'ಕಪಿಲ್ ಮಿಶ್ರಾ ವಿಡಿಯೋ ನೋಡಿಲ್ಲ' ಎಂದ ಪೊಲೀಸರು: ಕೋರ್ಟ್ ನಲ್ಲೇ ಭಾಷಣದ ದೃಶ್ಯ ತೋರಿಸಿದ ಹೈಕೋರ್ಟ್

Update: 2020-02-26 10:37 GMT

ಹೊಸದಿಲ್ಲಿ: "ಹೊರಗೆ ವಾತಾವರಣ ಬಹಳ ಅಹಿತಕರವಾಗಿದೆ" ಎಂದು ಬುಧವಾರ ಹೇಳಿದ ದಿಲ್ಲಿ ಹೈಕೋರ್ಟ್, ದಿಲ್ಲಿ ಹಿಂಸಾಚಾರಕ್ಕೆ ಕಾರಣ ಎಂದು ನಂಬಲಾದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮತ್ತಿತರರು ಮಾಡಿರುವ ದ್ವೇಷದ ಭಾಷಣಗಳ ವೀಡಿಯೋ ಕ್ಲಿಪ್ ಅನ್ನು ಪರಿಶೀಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ. ವೀಡಿಯೋ ದೃಶ್ಯಾವಳಿಯನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರು ವೀಕ್ಷಿಸಿದರು.

ಕಪಿಲ್ ಮಿಶ್ರಾ ಅವರ ಭಾಷಣದ ವೀಡಿಯೋ ನೋಡಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದಾಗ "ದಿಲ್ಲಿ ಪೊಲೀಸರ ಪರಿಸ್ಥಿತಿ ಅಚ್ಚರಿ ಹುಟ್ಟಿಸುತ್ತದೆ, ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಟಿವಿ ಇದೆ ಎಂಬುದು ಖಂಡಿತ. ಅವರಿಗೆ ಈ ವೀಡಿಯೋ ನೋಡಲು ಹೇಳಿ'' ಎಂದು ನ್ಯಾಯಮೂರ್ತಿಗಳಾದ ಎಸ್ ಮುರಳೀಧರ್ ಹಾಗೂ ತಲವಂತ್ ಸಿಂಗ್ ಅವರ ಪೀಠ ತಿಳಿಸಿತು. ನಂತರ ವಿಡಿಯೋವನ್ನು ಪ್ಲೇ ಮಾಡಲಾಯಿತು. ದ್ವೇಷದ ಭಾಷಣ ಮಾಡಿದ ಅನುರಾಗ್ ಠಾಕುರ್, ಪರ್ವೇಶ್ ಸಾಹಿಬ್ ಸಿಂಗ್ ಹಾಗೂ ಕಪಿಲ್ ಮಿಶ್ರಾ ವಿರುದ್ಧ  ಎಫ್‍ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಸೂಚಿಸವಂತೆಯೂ ಸಾಲಿಸಿಟರ್ ಜನರಲ್ ಅವರಿಗೆ ನ್ಯಾಯಾಲಯ ತಿಳಿಸಿತು.

ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ``ಕೋರ್ಟ್ ಆದೇಶಕ್ಕೆ ಕಾಯದೆ ಪೊಲೀಸರು ಅವರಾಗಿಯೇ ಕ್ರಮ ಕೈಗೊಳ್ಳಬೇಕಿತ್ತು'' ಎಂದು ಹೇಳಿತು.

ಸಾಲಿಸಿಟರ್ ಜನರಲ್ ಹಾಗೂ ದಿಲ್ಲಿ ಸರಕಾರದ ವಕೀಲ ರಾಹುಲ್ ಮೆಹ್ತಾ ನಡುವೆ ಆಯುಕ್ತರನ್ನು ಪ್ರತಿನಿಧಿಸುವ ಕುರಿತಂತೆ ಕೋರ್ಟಿನಲ್ಲಿ ಬಿಸಿಯೇರಿದ ವಾಗ್ವಾದವೂ ನಡೆಯಿತು.

ದಿಲ್ಲಿ ಹಿಂಸಾಚಾರದ ನ್ಯಾಯಾಂಗ ತನಿಖೆ ಹಾಗೂ ದ್ವೇಷದ ಭಾಷಣ ನೀಡಿದ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅಪೀಲಿನ ಮೇಲಿನ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು.

ತರುವಾಯ ಸುಪ್ರೀಂ ಕೋರ್ಟ್ ಕೂಡ ದಿಲ್ಲಿ ಪೊಲೀಸರ ಕಾರ್ಯವೈಖರಿಯನ್ನು ಟೀಕಿಸಿ ಪೊಲೀಸರು ``ವೃತ್ತಿಪರತೆಯ'' ಕೊರತೆ ಎದುರಿಸುತ್ತಿದ್ದಾರೆ. ಹಿಂಸೆಗೆ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಂಡಿದ್ದರೆ ಹಿಂಸೆ ನಡೆಯುತ್ತಿರಲಿಲ್ಲ ಎಂದೂ  ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News