ಲಿ 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮೋರ್ ರಸ್ತೆಯಲ್ಲಿರುವ ಮಾರುಕಟ್ಟೆಯನ್ನು ಸಮೀಪದಲ್ಲಿರುವ 3 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗಕ್ಕೆ ಸ್ಥಳಾಂತರಿಸಿ, ಮಾರುಕಟ್ಟೆ ಇರುವ ಜಾಗದಲ್ಲಿ ಆಟದ ಮೈದಾನವನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ, 3 ಕೋಟಿ ರೂ.ವೆಚ್ಚದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಝಾಕಿರ್ ಹೇಳಿದರು.

ಸಿಂಧಿ ಕಾಲನಿಯಲ್ಲಿ ಸುಮಾರು 40 ವರ್ಷಗಳಷ್ಟು ಹಳೆಯದಾದ ಪಾಲಿಕೆಯ ಸಮುದಾಯ ಭವನವನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಇದರಿಂದ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಇದರ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ವಾರ್ಡ್ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಓರ್ವ ವಿದ್ಯಾರ್ಥಿನಿ ಬಿ.ಕಾಂನಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಈ ಕಾಲೇಜಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ.ಮಂಜೂರಾಗಿದೆ. ಅಲ್ಲದೇ, ಬಂಬೂಬಝಾರ್ ಬಳಿ ಕುಡಿಯುವ ನೀರು, ಒಳಚರಂಡಿ ಮಾರ್ಗ ಮೇಲ್ದರ್ಜೆಗೆ ಹಾಗೂ ಸಬ್ ವೇ ಲೈನ್ ಅಳವಡಿಕೆಗೆ 14 ಕೋಟಿ ರೂ.ಮಂಜೂರಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News