ಪಡಿತರ ಚೀಟಿಗೆ ಆಧಾರ್ ಜೋಡಣಾ ಪ್ರಕ್ರಿಯೆ ಇಂದಿನಿಂದಲೇ ಆರಂಭ: ಆಹಾರ ಸಚಿವ ಗೋಪಾಲಯ್ಯ

Update: 2020-02-25 18:41 GMT

ಬೆಂಗಳೂರು, ಫೆ.25: ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಮಾಡುವ ಪ್ರಕ್ರಿಯೆ ಇಂದಿನಿಂದಲೇ(ಫೆ.26) ಪ್ರಾರಂಭಗೊಳ್ಳುತ್ತಿದ್ದು, ಪಡಿತರದಾರರು ಆಧಾರ್‌ಗೆ ಜೋಡಣೆ ಮಾಡಿಕೊಳ್ಳುವುದು ಕಡ್ಡಾಯವೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. 

ಮಂಗಳವಾರ ವಿಕಾಸಸೌಧದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎರಡು ತಿಂಗಳೊಳಗೆ ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಪ್ರಕ್ರಿಯೆ ಮುಗಿಯಲಿದೆ. ಅಲ್ಲಿಯವರೆಗೂ ರಾಜ್ಯದ ಎಲ್ಲ ರೇಷನ್ ಅಂಗಡಿಗಳು ರಜೆ ದಿನಗಳಂದೂ ತೆರೆದಿರಬೇಕೆಂದು ತಿಳಿಸಿದರು

ರಾಜ್ಯದಲ್ಲಿ 10,94,160 ಅಂತ್ಯೋದಯ ಪಡಿತರ ಚೀಟಿಗಳು, 1,15,98,234 ಬಿಪಿಎಲ್ ಪಡಿತರ ಚೀಟಿಗಳು, ಹಾಗೂ 20,28,417 ಎಪಿಎಲ್ ಪಡಿತರ ಚೀಟಿಗಳು ಇವೆ. ಇನ್ನು ಪಡಿತರ ಚೀಟಿಗಾಗಿ ಒಟ್ಟು 2,40,862 ಅರ್ಜಿಗಳನ್ನು ಸಲ್ಲಿಸಿದ್ದು, ಪ್ರತಿಯೊಬ್ಬರಿಗೂ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಬಡವರಿಗೆ ಮಾತ್ರ ಬಿಪಿಎಲ್ ಕಾರ್ಡ್ ಸೌಲಭ್ಯವಿದ್ದು, ಸರಕಾರಿ ನೌಕರರು ಸೇರಿದಂತೆ ಅನುಕೂಲಸ್ಥರು ಬಿಪಿಎಲ್ ಹೊಂದಿದ್ದರೆ ಕೂಡಲೇ ವಾಪಸ್ ಮಾಡಬೇಕು. ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ವಾಸಪ್ ನೀಡಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳನ್ನು ಗುರುತಿಸುವಂತಹ ಪ್ರಕ್ರಿಯೆ ಚಾಲನೆಯಲ್ಲಿದ್ದು, ಈಗಾಗಲೇ ಒಂದು ಲಕ್ಷ ಕಾರ್ಡ್‌ಗಳನ್ನು ವಾಪಸ್ ಪಡೆಯಲಾಗಿದೆ. ಹಾಗೂ 96 ಲಕ್ಷ ರೂ.ದಂಡವನ್ನು ವಸೂಲಿ ಮಾಡಲಾಗಿದೆ. ಈಗ ಪಡಿತರಚೀಟಿಗಳಿಗೆ ಆಧಾರ್ ಜೋಡಣೆಯಾದ ನಂತರ ಮತ್ತಷ್ಟು ಅನರ್ಹ ಬಿಪಿಎಲ್ ಕಾರ್ಡ್‌ಗಳು ಬೆಳಕಿಗೆ ಬರಲಿವೆ. ಆ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ 460 ಮಠಗಳು ಸೇರಿದಂತೆ ಖಾಸಗಿ ಸಂಘ ಸಂಸ್ಥೆಗಳಿಗೆ ದವಸ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗೂ ರಾಜ್ಯ ಬಜೆಟ್‌ನಲ್ಲಿ ಅನ್ನ ಭಾಗ್ಯ ಯೋಜನೆಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗುವುದಿಲ್ಲವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ತಿಂಗಳಿನಿಂದ ಪಡಿತರ ಚೀಟಿದಾರರು ರಾಜ್ಯದ ಯಾವುದೇ ಭಾಗದಲ್ಲೂ ಪಡಿತರ ಪಡೆದುಕೊಳ್ಳಬಹುದಾದ ಅವಕಾಶವನ್ನು ಕಲ್ಪಿಸಲಾಗಿದೆ. ಕೂಲಿ ಕಾರ್ಮಿಕ ಕುಟುಂಬಗಳು ಕೆಲಸಕ್ಕಾಗಿ ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗುತ್ತಾರೆ. ಅವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಕೂಲಿಕಾರ್ಮಿಕರು ಒಳಗೊಂಡಂತೆ ಪಡಿತರ ಚೀಟಿಗಳನ್ನು ಹೊಂದಿರುವವರು ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಾದರು ಪಡಿತರವನ್ನು ಪಡೆಯುವಂತಹ ಸೌಲಭ್ಯವನ್ನು ಪಡೆಯಬಹುದಾಗಿದೆ.

-ಗೋಪಾಲಯ್ಯ, ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News