ಸಮಾನ ನಾಗರಿಕ ಸಂಹಿತೆ ಜಾರಿಗೆ ಕಾಲ ಪಕ್ವ: ಸಚಿವ ಸಿ.ಟಿ.ರವಿ

Update: 2020-02-26 14:37 GMT

ಬೆಂಗಳೂರು, ಫೆ. 26: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ವಿರೋಧಿಸುವ ನೆಪದಲ್ಲಿ ದೇಶದಲ್ಲಿ ಅಂತರ್‌ಯುದ್ಧಕ್ಕೆ ಜನರನ್ನು ಅಣಿಗೊಳಿಸುವ ಷಡ್ಯಂತ್ರ ನಡೆಸಲಾಗುತ್ತಿದೆ. ಅಲ್ಲದೆ, ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಇಂದಿಲ್ಲಿ ದೂರಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ತುಕ್ಡೆ ಗ್ಯಾಂಗ್‌ಗಳು ಈ ರೀತಿಯ ಷಡ್ಯಂತ್ರ ರೂಪಿಸಿದ್ದು, ದಿಲ್ಲಿಯ ಶಾಹೀನ್‌ ಬಾಗ್ ಪ್ರತಿಭಟನೆಯನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಕಾಲ ಪಕ್ವ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಕಾಲ ಪಕ್ವವಾಗಿದೆ. ನಾಗರಿಕ ಸಂಹಿತೆ ಜಾರಿಗೊಳಿಸಿದರೆ ಅದನ್ನು ಸ್ವೀಕರಿಸುವ ಮನೋಭಾವ ಜನರಲ್ಲಿ ಕಂಡು ಬರುತ್ತಿದೆ. ಎಲ್ಲ ಕಡೆ ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆಗಳು ಮೊಳಗುತ್ತಿವೆ ಎಂದು ಹೇಳಿದರು.

‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆ ಕೂಗುವುದು ಬಿಜೆಪಿಯವರ ಗುತ್ತಿಗೆ ಎಂದು ಟೀಕೆ ಮಾಡುತ್ತಿದ್ದವರಿಂದು ತ್ರಿವರ್ಣ ಧ್ವಜ ಹಿಡಿದು ಭಾರತ್ ಮಾತಾಕೀ ಜೈ ಎನ್ನುವ ಘೋಷಣೆ ಹಾಕುತ್ತಿದ್ದಾರೆ. ಇದನ್ನು ನೋಡಿದರೆ ಎಲ್ಲರಿಗೂ ಸಮಾನತೆ ಬೇಕೆಂಬುದು ಸ್ಪಷ್ಟ. ಹೀಗಾಗಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರಬೇಕಿದೆ ಎಂದು ಪ್ರತಿಪಾದಿಸಿದರು.

ಬಾಂಗ್ಲಾದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಪೌರತ್ವ ನೋಂದಣಿ ಅಭಿಯಾನ ನಡೆಸಲು ಕೇಂದ್ರ ಮುಂದಾಗಿದೆ ಎಂದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟದ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ದಿಲ್ಲಿ ಹಿಂಸಾಚಾರಕ್ಕೆ 15ಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದು ದುರದೃಷ್ಟಕರ. ಈ ಕೃತ್ಯದ ಹಿನ್ನೆಲೆ ಈ ಕುರಿತು ಸತ್ಯಾಸತ್ಯತೆ ಅರಿಯಲು ಸಮಗ್ರ ತನಿಖೆಯ ಅಗತ್ಯವಿದೆ ಎಂದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಕೊಡುವುದೇ ಆಗಿದೆ. ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ಘಾನಿಸ್ತಾನಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವವರಿಗೆ ಪೌರತ್ವ ನೀಡಲು ಕಾಯ್ದೆ ಜಾರಿಗೆ ತರಲಾಗಿದೆ ಎಂದ ಅವರು, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಪ್ರಧಾನಿ ಮೋದಿ ಸರಕಾರ ಅಸ್ಥಿರಗೊಳಿಸುವ ಷಡ್ಯಂತ್ರದ ಭಾಗವಾಗಿ ಹಾಗೂ ದೇಶದ ಅಖಂಡತೆಗೆ ಧಕ್ಕೆ ತರಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿ ಸಂದರ್ಭದಲ್ಲೆ ಅಂತರ್‌ರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಪ್ರತಿಭಟನೆ ನೆಪದಲ್ಲಿ ಹಿಂಸಾಚಾರ ನಡೆಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಆಕ್ಷೇಪ: ಅಕ್ರಮ ನುಸುಳುಕೋರರೇ ಬೇರೆ, ಧಾರ್ಮಿಕ ನಿರಾಶ್ರಿತರೇ ಬೇರೆ. ನುಸುಳುಕೋರರು ದೇಶದ ಆಂತರಿಕ ಭದ್ರತೆಗೆ ಮಾರಕ. ಆದರೆ, ಇವರಿಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುವ ಕ್ರಮ ಸರಿಯಲ್ಲ. ಸಿಎಎ ವಿರೋಧಿ ನೆಪದಲ್ಲಿ ಪಾಕ್ ಪರ ಘೋಷಣೆ ಕೂಗಲಾಗುತ್ತಿದೆ ಎಂದು ಟೀಕಿಸಿದರು.

‘ಜಗತ್ತಿನ ಐದನೆ ಆರ್ಥಿಕ ಶಕ್ತಿಯಾಗಿ ಭಾರತ ಬದಲಾಗುತ್ತಿದೆ. ನೋಟು ರದ್ದತಿ ಮತ್ತು ಜಿಎಸ್ಪಿ ಜಾರಿಯಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯಲಿದೆ ಎಂಬ ಅರಿವು ಮೊದಲೇ ಇತ್ತು. ಇನ್ನು ಎರಡು ವರ್ಷಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ’

-ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News