ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಶಾಸಕ ಯತ್ನಾಳ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2020-02-26 14:13 GMT

ಬೆಂಗಳೂರು, ಫೆ.26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿಯವರನ್ನು ನಕಲಿ ಸ್ವಾತಂತ್ರ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಬುಧವಾರ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಬಿಬಿಎಂಪಿ ಸದಸ್ಯರು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದರು.

ದೊರೆಸ್ವಾಮಿಯವರನ್ನು ನಿಂದಿಸುವ ಮೂಲಕ ನಾಡಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಯತ್ನಾಳ್ ಅವಮಾನಿಸಿದ್ದಾರೆ. ದೇಶದ್ರೋಹಿ ಯತ್ನಾಳ್‌ರನ್ನು ರಾಜ್ಯ ಸರಕಾರ ಈ ಕೂಡಲೆ ಬಂಧಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಬಸನಗೌಡ ಪಾಟೀಲ್ ಯತ್ನಾಳ್ ಶಾಸಕರಾಗಿರಲು ಲಾಯಕ್ಕಾ ಅಥವಾ ನಾಲಾಯಕ್ಕಾ ಅನ್ನೋದನ್ನು ಜನ ತೀರ್ಮಾನಿಸುತ್ತಾರೆ. ದೊರೆಸ್ವಾಮಿ ಈ ವಯಸ್ಸಿನಲ್ಲೂ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಈಗಲೂ ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಯತ್ನಾಳ್‌ಗೆ ಮಾತನಾಡುವ ಹಕ್ಕು ಸಿಕ್ಕಿದ್ದು ಸಂವಿಧಾನದಿಂದ. ಆದರೆ, ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ನಂಬಿಕೆ ಇಲ್ಲ. ಶಾಸಕನಾಗಿ ಆಯ್ಕೆಯಾದ ಬಳಿಕ ಸಂವಿಧಾನದ ಮೇಲೆ ಪ್ರಮಾಣ ಮಾಡಿರುತ್ತಾರೆ. ಅಂತಹ ಸಂವಿಧಾನದ ಬಗ್ಗೆ ಯತ್ನಾಳ್ ಮಾತನಾಡುತ್ತಾರೆ. ಬಿಜೆಪಿಯವರು ಗೋಡ್ಸೆ ಸಂತತಿಗಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಇರಲು ಲಾಯಕ್ಕಿಲ್ಲ. ಈ ಕೂಡಲೆ ಅವರನ್ನು ಬಿಜೆಪಿ ನಾಯಕರು ಪಕ್ಷದಿಂದ ಹೊರಗೆ ಹಾಕಬೇಕು. ವಂಚನೆ ಸೇರಿ 23 ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ. ಗಾಂಧಿ ಬಗ್ಗೆ ಮಾತನಾಡುವ ಯತ್ನಾಳ್ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಹೇಳಲಿ ಎಂದರು.

ಯತ್ನಾಳ್ ಕ್ಷಮೆ ಕೇಳುವವರೆಗೆ ವಿಧಾನಸಭೆ ಕಲಾಪ ನಡೆಸಲು ಬಿಡಬಾರದು. ನಮಗೆ ಶಾಸಕ ಸ್ಥಾನ ಮುಖ್ಯ ಅಲ್ಲ. ದೇಶ, ಸಂವಿಧಾನ ಮುಖ್ಯ. ಸ್ವಾತಂತ್ರ್ಯ ಬಂದ ನಂತರ ಯತ್ನಾಳ್ ಶಾಸಕ ಆಗಿರುವುದು. ಆತನಿಗೆ ದೊರೆಸ್ವಾಮಿ, ನೆಹರು ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದು ಅವರು ಕಿಡಿಗಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆ. ಪಾಕ್ ಏಜೆಂಟ್ ಎಂದು ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ ದಿನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮ-ಧರ್ಮಗಳ ನಡುವೆ ಕೋಮುಗಲಭೆ ಸೃಷ್ಟಿಸುವ ಕೆಲಸವನ್ನು ಯತ್ನಾಳ್ ಮಾಡಿದ್ದಾರೆ. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಯತ್ನಾಳ್ ದೇಶದ್ರೋಹಿ ಹೇಳಿಕೆ ಕೊಟ್ಟಿರುವುದು ಇದೇ ಮೊದಲೇನಲ್ಲ. ದೊರೆಸ್ವಾಮಿಗೆ ಅವಮಾನ ಮಾಡಿರುವ ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಧರಣಿಯಲ್ಲಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ನಸೀರ್ ಅಹ್ಮದ್, ರಾಣಿ ಸತೀಶ್, ಎಚ್.ಎಂ.ರೇವಣ್ಣ, ಶಾಸಕರಾದ ಭೈರತಿ ಸುರೇಶ್, ಸೌಮ್ಯಾ ರೆಡ್ಡಿ, ಐವನ್ ಡಿಸೋಜಾ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸದನದಲ್ಲಿ ಹೋರಾಟ

ಇವತ್ತು ನಡೆಸಿರುವುದು ಸಾಂಕೇತಿಕ ಹೋರಾಟವಷ್ಟೇ. ಮಾ.2ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸದನದಲ್ಲಿ ಹೋರಾಟ ಮುಂದುವರೆಸಲಾಗುವುದು.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News