ಮಝಾರ್ ಗೆ ಬೆಂಕಿ ಹಚ್ಚಿದ್ದು ನಾವೇ: ಕ್ಯಾಮರಾ ಮುಂದೆ ಸಂಘಪರಿವಾರದ ಕಾರ್ಯಕರ್ತರ ಹೇಳಿಕೆ

Update: 2020-02-26 10:43 GMT

ಹೊಸದಿಲ್ಲಿ,ಫೆ.25: ರವಿವಾರದಿಂದ ಈಶಾನ್ಯ ದಿಲ್ಲಿ ಹಿಂಸಾಚಾರದಿಂದ ನಲುಗುತ್ತಿದೆ. ಹಿಂದುತ್ವ ಗುಂಪುಗಳು ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರಕ್ಕಿಳಿದಿವೆ. ಇನ್ನೊಂದು ಕಡೆಯವರೂ ಇದಕ್ಕೆ ಉತ್ತರಿಸುತ್ತಿದ್ದಾರೆ. ಸಿಎಎ ಕಿಚ್ಚಿಗೆ ಈಗಾಗಲೇ 10ಕ್ಕೂ ಅಧಿಕ ಜೀವಗಳು ಬಲಿಯಾಗಿವೆ. ನೂರಾರು ಜನರು ಗಾಯಗೊಂಡಿದ್ದಾರೆ. ಹಲವಾರು ಅಂಗಡಿಗಳು,ಮನೆಗಳು ಮತ್ತು ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ತೀರ ಉದ್ವಿಗ್ನಗೊಂಡಿದೆ. ಶಸ್ತ್ರಸಜ್ಜಿತ ಗುಂಪುಗಳು ರಸ್ತೆಗಳಲ್ಲಿ ಅಟ್ಟಹಾಸ ಮೆರೆಯುತ್ತಿವೆ ಮತ್ತು ಅಂಗಡಿಗಳು, ಮನೆಗಳು,ವಾಹನಗಳಿಗೆ ಬೆಂಕಿ ಹಚ್ಚುವುದನ್ನು ಮುಂದುವರಿಸಿವೆ. ಇದರ ನಡುವೆಯೇ ಸುದ್ದಿ ಜಾಲತಾಣ ‘Thewire.in’ ಹಿಂದುತ್ವ ಗುಂಪೊಂದನ್ನು ಮಾತನಾಡಿಸಿ ಹಿಂಸಾಚಾರ ಮತ್ತು ಅವರ ಕಾರ್ಯತಂತ್ರಗಳ ಬಗ್ಗೆ ತಿಳಿಯಲು ಪ್ರಯತ್ನಿಸಿದೆ. ಗುಂಪಿನಲ್ಲಿದ್ದವರು ಕ್ಯಾಮರಾ ತಮ್ಮ ಮುಖವನ್ನು ಗುರಿಯಾಗಿಸಿಕೊಳ್ಳಬಾರದು ಎಂಬ ಷರತ್ತಿನೊಂದಿಗೆ ಮಾತಿಗಿಳಿದಿದ್ದು,ಅವರೊಂದಿಗಿನ ಮಿನಿ ಸಂದರ್ಶನದ ವರದಿ ಇಲ್ಲಿದೆ...

► ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ನೀವೇಕೆ ವಿರೋಧಿಸುತ್ತೀರಿ?

ಸಿಎಎ ವಿರೋಧಿಸುವವರನ್ನು ನಾವು ವಿರೋಧಿಸುತ್ತೇವೆ. ನಮ್ಮ ದೇಶದಲ್ಲಿ ಈ ರೀತಿ ಪ್ರತಿಭಟನೆ ನಡೆಸಲು ಅವರಿಗೆ (ಮುಸ್ಲಿಮರು) ಎಷ್ಟು ಧೈರ್ಯ? ಇದು ಅವರ ದೇಶವೇ? ಇದು ನಮ್ಮ ದೇಶ. ಅವರು ನಮಗಿಂತ ದೊಡ್ಡ ಗೂಂಡಾಗಳೇ? ನಾವು ಅವರಿಗಿಂತ ದೊಡ್ಡ ಗೂಂಡಾಗಳಾಗಿದ್ದೇವೆ. ನಾವು ಅವರಿಗೆ ಅವರ ಜಾಗವನ್ನು ತೋರಿಸುತ್ತೇವೆ, ಅವರು ತಮ್ಮ ಮನೆಗಳಲ್ಲಿ ಇರಲೂ ನಾವು ಬಿಡುವುದಿಲ್ಲ. ಮನೆಗಳನ್ನು ಸುಡಲಾಗಿದೆ,ಆಸ್ಪತ್ರೆಗೂ ಬೆಂಕಿ ಹಾಕಲಾಗಿದೆ.

