ಪ್ರಧಾನಿ ಮೋದಿ ಕಟ್ಟಿದ ಗೋಡೆ ಭಾರತದ ಮಾನ ಕಾಪಾಡಲಿಲ್ಲ

Update: 2020-02-27 07:26 GMT

ಟ್ರಂಪ್ ಸ್ವಾಗತಕ್ಕಾಗಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಕಟ್ಟಿದ ಗೋಡೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಹ್ಮದಾಬಾದ್‌ನ ದಾರಿಯುದ್ದಕ್ಕೂ ಹರಡಿಕೊಂಡಿರುವ ಕೊಳೆಗೇರಿಗಳು ಟ್ರಂಪ್ ಕಣ್ಣಿಗೆ ಬಿದ್ದು ಭಾರತದ ಮಾನ ಹರಾಜಾಗಬಾರದು ಎನ್ನುವ ಮುನ್ನೆಚ್ಚರಿಕೆಯಿಂದ ರಸ್ತೆಯುದ್ದಕ್ಕೂ ಗೋಡೆಯನ್ನು ಕಟ್ಟಿ ್ನ ಮೋದಿ ಮರೆ ಮಾಡಿದ್ದರು. ಆ ಗೋಡೆ ಕಟ್ಟುವ ಹಣದಲ್ಲಿ ಇಡೀ ಕೊಳೆಗೇರಿಯ ಜನರ ಬದುಕನ್ನೇ ಉದ್ಧರಿಸಬಹುದು ಎನ್ನುವ ಸಲಹೆಯೂ ವ್ಯಾಪಕವಾಗಿ ಕೇಳಿ ಬಂದಿತ್ತು. ಇಷ್ಟಾದರೂ ಮೋದಿ ಕಟ್ಟಿದ ಗೋಡೆಗೆ ಭಾರತದ ಮಾನವನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಅಮೆರಿಕದ ‘ದೊಡ್ಡಣ್ಣ’ ಭಾರತದಲ್ಲಿರುವಾಗಲೇ, ಈ ದೇಶದ ಬಹುದೊಡ್ಡ ಕೊಳೆಗೇರಿಯೊಂದನ್ನು ಭಾರತ ಪ್ರದರ್ಶನಕ್ಕಿಟ್ಟಿತು. ಭಾರತದ ವೈವಿಧ್ಯತೆಯನ್ನು ಅಳಿಸಿ, ಅಲ್ಲಿ ದ್ವೇಷ ಬಿತ್ತಿ ಕಟ್ಟಿ ನಿಲ್ಲಿಸಿದ ಕೊಳೆಗೇರಿ ಅದು. ದಿಲ್ಲಿಯ ಹಿಂಸಾಚಾರ, ಈ ದೇಶದ ಸೌಹಾರ್ದ ಪರಂಪರೆಯನ್ನು ನಾಶ ಮಾಡಿ, ಅಲ್ಲಿ ದ್ವೇಷದ ಕೊಳೆಗೇರಿಯೊಂದನ್ನು ಹೇಗೆ ನಿರ್ಮಾಣ ಮಾಡುತ್ತಿದೆ ಎನ್ನುವುದು ಟ್ರಂಪ್ ಉಪಸ್ಥಿತಿಯಲ್ಲೇ ಬಟಾ ಬಯಲಾಯಿತು.

