ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ‘ಪಾಸ್‌ಪೋರ್ಟ್ ಸೇವಾ ಕೇಂದ್ರ’: ಕೇಂದ್ರ ಸಚಿವ ಮುರಳೀಧರನ್

Update: 2020-02-26 15:19 GMT

ಬೆಂಗಳೂರು, ಫೆ. 26: ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಕೇಂದ್ರ ಸರಕಾರ ರಾಜ್ಯಗಳೊಂದಿಗೆ ಕೈಜೋಡಿಸುವ ಮೂಲಕ ವಿದೇಶ ಯಾತ್ರೆ ಅಥವಾ ವಿದೇಶಿಗರ ಆಗಮನದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಭರವಸೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಮತ್ತು ಕಾನೂನಾತ್ಮಕ ವಲಸೆ, ಪಾಸ್‌ಪೋರ್ಟ್ ಸೇವೆಗಳು, ಭಾರತೀಯ ಸಂಜಾತರ ಒಳಗೊಳ್ಳುವಿಕೆ ಮತ್ತು ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದ ವಿದೇಶಿ ಸಂಪರ್ಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘ಉದ್ಯೋಗ, ಶಿಕ್ಷಣ ಹಾಗೂ ವ್ಯವಹಾರ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ವಿದೇಶಗಳಲ್ಲಿ 3 ಕೋಟಿಗೂ ಹೆಚ್ಚು ಭಾರತೀಯರು ನೆಲೆಸಿ ಉನ್ನತ ಹುದ್ದೆಗಳಲ್ಲಿ ಹೆಸರು ಮಾಡಿದ್ದಾರೆ. ದೇಶಕ್ಕೆ ಅನೇಕ ಕಾರಣಗಳಿಗಾಗಿ ತೆರಳುವ ಭಾರತೀಯರಿಗಾಗಿ ಅನುಕೂಲವಾಗುವಂತೆ ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರಕಾರಗಳ ಸಹಯೋಗ ಅಗತ್ಯ ಎಂದರು.

ಕೇಂದ್ರ ಸರಕಾರ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸರಳೀಕರಿಸಿ, ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶದಿಂದ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅತ್ಯುತ್ತಮ ಪ್ರತಿಭೆಗಳನ್ನು ನೀಡಿದ ಕೀರ್ತಿ ಪಡೆದ ರಾಜ್ಯವಾಗಿದೆ ಎಂದು ಅವರು ಶ್ಲಾಘಿಸಿದರು.

ಸರಳೀಕರಣ: ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಸರಳೀಕರಿಸಲು ವಿದೇಶಾಂಗ ಸಚಿವಾಲಯ ಮೊಬೈಲ್ ಆಪ್‌ನ್ನು ಹೊರತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ವೀಸಾಕ್ಕೆ ಸಂಬಂಧಿಸಿದಂತೆ 170 ದೇಶಗಳೊಂದಿಗೆ ಈ-ವೀಸಾ ಸೇವೆಯನ್ನು ಆರಂಭಿಸಿದ್ದು, ಇದರಿಂದ ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಅನುಕೂಲಕರ ಆಗಲಿದೆ ಎಂದು ಅವರು ತಿಳಿಸಿದರು.

ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಭಾರತೀಯರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈಗಾಗಲೇ ದಿನದ 24ಗಂಟೆ ಕಾರ್ಯನಿರ್ವಹಿಸುವ ಕಾಲ್‌ಸೆಂಟರ್ ತೆರೆಯಲಾಗಿದ್ದು, ವಿದೇಶಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ನೆಲೆಸಿರುವ ಭಾರತೀಯರು ಅಲ್ಲಿನ ರಾಯಭಾರಿ ಕಚೇರಿಗಳಲ್ಲಿ ನೋಂದಾಯಿಸುವ ಜವಾಬ್ದಾರಿ ಮರೆಯಬಾರದು ಎಂದು ತಿಳಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ವಿದೇಶಿ ಪ್ರಯಾಣಗಳಿಗೆ ಸಂಬಂಧಿಸಿದಂತೆ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತರಬೇಕಾದ ಅವಶ್ಯಕತೆ ಇದೆ. ಅತ್ಯಂತ ಹೆಚ್ಚು ಅನಿವಾಸಿ ಭಾರತೀಯರು ಇರುವ ರಾಜ್ಯ ನಮ್ಮದಾಗಿದ್ದು, ಒಟ್ಟಾರೆಯಾಗಿ ಈಗಿರುವ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು ಎಂದರು.