► ನಿನ್ನೆ ಈ ಪ್ರದೇಶದಲ್ಲಿ ಮಝಾರ್ (ಸಮಾಧಿ) ಒಂದಕ್ಕೆ ಬೆಂಕಿ ಹಚ್ಚಲಾಗಿದೆ. ಅದನ್ನು ಯಾರು ಮಾಡಿದ್ದು?

‘ಯಾರು ಮಾಡಿದ್ದು ಎನ್ನುವುದು ನಮಗೆ ಗೊತ್ತಿಲ್ಲ. ಬಹುಶಃ ಮುಸ್ಲಿಮರೇ ಬೆಂಕಿ ಹಚ್ಚಿರಬಹುದು ’ಎಂದು ಒಬ್ಬ ಹೇಳಿದರೆ,‘ಅದನ್ನು ಮಾಡಿದವರು ಯಾರು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ನಾವೆಲ್ಲರೂ ಬೆಂಕಿ ಹಚ್ಚಿದ್ದೇವೆ ’ಎಂದು ಇನ್ನೊಬ್ಬ ತಿಳಿಸಿದ.

►  ಅಂದರೆ ನೀವೆಲ್ಲ ಸಿಎಎ ವಿರುದ್ಧ ಪ್ರತಿಭಟಿಸಲು ರಸ್ತೆಗಳಲ್ಲಿ ತಡೆಯೊಡ್ಡಿದವರ ವಿರುದ್ಧವಾಗಿದ್ದೀರಿ?

ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಾಗಲೇಬೇಕು.ಸರಕಾರವು ನಮ್ಮ ಪೌರತ್ವದ ಬಗ್ಗೆ ಕೇಳಿದರೆ ನಾವು ದಾಖಲೆಗಳನ್ನು ತೋರಿಸುತ್ತೇವೆ. ಅವರಂತೆ ಹೆದರಿಕೊಂಡಿರುವವರು ಹುಚ್ಚರು,ಮೂರ್ಖರು,ಅಶಿಕ್ಷಿತರು,ಏನೂ ಅರ್ಥವಾಗದವರು.

►  ಸಿಎಎ ಕಾಯ್ದೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಉಲ್ಲೇಖಿಸಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ?

ಅವರು (ಮುಸ್ಲಿಮರು) ಅವರು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದವರು. ಪ್ರತಿಭಟನೆ ನಡೆಸುತ್ತಿರುವವರಲ್ಲಿ ಕನಿಷ್ಠ ಅರ್ಧದಷ್ಟು ಜನರು ಅಕ್ರಮವಾಗಿ ಈ ದೇಶದಲ್ಲಿ ನುಸುಳಿದವರಾಗಿದ್ದಾರೆ. ಅಲ್ಲಿ (ಪಾಕಿಸ್ತಾನದಲ್ಲಿ) ನಮ್ಮ ಹಿಂದು ಮಾತೆಯರು ಮತ್ತು ಸೋದರಿಯರ ಮೇಲೆ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಗೊತ್ತಿರಬಹುದು. ನಾವು ನಮ್ಮ ದೇಶದವರನ್ನು (ಹಿಂದುಗಳು) ಇಲ್ಲಿರಿಸುತ್ತೇವೆ. ನಾವು ಅವರನ್ನೇಕೆ (ಮುಸ್ಲಿಮರು) ಇಲ್ಲಿ ಇರಲು ಬಿಡಬೇಕು?

ಇಷ್ಟಾದ ಬಳಿಕ ಗುಂಪು ‘ಜೈ ಶ್ರೀರಾಮ ’ಎಂದು ಘೋಷಣೆ ಕೂಗುತ್ತ ಮುಂದಕ್ಕೆ ಸಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News