ನಕಲಿ ಆದೇಶ ಪತ್ರ ಸೃಷ್ಟಿ ಆರೋಪ: ಪ್ರಾಂಶುಪಾಲ, ಉಪನ್ಯಾಸಕನಿಗೆ ಜೈಲು ಶಿಕ್ಷೆ

Update: 2020-02-26 17:03 GMT

ಬೆಂಗಳೂರು, ಫೆ.26: ಪದವಿ ಪೂರ್ವ ಶಿಕ್ಷಣ ಇಲಾಖೆಯ ನಕಲಿ ಆದೇಶ ಸೃಷ್ಟಿಸಿ ಉದ್ಯೋಗಕ್ಕೆ ಮರು ಸೇರ್ಪಡೆಗೊಂಡಿದ್ದ ಪ್ರಕರಣ ಸಂಬಂಧ ಪ್ರಾಂಶುಪಾಲ, ಉಪನ್ಯಾಸಕನೋರ್ವನಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ, 10 ಸಾವಿರ ರೂ. ದಂಡ ವಿಧಿಸಿದೆ.

ಇಲ್ಲಿನ ಚಳ್ಳಕೆರೆಯ ಶ್ರೀ ರವೀಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಕರಿಬಸಪ್ಪ ಅನಗೋಡು ಮತ್ತು ಅದೇ ಕಾಲೇಜಿನ ಪ್ರಾಂಶುಪಾಲ ಎ.ವೆಂಕಟೇಶ್ ಎಂಬುವರು ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಇಬ್ಬರು ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಿಂದ ಹೊರಡಿಸಿದೆ ಎನ್ನಲಾದ ಎರಡು ನಕಲಿ ಆದೇಶಗಳನ್ನು ಸೃಷ್ಟಿಸಿ ಬೆಂಗಳೂರಿನ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ತಮ್ಮ ಕೆಲಸದಿಂದ ತೆಗೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ರೀತಿ, ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ, ಬಾಕಿ ವೇತನ ಪಾವತಿಸುವಂತೆ ವಾದಿಸಿದ್ದರು.

ರಿಟ್ ಅರ್ಜಿ ವಿಚಾರಣೆ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶಗಳು ನಕಲಿ ಎಂದು ಕಂಡು ಬಂದಿತ್ತು. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಘಟಕ, ಕರಿಬಸಪ್ಪ ಅನಗೋಡು ಹಾಗೂ ಮತ್ತೊಬ್ಬ ಆರೋಪಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದರೆ ಒಂದು ತಿಂಗಳು ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿದೆ ಎಂದು ಸಿಐಡಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News