ನಿಗದಿತ ಸಮಯದೊಳಗೆ ತೆರಿಗೆ ಸಂಗ್ರಹಕ್ಕೆ ಸಚಿವ ನಾರಾಯಣಗೌಡ ಸೂಚನೆ

Update: 2020-02-26 16:41 GMT

ಬೆಂಗಳೂರು, ಫೆ.26: ಮುನ್ಸಿಪಲ್ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ತುಂಬಾ ನಿಧಾನಗತಿಯಲ್ಲಿದ್ದು, ಸಾಕಷ್ಟು ವರ್ಷಗಳಿಂದ ಕೆಲವರು ತೆರಿಗೆ ಬಾಕಿ ಉಳಿಸಿಕೊಂಡಿರುವುದಕ್ಕೆ ಅಧಿಕಾರಿಗಳೆ ನೇರ ಹೊಣೆ ಎಂದು ಪೌರಾಡಳಿತ ಹಾಗೂ ರೇಷ್ಮೆ ಸಚಿವ ಡಾ.ನಾರಾಯಣಗೌಡ ಎಚ್ಚರಿಕೆ ನೀಡಿದರು.

ಬುಧವಾರ ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಐಎಎಸ್ ಅಸೋಸಿಯೇಷನ್ ಸಭಾಂಗಣದಲ್ಲಿ ತೋಟಗಾರಿಕೆ, ರೇಷ್ಮೆ ಹಾಗೂ ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಾಲಮಿತಿಯಲ್ಲಿ ತೆರಿಗೆ ಸಂಗ್ರಹ ಕಾರ್ಯ ಪೂರ್ಣಗೊಳ್ಳಬೇಕು. ಬಾಕಿ ಇರುವ ತೆರಿಗೆಯನ್ನು ಶೀಘ್ರದಲ್ಲೆ ಸಂಗ್ರಹ ಮಾಡಬೇಕು ಎಂದು ಸೂಚನೆ ನೀಡಿದರು.

ಪೌರಾಡಳಿತ ಇಲಾಖೆಯಲ್ಲಿ ಬಾಕಿಯಿರುವ ಕೆಲಸ ತಕ್ಷಣ ಮುಗಿಸಬೇಕು. ಪ್ಲಾಸ್ಟಿಕ್ ಸಮಸ್ಯೆ ಕೂಡ ಹೆಚ್ಚಾಗಿದೆ. ಈ ಬಗ್ಗೆ ತಕ್ಷಣವೆ ಕ್ರಮ ತೆಗೆದುಕೊಳ್ಳಬೇಕು. ಯುಜಿಡಿಗೆ ಪ್ಲಾಸ್ಟಿಕ್‌ನಿಂದ ಹೆಚ್ಚಿನ ತೊಂದರೆ ಆಗುತ್ತಿದೆ. ಪ್ಲಾಸ್ಟಿಕ್ ನಿಷೇಧ ಆದರೂ ಮಾರಾಟವಾಗುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಉತ್ಪಾದನೆ ಮಾಡುವುದನ್ನೆ ತಡೆಗಟ್ಟಬೇಕು ಎಂದು ಅವರು ಹೇಳಿದರು.

ರೇಷ್ಮೆ ಇಲಾಖೆಯಲ್ಲಿ ಪ್ರತಿ ವರ್ಷ ಮಾರುಕಟ್ಟೆ ಶುಲ್ಕ 35 ಕೋಟಿ ರೂ.ಸಂಗ್ರಹವಾಗುತ್ತಿದೆ. ಈವರೆಗೆ ಹಣಕಾಸು ಇಲಾಖೆಯಲ್ಲಿ ಸುಮಾರು 2.20 ಕೋಟಿ ರೂ. ಸಂಗ್ರಹ ಇದೆ. ಮಲಬಾರ್ ಟಿ ಉತ್ಪಾದನೆ ಹೆಚ್ಚಿಸಬೇಕು. ಇದು ಮದುಮೇಹಕ್ಕೆ ಉತ್ತಮ ಔಷಧ. ಇದಕ್ಕೆ ಹೆಚ್ಚಿನ ಪ್ರಚಾರ ನೀಡಿ, ಮಾರುಕಟ್ಟೆ ಸೃಷ್ಟಿಸಬೇಕು ಎಂದು ನಾರಾಯಣಗೌಡ ತಿಳಿಸಿದರು.

ಮೈಸೂರು ಸಿಲ್ಕ್ ಹೆಚ್ಚಿನ ಬೇಡಿಕೆ ಇದೆ, ಪ್ರತಿವರ್ಷ ಸುಮಾರು ಎರಡು ಲಕ್ಷ ರೇಷ್ಮೆ ಸೀರೆ ಬೇಡಿಕೆ ಇದೆ. ಆದರೆ, ಒಂದು ಲಕ್ಷ ಸೀರೆ ಮಾತ್ರ ಉತ್ಪಾದನೆ ಆಗುತ್ತಿದೆ. ಉತ್ಪಾದನೆ ಹೆಚ್ಚಿಸಲು ಬೇಕಾದ ವ್ಯವಸ್ಥೆ ಬಗ್ಗೆಯು ತಕ್ಷಣ ವರದಿ ನೀಡಿ. ಅಲ್ಲದೆ ರೇಷ್ಮೆಗೆ ಹೈಟೆಕ್ ಮಾರುಕಟ್ಟೆ ಸಿದ್ಧಪಡಿಸಬೇಕು ಮತ್ತು ರೇಷ್ಮೆ ಮೇಳ ಮಾಡಬೇಕು. ಈ ಬಗ್ಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ರೈತರಿಗಾಗಿ ಸರಕಾರ ನೀಡುವ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಯಾವುದೇ ರೀತಿಯ ಅವ್ಯವಹಾರ ನಡೆದಲ್ಲಿ, ನೇರವಾಗಿ ಅಧಿಕಾರಿಗಳನ್ನೆ ಹೊಣೆ ಮಾಡಲಾಗುವುದು. ಅಲ್ಲದೆ, ಅಧಿಕಾರಿಗಳು ಕಾಲ ಕಾಲಕ್ಕೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಬೇಕು ಎಂದು ನಾರಾಯಣಗೌಡ ಹೇಳಿದರು.

ಸಭೆಯಲ್ಲಿ ಪೌರಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಝ್, ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಕಠಾರಿಯಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News