ಸರಿಯಾದ ಸಮಯದಲ್ಲಿ ದಿಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದರೆ ಜೀವಗಳನ್ನು ಉಳಿಸಬಹುದಾಗಿತ್ತು: ಸುಪ್ರೀಂ ತರಾಟೆ

Update: 2020-02-26 11:02 GMT

ಹೊಸದಿಲ್ಲಿ: "ಪ್ರಚೋದನಾತ್ಮಕ ಹೇಳಿಕೆ ನೀಡುವುದರಿಂದ ಕೆಲ ಜನರನ್ನು ಸರಿಯಾದ ಸಮಯದಲ್ಲಿ ಪೊಲೀಸರು ತಡೆದಿದ್ದರೆ, ದಿಲ್ಲಿಯಲ್ಲಿ ಹಿಂಸೆ ತಡೆಯಬಹುದಾಗಿತ್ತು ಹಾಗೂ ಹಲವಾರು ಜೀವಗಳನ್ನು ಉಳಿಸಬಹುದಾಗಿತ್ತು'' ಎಂದು ಹೇಳುವ ಮೂಲಕ  ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ ಎಂ ಜೋಸೆಫ್ ದಿಲ್ಲಿ ಪೊಲೀಸರನ್ನು ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂತಹ ಹೇಳಿಕೆ ಪೊಲೀಸರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಲು ಯತ್ನಿಸುತ್ತಿದ್ದಂತೆಯೇ ಅವರನ್ನು ತಡೆದ ನ್ಯಾಯಮೂರ್ತಿ ಜೋಸೆಫ್, "ನಾನು ಹೇಳುತ್ತೇನೆ'' ಎಂದರು.

"ದಿಲ್ಲಿ ಪೊಲೀಸರಲ್ಲಿ ವೃತ್ತಿಪರತೆಯ ಕೊರತೆ ಇಲ್ಲಿ ಪ್ರಮುಖ ಸಮಸ್ಯೆ, ಕಾನೂನಿನ ಆಧಾರದಲ್ಲಿಯೇ ವರ್ತಿಸಿದರೆ ನೀವು ವ್ಯತ್ಯಾಸವನ್ನು ಕಾಣಬಹುದಾಗಿದೆ'' ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು.

ದಿಲ್ಲಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆದಿರುವ ಘಟನೆಗಳು ದುರದೃಷ್ಟಕರ ಎಂದು ಜಸ್ಟಿಸ್ ಎಸ್ ಕೆ ಕೌಲ್ ಹೇಳಿದರು. ದುರದೃಷ್ಟಕರ ಪದ ಬಳಸಬೇಡಿ ಎಂದು ತುಷಾರ್ ಮೆಹ್ತಾ ಹೇಳಿದಾಗ "ದುರದೃಷ್ಟಕರವಲ್ಲವೆಂದು ಯಾರು ನಿರಾಕರಿಸುತ್ತಾರೆ? ನಡೆದಿರುವಂತಹ ಘಟನೆಗಳು ನಡೆಯಬಾರದಾಗಿತ್ತು'' ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.

ಅಸಮ್ಮತಿಯನ್ನು ಹಿಂಸೆಯ ರೂಪದಲ್ಲಿ ಪ್ರಕಟಿಸುವುದಕ್ಕೆ ಇಬ್ಬರು ನ್ಯಾಯಾಧೀಶರುಗಳೂ ವಿರೋಧಿಸಿದರು.

ದಿಲ್ಲಿಯ ಶಾಹೀನ್ ಬಾಗ್ ಪ್ರತಿಭಟನಾಕಾರರಿಂದಾಗಿ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಅವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಕೋರಿ ವಕೀಲ ಅಮಿತ್ ಸಾಹ್ನಿ ಸಲ್ಲಿಸಿದ್ದ ಅಪೀಲಿನ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಶಾಹೀನ್ ಬಾಗ್ ಪ್ರತಿಭಟನಾಕಾರರಿಗೆ ರಕ್ಷಣೆಯೊದಗಿಸಬೇಕೆಂದು ವಜಾಹತ್ ಹಬೀಬುಲ್ಲಾ ಹಾಗೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸಲ್ಲಿಸಿದ ಅಪೀಲಿನ ಕುರಿತಂತೆ ಯಾವುದೇ ಆದೇಶ  ನೀಡದ ಸುಪ್ರೀಂ ಕೋರ್ಟ್ ಈ ವಿಚಾರದ ಕುರಿತು ದಿಲ್ಲಿ ಹೈಕೋರ್ಟ್ ನೋಡಿಕೊಳ್ಳಬೇಕು ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News