1984ರಂತಹ ಘಟನೆ ಮತ್ತೆ ನಡೆಯಲು ಬಿಡುವುದಿಲ್ಲ: ದಿಲ್ಲಿ ಹಿಂಸಾಚಾರದ ಬಗ್ಗೆ ಹೈಕೋರ್ಟ್ ಹೇಳಿಕೆ

Update: 2020-02-27 05:55 GMT

ಹೊಸದಿಲ್ಲಿ, ಫೆ.26: ಈ ದೇಶದಲ್ಲಿ 1984ರಂತಹ ಘಟನೆ ಮತ್ತೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿರುವ ದಿಲ್ಲಿ ಹೈಕೋರ್ಟ್, ಸತತ ನಾಲ್ಕನೇ ದಿನವಾದ ಬುಧವಾರವೂ ರಾಷ್ಟ್ರೀಯ ರಾಜಧಾನಿಯ ಹಲವು ಭಾಗಗಳಲ್ಲಿ ಮುಂದುವರಿದ ನಿರಂತರ ಹಿಂಸಾಚಾರವನ್ನು ಹತ್ತಿಕ್ಕಲು ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕು ಎಂದಿದೆ.

ರವಿವಾರ ಈಶಾನ್ಯ ದಿಲ್ಲಿಯ ಮೌಜ್‌ಪುರದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾರ ಭಾಷಣದ ವೀಡಿಯೊವನ್ನು ಆಲಿಸಿದ ಬಳಿಕ ಹೈಕೋರ್ಟ್ ಹೀಗೆ ಪ್ರತಿಕ್ರಿಯಿಸಿದೆ.

 ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿರುವ ಮಾಹಿತಿ ಲಭಿಸಿದೆ. ಇಂತಹ ವಿಷಯಗಳ ಬಗ್ಗೆ ತಕ್ಷಣ ಗಮನಹರಿಸಬೇಕು. 1984ರ ಘಟನೆ ಮತ್ತೆ ನಡೆಯಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ನ್ಯಾಯಾಧೀಶ ಮುರಳೀಧರ್ ಹೇಳಿದರು. 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ದಿಲ್ಲಿಯೊಂದರಲ್ಲೇ 3000ಕ್ಕೂ ಹೆಚ್ಚು ಜನರ ಹತ್ಯೆಯಾದ ಘಟನೆಯನ್ನು ಉಲ್ಲೇಖಿಸಿ ನ್ಯಾಯಾಧೀಶರ ಈ ಹೇಳಿಕೆ ನೀಡಿದ್ದಾರೆ.

ವಿಶ್ವಾಸ ಮೂಡಿಸುವ ಕ್ರಮವಾಗಿ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ನ್ಯಾಯಾಲಯ ಒತ್ತಾಯಿಸಿತು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಸುರಕ್ಷಿತವಾಗಿ ಸಾಗಿಸುವ ವ್ಯವಸ್ಥೆ ಮಾಡುವಂತೆ ಪೊಲೀಸರಿಗೆ ಸೂಚಿಸಿತು.

ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮಾಡಿರುವ ಪ್ರಚೋದನಕಾರಿ ಭಾಷಣದ ವೀಡಿಯೊವನ್ನು ಪೊಲೀಸರು ವೀಕ್ಷಿಸಿದ್ದಾರೆಯೇ ಎಂದು ಹೈಕೋರ್ಟ್ ದಿಲ್ಲಿ ಪೊಲೀಸರ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಪ್ರಶ್ನಿಸಿತು. ವೀಡಿಯೊ ವೀಕ್ಷಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಉತ್ತರಿಸಿದರು. ದಿಲ್ಲಿ ಪೊಲೀಸರ ಸ್ಥಿತಿ ಗತಿ ನೋಡಿ ನಿಜಕ್ಕೂ ಆಶ್ಚರ್ಯವಾಗಿದೆ ಎಂದು ಹೇಳಿದ ನ್ಯಾಯಾಧೀಶ ಮುರಳೀಧರ್, ನ್ಯಾಯಾಲಯದ ಕೋಣೆಯಲ್ಲಿ ಕಪಿಲ್ ಮಿಶ್ರಾರ ವೀಡಿಯೊ ದೃಶ್ಯಾವಳಿ ಪ್ರದರ್ಶಿಸುವಂತೆ ನ್ಯಾಯಾಲಯದ ಸಿಬಂದಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News