ದಿಲ್ಲಿ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಎಫ್‌ಐಆರ್ ದಾಖಲಿಸಲು ಮನವಿ: ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2020-02-26 10:43 GMT

ಹೊಸದಿಲ್ಲಿ, ಫೆ. 25: ಈಶಾನ್ಯ ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಪಾಲ್ಗೊಂಡ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಬುಧವಾರಕ್ಕೆ ನಿಗದಿಪಡಿಸಿದೆ.

 ನ್ಯಾಯಮೂರ್ತಿಗಳಾದ ಜಿ.ಎಸ್. ಸಿಸ್ಟಾನಿ ಹಾಗೂ ಎ.ಜೆ. ಭಂಭಾನಿ ಅವರನ್ನೊಳಗೊಂಡ ಪೀಠದ ಮುಂದೆ ಮಾನವ ಹಕ್ಕು ಕಾರ್ಯಕರ್ತ ಹರ್ಷ ಮಂದರ್ ಮನವಿ ಸಲ್ಲಿಸಿ ತುರ್ತು ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದರು. ಘಟನೆ ಬಗ್ಗೆ ಸಿಟ್ ತನಿಖೆ ನಡೆಸುವಂತೆ ಹಾಗೂ ಹಿಂಸಾಚಾರದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಕೂಡ ಹರ್ಷ ಮಂದರ್ ಮನವಿಯಲ್ಲಿ ಕೋರಿದ್ದರು.

ಹರ್ಷ ಮಂದರ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ನೇಹಾ ಮುಖರ್ಜಿ, ಈಶಾನ್ಯ ದಿಲ್ಲಿಯ ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿದೇಳಲು ದ್ವೇಷ ಭಾಷಣ ಮಾಡಿದ ಹಾಗೂ ಜನರನ್ನು ಉತ್ತೇಜಿಸಿದ ನಿರ್ದಿಷ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಹೊಸದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಜನರ ಮೇಲೆ ಕ್ರೂರವಾಗಿ ದಾಳಿ ನಡೆಯುತ್ತಿರುವ ಪ್ರದೇಶದಲ್ಲಿ ಸೇನೆ ನಿಯೋಜಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅವರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News