ದಿಲ್ಲಿ: ಗಲಭೆ ಸೃಷ್ಟಿಗೆ ಯತ್ನಿಸಿದ ದುಷ್ಕರ್ಮಿಗಳನ್ನು ಓಡಿಸಿದ ಯಮುನಾವಿಹಾರದ ಹಿಂದೂ-ಮುಸ್ಲಿಮರು

Update: 2020-02-27 05:56 GMT

ಹೊಸದಿಲ್ಲಿ, ಫೆ.26: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಮಂಗಳವಾರ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಕೋಮು ಹಿಂಸೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು, ಕಳೆದ 34 ವರ್ಷಗಳಿಂದ ಈ ರೀತಿಯ ಕೋಮು ಉನ್ಮಾದದ ಪರಿಸ್ಥಿತಿಯನ್ನು ತಾವು ಕಂಡಿಲ್ಲ ಎಂದಿದ್ದಾರೆ.

ಹಲವು ವರ್ಷಗಳಿಂದ ಇಲ್ಲಿ ಹಿಂದು-ಮುಸ್ಲಿಮರು ಒಗ್ಗಟ್ಟಿನಿಂದ ಶಾಂತ ರೀತಿಯಲ್ಲಿ ಬದುಕುತ್ತಿದ್ದಾರೆ. ಈ ರೀತಿಯ ಹಿಂಸಾಚಾರ ಇಲ್ಲಿಗೆ ಹೊಸತಾಗಿದೆ. ಆದ್ದರಿಂದ ಹಿಂದು ಮುಸ್ಲಿಮರು ಜತೆಗೂಡಿ ಕೋಮುಶಕ್ತಿಗಳನ್ನು ಸೋಲಿಸಲು ಸಂಕಲ್ಪ ಮಾಡಿದ್ದೇವೆ ಎಂದು ಯಮುನಾ ವಿಹಾರ ಪ್ರದೇಶದ ನಿವಾಸಿಗಳು ಹೇಳಿದ್ದಾರೆ.

ಯಮುನಾ ವಿಹಾರ ಮಾರುಕಟ್ಟೆ ಪ್ರದೇಶಕ್ಕೆ ಬಂದು ಗಲಭೆ ಸೃಷ್ಟಿಸಲು ಯತ್ನಿಸಿದ್ದ ಹೊರಗಿನ ವ್ಯಕ್ತಿಗಳನ್ನು ಸ್ಥಳೀಯರು ಓಡಿಸಿದ್ದಾರೆ. ದೊಣ್ಣೆ ಮತ್ತು ಲಾಠಿ ಹಿಡಿದು ಸಜ್ಜಾಗಿರುವ ಸ್ಥಳೀಯರು ತಮ್ಮ ಪ್ರದೇಶವನ್ನು ಹೊರಗಿನ ವ್ಯಕ್ತಿಗಳ ಆಕ್ರಮಣದಿಂದ ರಕ್ಷಿಸಲು ಪಣ ತೊಟ್ಟಿದ್ದಾರೆ. ಹೊರಗಿನ ಸಮಾಜಘಾತುಕ ಶಕ್ತಿಗಳು ಕಾಲೊನಿಯ ಒಳ ನುಸುಳಿ ಗಲಭೆ ಸೃಷ್ಟಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯ ನಿವಾಸಿ ಮುಹಮ್ಮದ್ ಸಾಜಿದ್ ಹೇಳಿದ್ದಾರೆ.

ಒಗ್ಗಟ್ಟಿನಿಂದ ಮಾತ್ರ ವಿಭಜಕ ಶಕ್ತಿಗಳನ್ನು ಹಿಮ್ಮೆಟ್ಟಿಸಬಹುದು. ನಮ್ಮನ್ನು ವಿಭಜಿಸಲು ಪಣ ತೊಟ್ಟಿರುವ ಶಕ್ತಿಗಳ ವಿರುದ್ಧ ನಾವೆಲ್ಲಾ ಒಗ್ಗೂಡಿದ್ದೇವೆ ಎಂದು ಸ್ಥಳೀಯರಾದ ರೈಸುದ್ದೀನ್ ರೆಹಾನ್ ಮತ್ತು ರಾಹುಲ್ ಹೇಳಿದ್ದಾರೆ. ಈ ಮಧ್ಯೆ, ಹಿಂಸಾಚಾರವನ್ನು ಖಂಡಿಸಿ ಬ್ರಿಜ್‌ಪುರಿ ಪ್ರದೇಶದ ಹಿಂದು ಮತ್ತು ಮುಸ್ಲಿಮರು ಶಾಸ್ತ್ರಿ ಪಾರ್ಕ್‌ವರೆಗೆ ಸಂಯುಕ್ತ ರ್ಯಾಲಿಯನ್ನು ಆಯೋಜಿಸಿದ್ದಾರೆ ಎಂದು ವರದಿಯಾಗಿದೆ. ರ್ಯಾಲಿಯ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News