ಚಲನಚಿತ್ರಗಳ ಸಂಖ್ಯೆಗಿಂತ ಗುಣಮಟ್ಟದತ್ತ ಗಮನ ಹರಿಸಿ: ಸಿಎಂ ಯಡಿಯೂರಪ್ಪ

Update: 2020-02-26 17:53 GMT

ಬೆಂಗಳೂರು, ಫೆ.26: ಚಲನಚಿತ್ರ ನಿರ್ಮಾಣ ಸಂಖ್ಯೆ ಹೆಚ್ಚಾಗಿದೆ. ಆದರೆ, ಗುಣಮಟ್ಟ ಇನ್ನಷ್ಟು ಸುಧಾರಿಸುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ನಗರದಲ್ಲಿ ಬುಧವಾರ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ 12ನೆ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಚಲನಚಿತ್ರಗಳ ಹೆಚ್ಚೆಚ್ಚು ಬರಲಿ ಎಂದು ಹೇಳಿದರು. ಸಿನಿಮಾ ಸಮಾಜದ ಪರಿಣಾಮಕಾರಿ ಮಾಧ್ಯಮವಾಗಿದ್ದು, ಉತ್ತಮ ಚಿತ್ರಗಳನ್ನು ನಿರ್ಮಿಸುವತ್ತ ಚಿತ್ರರಂಗ ಗಮನಹರಿಸಬೇಕು. ಖ್ಯಾತ ನಿರ್ದೇಶಕ ಸತ್ಯಜೀತ್ ರೇ ಅವರು ಭಾರತ ಚಲನಚಿತ್ರದ ಬೆಳವಣಿಗೆಯನ್ನು ಕನ್ನಡ ಚಲನಚಿತ್ರದ ಮೂಲಕ ನೋಡಬಹುದಾಗಿದೆ ಎಂದು ಹೇಳಿದ್ದರು. ಕನ್ನಡ ಚಿತ್ರರಂಗದ ಬೆನ್ನೆಲುಬಾಗಿ ಸರಕಾರ ನಿಮ್ಮ ಜೊತೆಯಲ್ಲಿದೆ. ಕನ್ನಡ ಚಲನಚಿತ್ರ ಮಂಡಳಿಯ ಅಧ್ಯಕ್ಷರ ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಹಿಂದಿ ಚಲನಚಿತ್ರ ರಂಗದ ಹಿರಿಯ ನಿರ್ಮಾಪಕ ಬೋನಿ ಕಪೂರ್ ಮಾತನಾಡಿ, ನಾನು ನನ್ನ ಮೊದಲ ಸಿನಿಮಾ ಹಮ್ ಪಾಂಚ್ ಚಿತ್ರೀಕರಿಸಿದ್ದು ಮೇಲುಕೋಟೆಯಲ್ಲಿ. ಕರ್ನಾಟಕಕ್ಕೆ ನಾನು ಚಿರಋಣಿ, ನಾನು ಅಲ್ಲಿ ಚಿತ್ರೀಕರಿಸಿದ ಮೇಲೆ ಆ ಸ್ಥಳ ಪರಿಚಯವಾಗಿ ಮುಂದೆ ಅನೇಕ ಚಲನಚಿತ್ರಗಳನ್ನು ಚಿತ್ರೀಕರಿಸಲಾಯಿತು ಎಂದು ತಮ್ಮ ಹಾಗೂ ಕನ್ನಡದ ಸಂಬಂಧವನ್ನು ನೆನೆಯುತ್ತಾ ಒಂದೆರೆಡು ಕನ್ನಡ ಪದಗಳನ್ನು ಸಹ ನೆನಪಿಸಿಕೊಂಡರು.

ಹಿರಿಯ ಬಹುಭಾಷ ನಟಿ ಜಯಪ್ರದ ಅವರು ಮಾತನಾಡಿ, ಕನ್ನಡದಲ್ಲಿ ಮಾತು ಆರಂಭಿಸಿ, ಕನ್ನಡ ಭಾಷೆ ನಾಡು ನುಡಿ ನನಗೆ ತುಂಬಾ ಇಷ್ಟ, ಡಾ.ರಾಜಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಮೂಲಕ ನಾನು ಚಿತ್ರರಂಗ ಪ್ರವೇಶಿಸಿದ್ದು, ಹಿರಿಯ ನಟರ ಹಾಗೂ ತಂತ್ರಜ್ಞರ ಸಹಾಯದಿಂದ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದು, ಭಾರತೀಯ ಅನೇಕ ಭಾಷೆಗಳಲ್ಲಿ 290ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಇಲ್ಲಿಯವರೆಗೆ ಅಭಿನಯಿಸಿದ್ದೇನೆ. ಇಂದು ನಾವು ಹಾಲಿವುಡ್ ಸಿನಿಮಾಗಳೊಂದಿಗೆ ಸ್ಪರ್ಧಿಸುತ್ತಿದ್ದು, ಇತ್ತೀಚಿಗೆ ಬಿಡುಗಡೆಯಾದ ಯಶ್ ಅವರ ಸಿನಿಮಾ ಇದಕ್ಕೆ ನಿದರ್ಶನವಾಗಿದೆ ಎಂದು ಕೆ.ಜಿ.ಎಫ್ ಸಿನಿಮಾದ ತಾಂತ್ರಿಕ ಗುಣಮಟ್ಟವನ್ನು ಕೊಂಡಾಡಿದರು.

