ಹೆಚ್ಚುವರಿ ಅನುದಾನ ನೀಡಿ: ಲಲಿತಕಲಾ ಅಕಾಡೆಮಿ ಅಧ್ಯಕ್ಷರ ಮನವಿ

Update: 2020-02-26 15:08 GMT

ಬೆಂಗಳೂರು, ಫೆ.26: ರಾಜ್ಯ ಸರಕಾರದ ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಅಕಾಡೆಮಿಗೆ ಹೆಚ್ಚುವರಿ ಅನುದಾನ ನೀಡಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಮನವಿ ಮಾಡಿದರು.

ಬುಧವಾರ ನಗರದ ಕನ್ನಡ ಭವನ ಲಲಿತಕಲಾ ಅಕಾಡೆಮಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಅವರು ಮಾತನಾಡಿದರು.

2019ನೇ ಸಾಲಿನಲ್ಲಿ ಅಕಾಡೆಮಿಗೆ 80 ಲಕ್ಷ ರೂ.ಅನುದಾನ ಬಂದಿತ್ತು. ನಾನು ಅಧಿಕಾರಕ್ಕೆ ಬರುವ ಹೊತ್ತಿಗೆ ಅರ್ಧದಷ್ಟು ಹಣವೂ ಖಾಲಿಯಾಗಿತ್ತು. ಇದರಿಂದ ಅಕಾಡೆಮಿ ಕಾರ್ಯ ಚಟುವಟಿಕೆಗಳಲ್ಲಿ ತೊಡಕು ಉಂಟಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಸರಕಾರವು 1 ಕೋಟಿಗೂ ಅಧಿಕ ಹೆಚ್ಚುವರಿ ಅನುದಾನ ನೀಡಿದರೆ, ಕಾರ್ಯಯೋಜನೆಗಳು ಚುರುಕುಗೊಳ್ಳಲಿದೆ ಎಂದರು.

ಲಲಿತಕಲಾ ಕಲಾಕೃತಿಗಳನ್ನು ಪ್ರಸ್ತುತ ಸಾಲಿನಿಂದಲೇ ರಾಜ್ಯ ಸರಕಾರದ ಅಧಿಕೃತ ವೆಬ್ ಸೈಟ್ ಕಣಜದಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ, ಕಲಾಕೃತಿ ಪ್ರದರ್ಶನಕ್ಕೆ ಪ್ರತ್ಯೇಕ ಆ್ಯಪ್ ಮಾಡಲಾಗುವುದು ಎಂದ ಅವರು, ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರೀಯ ಕಲಾ ಹಬ್ಬ ಆಯೋಜನೆಗೆ 40 ಲಕ್ಷ ರೂ. ಅನುದಾನ ನೀಡುವಂತೆ ಸರಕಾರ ಮತ್ತು ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಕಾಡೆಮಿ ರಿಜಿಸ್ಟ್ರರ್ ಬಸವರಾಜ ಹೂಗಾರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

‘ಅಂಗನವಾಡಿಗೆ ಕಲಾ ಶಿಕ್ಷಕರು’

ರಾಜ್ಯ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಕಲಾವಿದರನ್ನು ನೇಮಿಸಿ, ಕಲಾಶಿಕ್ಷಣ ನೀಡುವ ಸಂಬಂಧ ಗಂಭೀರ ಚರ್ಚೆ ನಡೆದಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.

-ಡಿ.ಮಹೇಂದ್ರ, ಅಧ್ಯಕ್ಷ, ಕರ್ನಾಟಕ ಲಲಿತಕಲಾ ಅಕಾಡೆಮಿ

ಪ್ರಶಸ್ತಿ ಪ್ರಕಟ

ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಸ್ತುತ ಸಾಲಿನ ಗೌರವ ಪ್ರಶಸ್ತಿ ಹಾಗೂ 48ನೆ ವಾರ್ಷಿಕ ಕಲಾ ಬಹುಮಾನ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ಹಿರಿಯ ಕಲಾವಿದರಾದ ಪ್ರಕಾಶ ಗಡ್ಕರ್(ಕಲಬುರ್ಗಿ), ಬಿ.ಆರ್.ಕೊರ್ತಿ(ದಾವಣಗೆರೆ), ಜಿ.ಎಂ.ಹೆಗಡೆ ತಾರಗೋಡ (ಶಿರಸಿ) ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ತಲಾ 50 ಸಾವಿರ ನಗದು, ಸ್ಮರಣಿ ಪ್ರಶಸ್ತಿ ಒಳಗೊಂಡಿದೆ.

ಬಹುಮಾನ

48ನೇ ವಾರ್ಷಿಕ ತಲಾ ಬಹುಮಾನಕ್ಕೆ ಓಂಕಾರ ಕಲ್ಲಪ್ಪಮೇತ್ರೆ (ಬೀದರ್), ತಿಪ್ಪಣ್ಣ ಎಸ್.ಪೂಜಾ(ಕಲಬುರ್ಗಿ), ಎಂ.ಎಸ್.ಲಿಂಗಾರಾಜು (ಚಿಕ್ಕಮಗಳೂರು), ವಿನಾಯಕ ರಾ.ಚಿಕ್ಕೋಡಿ (ಮಹಾಲಿಂಗಪೂರ), ಭರತ ಎಂ.ಲದ್ದಿಯವರ (ಧಾರವಾಡ)

ಕೆ.ಎಸ್.ಬಸವರಾಜು(ತುಮಕೂರು), ಶಿವಕಾಂತ ಶೇಖರ(ಬೆಂಗಳೂರು), ವಿನಾಯಕ ಎನ್. ಹೊಸೂರ (ಬಾಗಲಕೋಟ), ವಿಜಯ ಎಸ್. ನಾಗವೇಕರ್(ಬೆಂಗಳೂರು), ಗಣೇಶ್‌ಪಿ. ದೊಡ್ಡಮನಿ(ಬೆಂಗಳೂರು) ಆಯ್ಕೆಯಾಗಿದ್ದು, ತಲಾ 25 ಸಾವಿರ ನಗದು ಬಹುಮಾನ ಒಳಗೊಂಡಿದೆ.

ಮಾ.21ರ ಸಂಜೆ 5ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಲಲಿತಕಲಾ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News