ಮಾನಸಿಕ ಸ್ಥಿಮಿತ ಕಳೆದುಕೊಂಡ ಯತ್ನಾಳ್‌ಗೆ ಚಿಕಿತ್ಸೆ ಅಗತ್ಯವಿದೆ: ವಿ.ಎಸ್.ಉಗ್ರಪ್ಪ

Update: 2020-02-26 14:16 GMT

ಬೆಂಗಳೂರು, ಫೆ.26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದು ಅವರ ವೈಯಕ್ತಿಕ ಹೇಳಿಕೆ ಅಲ್ಲ, ಬಿಜೆಪಿಯ ಒಟ್ಟಾರೆ ಮನಸ್ಥಿತಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆವರು, ಸ್ವಾತಂತ್ರ ಹೋರಾಟಗಾರರ ವಿರುದ್ಧ ಹೇಳಿಕೆ ನೀಡಿರುವ ಯತ್ನಾಳ್ ವಿರುದ್ಧ ಬಿಜೆಪಿ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಸಾಕ್ಷಿ ಎಂದು ದೂರಿದರು.

ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಂಚನೆ ಸೇರಿ 23 ಪ್ರಕರಣಗಳು ದಾಖಲಾಗಿವೆ. ಇಂತಹ ಓರ್ವ ವಂಚಕ, ಗಾಂಧಿವಾದಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಸಚಿವ ಸ್ಥಾನ ಸಿಗದೆ, ವಿವೇಚನೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಉಗ್ರಪ್ಪ ಹೇಳಿದರು.

ಹಲವು ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದ ಪ್ರತಿಫಲವಾಗಿ ದೇಶ ಸ್ವಾತಂತ್ರ್ಯ ಗಳಿಸಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದೆ ಬ್ರಿಟಿಷರಿಗೆ ಬೆಂಬಲ ನೀಡಿದ್ದು ಸಂಘಪರಿವಾರ. ಅದೆ ಪರಿವಾರದ ಸಿದ್ಧಾಂತದ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರು, ಮಹಾತ್ಮ ಗಾಂಧೀಜಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

ನಾವು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪೂಜ್ಯ ಭಾವನೆ ಇಟ್ಟುಕೊಂಡಿದ್ದೇವೆ. ಬಿಜೆಪಿ ಶಾಸಕ ಯತ್ನಾಳ್ ಅವರ ಹೇಳಿಕೆ ಸಮಸ್ತ ಭಾರತೀಯರ ಭಾವನೆಗೆ ಧಕ್ಕೆ ತಂದಿದೆ. ತಕ್ಷಣ ಅವರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ, ಇದುವರೆಗೂ ಕ್ರಮ ಕೈಗೊಳ್ಳದ ಬಿಜೆಪಿ ನಡೆಯನ್ನು ಖಂಡಿಸಿ ಇಂದು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಉಗ್ರಪ್ಪ ತಿಳಿಸಿದರು.

ಬಸನಗೌಡ ಪಾಟೀಲ ಯತ್ನಾಳ್ ಪ್ರಚಾರಕ್ಕಾಗಿ, ಗಲಭೆ ಸೃಷ್ಟಿಸುವ ಉದ್ದೇಶದಿಂದ ವಿವಾದಾತ್ಮಕ ಹೇಳಿಕೆ ನೀಡುವ ಚಾಳಿಯವರು. ಈ ಬಗ್ಗೆ ಯತ್ನಾಳ್ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೇಳಿಕೆ ನೀಡುವ, ಅವರನ್ನು ಅಪಮಾನಿಸುವ ಯಾವ ಕನಿಷ್ಠ ಯೋಗ್ಯತೆ, ನೈತಿಕತೆ ಅವರಿಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News