ಕರ್ನಾಟಕದವರು ಅಮೆರಿಕಾ ದೇಶದ ವೀಸಾ ಪಡೆಯಲು ಚೆನ್ನೈನಲ್ಲಿರುವ ಅಮೆರಿಕಾ ಎಂಬೆಸ್ಸಿಯ ಕಚೇರಿಗೆ ಅಲೆದಾಡಬೇಕಾಗಿದ್ದು, ಅವರ ವೀಸಾ ನೀಡುವ ಕಚೇರಿಯನ್ನು ಬೆಂಗಳೂರಿನಲ್ಲಿಯೇ ಆರಂಭಿಸಲು ಕ್ರಮಕೈಗೊಳ್ಳುವಂತೆ ಕೇಂದ್ರ ಸಚಿವ ಮುರಳೀಧರನ್ ಅವರಿಗೆ ಮನವಿ ಮಾಡಿದರು.

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್ ಮಾತನಾಡಿ, ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪಾಸ್‌ಪೋರ್ಟ್ ಪಡೆಯುವಾಗ ಇದ್ದ ಪೊಲೀಸ್ ಪರಿಶೀಲನೆಯನ್ನು ಆನ್‌ಲೈನ್‌ಗೊಳಿಸಿ ಪ್ರತಿ ಪೊಲೀಸ್ ಸ್ಟೇಷನ್‌ಗೆ ಟ್ಯಾಬ್ ನೀಡಲಾಗಿದೆ ಎಂದರು.

ಈ ಹಿಂದೆ ಪೊಲೀಸ್ ಇಲಾಖೆಗೆ ಪಾಸ್‌ಪೋರ್ಟ್ ಪಡೆಯುತ್ತಿರುವವರ ಪರಿಶೀಲನೆ ನಡೆಸಿ ವರದಿ ನೀಡಲು ಕನಿಷ್ಟ 30 ದಿನಗಳು ಬೇಕಾಗಿತ್ತು, ಆನ್‌ಲೈನ್ ವ್ಯವಸ್ಥೆ ಬಳಿಕ ಕೇವಲ 8-10 ದಿನಗಳಲ್ಲಿ ಪರಿಶೀಲನೆ ಪೂರ್ಣಗೊಳ್ಳಲಿದೆ. ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

‘ವಿದೇಶಿದಲ್ಲಿ ಭಾರತೀಯರು ಮರಣ ಹೊಂದಿದಾಗ ಅವರ ಶವವನ್ನು ತಾಯ್ನಾಡಿಗೆ ತರುವುದು ಅತ್ಯಂತ ಕ್ಲಿಷ್ಟಕರ. ಈ ಕುರಿತಂತೆ ವಿದೇಶಗಳೊಂದಿಗೆ ಚರ್ಚಿಸಿ ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರಳೀಕರಿಸಬೇಕು. ವಿದೇಶಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳಿದ್ದು ಈ ಬಗ್ಗೆ ಕೇಂದ್ರ ಗಮನಹರಿಸಬೇಕು. ಎರಡನೆ ದರ್ಜೆ ಪ್ರಜೆಗಳಾಗಿ ನೋಡುತ್ತಿರುವ ಮನೋಭಾವ ಅತ್ಯಂತ ಕೆಟ್ಟದ್ದು.’

-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News