ಭಾರತ ಅಮೆರಿಕದ ಜೊತೆಗೆ ‘ಸೌಹಾರ್ದ-ಸ್ನೇಹ’ವನ್ನು ಬಯಸಲು ಮುಂದಾಗಿದೆ. ಆದರೆ ದಿಲ್ಲಿಯಲ್ಲಿ ಸ್ನೇಹ, ಸೌಹಾರ್ದಗಳು ಹಾಡಹಗಲೇ ದುಷ್ಕರ್ಮಿಗಳ ಬೆಂಕಿಗೆ ಆಹುತಿಯಾಯಿತು. ಟ್ರಂಪ್ ಅವರು ಪ್ರೀತಿಯ ಸಂಕೇತವಾದ ತಾಜ್‌ಮಹಲನ್ನು ಭೇಟಿ ಮಾಡುತ್ತಿರುವಾಗ, ಇತ್ತ ದಿಲ್ಲಿಯಲ್ಲಿ ಜನರ ಸೌಹಾರ್ದದ ತಾಜ್‌ಮಹಲನ್ನು ಮೋದಿಯ ಸರಕಾರದ ಜನರೇ ಉರುಳಿಸಿ ಅವುಗಳಿಗೆ ಬೆಂಕಿ ಹಚ್ಚಿದರು. ಒಟ್ಟಿನಲ್ಲಿ, ಮೋದಿ ಸರಕಾರ ‘ತಾನು ಈ ದೇಶವನ್ನು ಎತ್ತ ಕಡೆ ಒಯ್ಯಲಿದ್ದೇನೆ’ ಎನ್ನುವ ಸಣ್ಣದೊಂದು ಡೆಮೋವನ್ನು ದಿಲ್ಲಿಯಲ್ಲಿ ಟ್ರಂಪ್ ಮುಂದಿಟ್ಟರು. ಟ್ರಂಪ್ ಮತ್ತು ಮೋದಿಯವರು ಪರಸ್ಪರ ಆಲಂಗಿಸಿ ನಗುತ್ತಿದ್ದರೆ, ಇತ್ತ ಭಾರತದ ಹೃದಯವಾಗಿರುವ ದಿಲ್ಲಿ ಎದೆ ಬಡಿದು ಚೀರಾಡುತ್ತಿತ್ತು. ಟ್ರಂಪ್ ಭೇಟಿಯಿಂದ ಈ ಭಾರತ ಏನನ್ನೋ ಸಾಧಿಸುತ್ತಿದೆ ಎನ್ನುವುದರ ಅಣಕವಾಗಿತ್ತು ದಿಲ್ಲಿಯ ದುರಂತ. ಅಮೆರಿಕದ ಜೊತೆಗಿನ ಸ್ನೇಹದಿಂದ ಯಾರಾದರೂ ಉದ್ಧಾರವಾಗುತ್ತಾರೆ ಎಂದಾಗಿದ್ದರೆ ಒಂದು ಕಾಲದಲ್ಲಿ ಅವರೊಂದಿಗೆ ಮೈತ್ರಿ ಮಾಡಿ ಇರಾನ್ ಜೊತೆಗೆ ಬಡಿದಾಡಿದ್ದ ಸದ್ದಾಂ ಹುಸೇನ್ ನೇತೃತ್ವದ ಇರಾಕ್ ಉದ್ಧಾರವಾಗಬೇಕಾಗಿತ್ತು. ಅದೆಲ್ಲ ಬೇಡ, ದೇಶ ವಿಭಜನೆಯಾದಾಕ್ಷಣ ಅಮೆರಿಕದ ಮಡಿಲಿಗೇ ಹೋಗಿ ಬಿದ್ದ ಪಾಕಿಸ್ತಾನದ ಸ್ಥಿತಿ ಇಂದು ಏನಾಗಿದೆ ಎನ್ನುವುದು ಕಣ್ಣ ಮುಂದಿದೆ.

ಅಭಿವೃದ್ಧಿ ಹೊಂದುತ್ತಿರುವ ಇತರ ದೇಶಗಳನ್ನು ತನ್ನ ಶಸ್ತ್ರಾಸ್ತ್ರಗಳ ಮಾರುಕಟ್ಟೆಯಾಗಿ ಭಾವಿಸಿಕೊಂಡು ಅಮೆರಿಕ ಸ್ನೇಹವನ್ನು ಬಯಸುತ್ತಾ ಬಂದಿದೆ. ದೇಶದೊಳಗೆ ಮತ್ತು ಹೊರಗೆ ಶತ್ರುಗಳು, ಅರಾಜಕತೆ ಬೆಳೆದಷ್ಟೂ ಅಮೆರಿಕ ಆರ್ಥಿಕತೆಗೆ ಲಾಭ. ಈ ದೇಶವನ್ನು ಸಿಎಎ ಎನ್ನುವ ಗೋಡೆ ಕಟ್ಟಿ ಸ್ಪಷ್ಟವಾಗಿ ಒಡೆಯಲು ನೋಡುತ್ತಿರುವ ಮೋದಿ ಈ ಕಾರಣಕ್ಕೆ ಟ್ರಂಪ್‌ಗೆ ಇಷ್ಟವಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಇಂದು ಭಾರತ ತನ್ನತನವನ್ನು, ಆತ್ಮಾಭಿಮಾನವನ್ನು ಕಾಪಾಡಿಕೊಂಡಿದ್ದರೆ ಅದು ನೆಹರೂ ಅವರ ದೂರದೃಷ್ಟಿಯ ವಿದೇಶಾಂಗ ನೀತಿ ಕಾರಣ. ರಶ್ಯ ಮತ್ತು ಅಮೆರಿಕ ಇವರೆಡರ ಜೊತೆಗೆ ಸಮಾನ ಅಂತರವನ್ನು ಕಾಪಾಡಿಕೊಂಡು, ಭಾರತದ ಬಡವರ ಅಭಿವೃದ್ಧಿಗೆ ಪೂರಕವಾಗಿ ರಶ್ಯದ ಸಮತಾವಾದದೊಂದಿಗೆ ಮೃದು ನಿಲುವನ್ನು ತಳೆದ ಪರಿಣಾಮವಾಗಿ ಭಾರತ ಸರ್ವರಂಗಗಳಲ್ಲೂ ಸಾಧನೆಯನ್ನು ಮಾಡಿತು. ಅಮೆರಿಕದ ಸಂಗ ಮಾಡಿದ ಪಾಕಿಸ್ತಾನ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಿಂದುಳಿಯುವಂತಾಯಿತು. ದುರದೃಷ್ಟವಶಾತ್, ಇಂದು ಭಾರತ ತಾನಾಗಿಯೇ ಅಮೆರಿಕ ಎನ್ನುವ ಬೆಂಕಿಯ ಸಂಗಕ್ಕೆ ಹೋಗಿ ಬಿದ್ದಿದೆ. ತನ್ನ ಯುದ್ಧ ದಾಹ, ದ್ವೇಷ ರಾಜಕಾರಣಕ್ಕೆ ಅಮೆರಿಕದ ಬೆಂಬಲವನ್ನು ಅದು ಬಯಸುತ್ತಿದೆ. ಬಹುಶಃ ಭೇಟಿಯ ಸಂದರ್ಭದಲ್ಲಿ ಟ್ರಂಪ್‌ಗೆ ಅತ್ಯಂತ ಆನಂದಕೊಟ್ಟ ದೃಶ್ಯವೇನಾದರೂ ಇದ್ದಿದ್ದರೆ ಅದು ದಿಲ್ಲಿಯ ಅರಾಜಕತೆಯೇ ಇರಬೇಕು.

ಟ್ರಂಪ್ ಭಾರತ ಭೇಟಿಯ ಹಿನ್ನೆಲೆಯಲ್ಲಿ ವಿಶ್ವದ ಮಾಧ್ಯಮಗಳು ಭಾರತದ ಕಡೆಗೆ ನೋಡುತ್ತಿದ್ದವು. ಆದರೆ ಅವುಗಳ ಕಣ್ಣಿಗೆ ಕಂಡದ್ದು ಉರಿಯುತ್ತಿರುವ ಅಮಾಯಕರ ಮನೆಗಳು, ಬೇಯುತ್ತಿರುವ ಜೀವಗಳು. ವಿದೇಶಿ ಪತ್ರಿಕೆಗಳಲ್ಲಿ ದಿಲ್ಲಿಯ ಹಿಂಸಾಚಾರ ಮುಖ ಪುಟ ಸುದ್ದಿಯಾದವು. ಹಾಲಿವುಡ್‌ನ ನಟರೂ ಸೇರಿದಂತೆ ವಿವಿಧ ಚಿಂತಕರು, ಪತ್ರಕರ್ತರು ಭಾರತದ ಪ್ರಜಾಸತ್ತೆಯ ಕುರಿತಂತೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಮಾನ ಈ ಮೂಲಕ ಹರಾಜಾಗಿದೆ. ಈ ಎಲ್ಲ ಘಟನೆಗಳಿಂದ ಭಾರತದ ಆರ್ಥಿಕತೆಗೆ ಮತ್ತಷ್ಟು ಧಕ್ಕೆಯಾಗಲಿದೆ. ಈಗಾಗಲೇ ಭಾರತದಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ದಿಲ್ಲಿಯಲ್ಲಿ ನಡೆದ ಹಿಂಸಾಚಾರದಿಂದಾಗಿ ಸ್ವಯಂ ಅಮೆರಿಕವೇ ತನ್ನ ಪ್ರಜೆಗಳಿಗೆ ಎಚ್ಚರಿಕೆಯನ್ನು ನೀಡಿದೆ. ಟ್ರಂಪ್-ಮೋದಿ ಸ್ನೇಹದಿಂದ ಭಾರತ ಅಮೆರಿಕದ ಸಂಬಂಧ ಗಟ್ಟಿಯಾಗಿದೆಯೆಂದಾದರೆ ‘ಭಾರತದಲ್ಲಿರುವ ಅಮೆರಿಕದ ಪ್ರಜೆಗಳಿಗೆ ಆ ದೇಶ ಯಾಕೆ ಎಚ್ಚರಿಕೆ’ಯನ್ನು ನೀಡಿದೆ? ದಿಲ್ಲಿಯಲ್ಲಿ ನಡೆದ ಗಲಭೆಗೆ ಪೊಲೀಸರ ವೈಫಲ್ಯ ಕಾರಣ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆದರೆ ಇಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವುದು ಪೊಲೀಸರ ವೈಫಲ್ಯವಲ್ಲ, ಬದಲಿಗೆ ಪೊಲೀಸರ ಭಾಗೀದಾರಿಕೆ. ಪೊಲೀಸರು ಮತ್ತು ಸಂಘಪರಿವಾರದ ಕಾರ್ಯಕರ್ತರು ಜಂಟಿಯಾಗಿ ಅಮಾಯಕ ಮುಸ್ಲಿಮರ ಮೇಲೆ, ಅವರ ಮನೆ, ಅಂಗಡಿಗಳ ಮೇಲೆ ಏಕಮುಖ ದಾಳಿಯನ್ನು ನಡೆಸಿದ್ದಾರೆ. ಸಿಸಿ ಟಿವಿಗಳಲ್ಲಿ ಇವುಗಳು ಸ್ಪಷ್ಟವಾಗಿ ದಾಖಲಾಗಿವೆ.