ಖ್ಯಾತ ಬಹುಭಾಷಾ ಚಲನಚಿತ್ರ ಗಾಯಕ ಸೋನು ನಿಗಮ್ ಮಾತನಾಡಿ, ತಮಗೆ ಗೊತ್ತಿರುವಷ್ಟು ಕನ್ನಡದಲ್ಲಿ ಮಾತನಾಡುವ ಮನಸ್ಸಿದ್ದರು ಸಹ ಇದೊಂದು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವವಾಗಿರುವುದರಿಂದ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತೇನೆ, ಬಹುಶಃ ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿರಬೇಕು ಎಂದು ಭಾವುಕರಾದ ಅವರು ತಮ್ಮ ಹಾಡುಗಾರಿಕೆಗೆ ಕನ್ನಡ ಚಲನಚಿತ್ರ ವೇದಿಕೆಯಾಗಿದ್ದು, ನನ್ನ ಜೀವನ ಕಟ್ಟಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಮುಂಗಾರು ಮಳೆ ಚಲನಚಿತ್ರದ ಅವರ ಹಾಡು 'ಅನಿಸುತಿದೆ ಯಾಕೆ ಇಂದು' ಹಾಡುವ ಮೂಲಕ ಚಲನಚಿತ್ರೋತ್ಸವಕ್ಕೆ ಶುಭ ಕೋರಿದರು.

ನಟ ಯಶ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ನನ್ನನ್ನು ಸಿನಿಮಾ ಆವರಿಸಿಕೊಂಡಿತು, ಸಿನಿಮಾ ಜೀವನ ಕೊಟ್ಟಿದೆ, ಅಂತಹ ಸಿನಿಮೋತ್ಸವಕ್ಕೆ ನಾವೆಲ್ಲ ಸೇರಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಸಿನಿಮಾ ರಂಗಕ್ಕಾಗಿ ಸ್ಟುಡಿಯೋ ಕಟ್ಟಿಸಿಕೊಡಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಅವರು ಅದಕ್ಕೆ ಪ್ರತಿಯಾಗಿ ಇನ್ನೂ ಹೆಚ್ಚಿನ ಟ್ಯಾಕ್ಸ್ ರೂಪದಲ್ಲಿ ಚಲನಚಿತ್ರರಂಗ ನೀಡಲಿದೆ, ಅನೇಕ ಸಿನಿಮಾಸಕ್ತ ಯುವಕರಿಗಾಗಿ ಸ್ಟುಡಿಯೋ ಅಗತ್ಯವಿದೆ ಎಂದು ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ, ಖಾಸಗಿಯಾಗಿ ನಡೆಯುತ್ತಿದ್ದ ಈ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸರಕಾರದಿಂದ ಆಚರಿಸಲು ಆರಂಭಿಸಿದ್ದು ಮತ್ತು ಅಕಾಡೆಮಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದವರು ಮುಖ್ಯಮಂತ್ರಿ ಯಡಿಯೂರಪ್ಪನವರು ಎಂದು ಸ್ಮರಿಸಿಕೊಂಡರು.

ಅಕಾಡೆಮಿಯಿಂದ ಚಲನಚಿತ್ರಕ್ಕೆ ಸಂಬಂಧಿಸಿದ ಮ್ಯೂಸಿಯಂ ಸ್ಥಾಪನೆ ಸೇರಿದಂತೆ ಕಥೆಗಳ ಲೈಬ್ರರಿ, ಅಕಾಡೆಮಿ ಕಟ್ಟಡದಲ್ಲಿ ಸಿನಿಮಾ ಸಂಕೀರ್ಣ ಸೇರಿದಂತೆ ಅನೇಕ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಐದು ಕೋಟಿ ನೀಡಿದ್ದಾರೆ ಎಂದು ತಿಳಿಸಿದರು.

ಚಲನಚಿತ್ರ ರಂಗದ ಕಲಾವಿದರಿಗೆ ಪಿಂಚಣಿ ಸೇರಿದಂತೆ ಬಡ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವ ಯೋಜನೆಗಳನ್ನು ಜಾರಿಗೆ ತರಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷ ಜಯರಾಜ್ ಮಾತನಾಡಿ, ಚಲನಚಿತ್ರರಂಗಕ್ಕೆ ಮುಖ್ಯಮಂತ್ರಿಗಳ ಕೊಡುಗೆಯನ್ನು ಅಭಿನಂದಿಸಿದರು. ಮಂಡಳಿಯ 75ನೇ ವರ್ಷಕ್ಕೆ ಆರ್ಥಿಕ ನೆರವು, ಜಿ.ಎಸ್.ಟಿ ಮತ್ತು ಸಿನಿಮಾ ಸಿಟಿಯ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News