ಬಂದ್ ಕರೆ ಕೊಟ್ಟವರಿಗೆ ಹೈಕೋರ್ಟ್ ಬಿಸಿ: ನಷ್ಟ ಮಾಡಿದವರಿಂದ ಪರಿಹಾರ ವಸೂಲಿ ಮಾಡಲು ಆದೇಶ

Update: 2020-02-25 15:00 GMT

ಬೆಂಗಳೂರು, ಫೆ.25: ರಾಜ್ಯದಲ್ಲಿ ಮಹಾದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಮತ್ತು ಐಟಿ-ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧಿಸಿದ್ದನ್ನು ವಿರೋಧಿಸಿ ನಡೆಸಿದ ಬಂದ್ ವೇಳೆ ಆಗಿರುವ ಸಾರ್ವಜನಿಕ ಆಸ್ತಿ ನಷ್ಟದ ಕುರಿತು ತನಿಖೆ ನಡೆಸಲು ಮತ್ತು ನಷ್ಟವಾಗಿರುವ ಆಸ್ತಿಯ ಲೆಕ್ಕ ಹಾಕಿ ವಸೂಲಿ ಮಾಡಲು ಹೈಕೋರ್ಟ್ ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಕ್ಲೇಮು ಕಮಿಷನರ್ ಆಗಿ ನೇಮಕಗೊಳಿಸಿ ಆದೇಶಿಸಿದೆ.

ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ನಡೆಸಿದ ರಾಜ್ಯ ಬಂದ್ ಮತ್ತು ಅಕ್ರಮ ಆಸ್ತಿ ಆರೋಪದಡಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧಿಸಿದ್ದನ್ನು ವಿರೋಧಿಸಿ ಅವರ ಬೆಂಬಲಿಗರು ನಡೆಸಿದ ಪ್ರತಿಭಟನೆ ವೇಳೆ ಆಗಿರುವ ನಷ್ಟವನ್ನು ಹಾನಿ ಮಾಡಿದವರಿಂದಲೇ ವಸೂಲಿ ಮಾಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೆಂಚನಹಳ್ಳಿ ರವಿಕುಮಾರ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಂದ್ ನಿಂದ ಉಂಟಾಗಿರುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯ ನಷ್ಟ ಲೆಕ್ಕ ಹಾಕಿ, ಅದನ್ನು ವಸೂಲಿ ಮಾಡಲು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಮುಹಮ್ಮದ್ ಗೌಸ್ ಎಂ. ಪಾಟೀಲ್ ಹಾಗೂ ನ್ಯಾ.ಸಿ.ಜಿ.ಆರ್.ಬಿನಕನಹಳ್ಳಿ ಅವರನ್ನು ಕ್ಲೇಮು ಕಮಿಷನರ್ ಆಗಿ ನೇಮಕಗೊಳಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸರಕಾರಕ್ಕೆ ಪೀಠ ಆದೇಶಿಸಿತು.

ಪೀಠ ತನ್ನ ಆದೇಶದಲ್ಲಿ ಕ್ಲೇಮು ಕಮಿಷನರ್ ಆಗಿ ಕಾರ್ಯ ನಿರ್ವಹಿಸಲಿರುವ ಇಬ್ಬರೂ ನ್ಯಾಯಾಧೀಶರಿಗೆ ಓಡಾಡಲು ಕಾರು, ಕಚೇರಿ, ಸಿಬ್ಬಂದಿ, ಪೀಠೋಪಕರಣ, ತಾಂತ್ರಿಕ ಸವಲತ್ತುಗಳು ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಮುಂದಿನ ಮೂರರಿಂದ ಆರು ವಾರಗಳ ಒಳಗೆ ಸರಕಾರ ಒದಗಿಸಿಕೊಡಬೇಕು. ಬಂದ್ ಮತ್ತು ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿ ಜತೆಗೆ ಖಾಸಗಿ ಆಸ್ತಿ ನಷ್ಟದ ಕುರಿತು ಸಾರ್ವಜನಿಕ ದೂರು ಸಲ್ಲಿಸಲು ಮಾಹಿತಿ ಲಭ್ಯವಾಗುವಂತೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಸರಕಾರದ ಪರ ವಕೀಲರಿಗೆ ಪೀಠ ಸೂಚಿಸಿತು.

ಇನ್ನು, ಕ್ಲೇಮು ಕಮಿಷನರ್‌ಗಳು ತಜ್ಞರ ನೆರವು ಪಡೆದು ಬಂದ್ ವೇಳೆ ಆಗಿರುವ ಆಸ್ತಿ ನಷ್ಟವನ್ನು ಸಾರ್ವಜನಿಕ ಮತ್ತು ಖಾಸಗಿ ಲೆಕ್ಕದಲ್ಲಿ ಪತ್ತೆ ಮಾಡಿ ನಷ್ಟದ ಅಂದಾಜು ಪಟ್ಟಿ ಸಿದ್ದಪಡಿಸಬೇಕು. ನಷ್ಟಕ್ಕೆ ಕಾರಣವಾದ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ವಸೂಲಿ ಕ್ರಮ ಜರುಗಿಸಬೇಕು. ಈ ಕುರಿತ ವರದಿಗಳನ್ನು ಕಾಲಾನುಕ್ರಮದಲ್ಲಿ ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಬೇಕು ಎಂದು ಕ್ಲೇಮು ಕಮಿಷನರ್‌ಗೆ ಸೂಚಿಸಿತು.

ಪೀಠ ತನ್ನ ಆದೇಶದಲ್ಲಿ ಯಾವುದೇ ವ್ಯಕ್ತಿ ಎಂಥದೇ ಕಾರಣಕ್ಕಾಗಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುವುದು ಅಥವಾ ನಾಶಪಡಿಸುವುದು ಸಾಮಾನ್ಯ ಕಾನೂನುಗಳಿಗೆ ಅಷ್ಟೇ ಅಲ್ಲ, ಸಂವಿಧಾನದ ಆಶಯಗಳಿಗೂ ವಿರುದ್ಧವಾದುದು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸುವುದು ಸರಕಾರದ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News