ಸಿಎಎ ವಿರುದ್ಧ ಪ್ರತಿಭಟನೆ ನಿಲ್ಲಿಸದೇ ಇದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಹೇಳಿಕೆ ಮತ್ತು ಇತರ ಬಿಜೆಪಿ ನಾಯಕರ ಪ್ರಚೋದನಾಕಾರಿ ಹೇಳಿಕೆಗಳೆಲ್ಲವೂ ಗಲಭೆ ಪೂರ್ವ ನಿಯೋಜಿತ ಎನ್ನುವುದನ್ನು ಹೇಳುತ್ತಿದೆ. ಅಂದರೆ ಸಿಎಎ ಪ್ರತಿಭಟನೆಗಳನ್ನು ದಮನಿಸಲು ಗೂಂಡಾಗಳನ್ನು ಸರಕಾರವೇ ಬೀದಿಗಿಳಿಸಿದೆ. ಆದರೆ ಇಂದು ಸಿಎಎಯನ್ನು ವಿರೋಧಿಸುತ್ತಿರುವ ಹೋರಾಟಗಾರರು ಯಾವುದೇ ರಾಜಕೀಯ ಕಾರಣಕ್ಕೋ, ಜಾತಿ, ಧರ್ಮಗಳ ಕಾರಣಕ್ಕೋ ಬೀದಿಗಿಳಿದವರಲ್ಲ. ‘ತಮ್ಮ ಭಾರತೀಯತೆಗೆ ಧಕ್ಕೆ ಬರಲಿದೆಯೆಂಬ ಆತಂಕ’ದಿಂದ ಬೀದಿಗಿಳಿದವರು. ಅವರನ್ನು ತನ್ನ ಗೂಂಡಾಗಳ ಮೂಲಕ ದಮನಿಸಬಹುದು ಎನ್ನುವುದು ಸರಕಾರದ ವ್ಯರ್ಥ ಪ್ರಯತ್ನ. ಸಮಸ್ಯೆಯನ್ನು ಅದು ಇನ್ನಷ್ಟು ಬಿಗಡಾಯಿಸಬಹುದೇ ಹೊರತು, ಪರಿಹರಿಸಲಾರದು. ದಿಲ್ಲಿಯ ಹಿಂಸಾಚಾರದಲ್ಲಿ ಸುಪ್ರೀಂಕೋರ್ಟ್‌ನ ಪಾತ್ರವೂ ಇದೆ. ಸಿಎಎ ಎನ್ನುವ ಸಂವಿಧಾನ ವಿರೋಧಿ ಕಾಯ್ದೆಯ ಬಗ್ಗೆ ತನ್ನ ನಿಲುವನ್ನು ಹೇಳಲು ಅದು ಹಿಂಜರಿಯುತ್ತಿರುವುದೇ ಎಲ್ಲ ಅನಾಹುತಗಳಿಗೆ ಕಾರಣ. ಹಿಂಸಾಚಾರಕ್ಕೆ ‘ಪೊಲೀಸರು, ಸರಕಾರಿ ವ್ಯವಸ್ಥೆಯನ್ನು ಟೀಕಿಸುವ’ ಸುಪ್ರೀಂಕೋರ್ಟ್, ಇದರಲ್ಲಿ ತನ್ನ ಪಾತ್ರವೆಷ್ಟು ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News