ಶಾಸಕ ಯತ್ನಾಳ್ ವಿರುದ್ಧ ಹೆಚ್ಚಿದ ಆಕ್ರೋಶ: ಕಠಿಣ ಕ್ರಮಕ್ಕೆ ಸಾಹಿತಿಗಳು, ಹೋರಾಟಗಾರರು, ಚಿಂತಕರ ಪಟ್ಟು

Update: 2020-02-27 13:10 GMT

ಬೆಂಗಳೂರು, ಫೆ.27: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಎಂದು ಆಪಾದಿಸುವ ಮೂಲಕ ಉದ್ಧಟತನ ತೋರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು, ಚಿಂತಕರು, ಹೋರಾಟಗಾರರು ಆಗ್ರಹಿಸಿದ್ದಾರೆ.

ಗುರುವಾರ ನಗರದ ಗಾಂಧೀ ಭವನ ಬಳಿ ಹೋರಾಟಗಾರರು, ಚಿಂತಕರು, ಸಾಹಿತಿಗಳು ಪ್ರತಿಭಟನೆ ನಡೆಸುವ ಮೂಲಕ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಗಾಂಧಿ ತತ್ವಗಳಲ್ಲಿ ನಂಬಿಕೆಯಿಟ್ಟುಕೊಂಡಿರುವ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಹಿರಿಯರಾದ ದೊರೆಸ್ವಾಮಿ ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದಾರೆ ಎಂದು ಹೇಳಿದರು.

ದೊರೆಸ್ವಾಮಿಯು ನಾಡಿನ ಅನೇಕ ಸಾಮಾಜಿಕ ಸಮಸ್ಯೆಗಳ ವಿರುದ್ಧ, ಬಡವರ, ಶೋಷಿತರ ಧ್ವನಿಯಾಗಿ ಚಳವಳಿ ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಯನ್ನು ಪಾಕಿಸ್ತಾನದ ಏಜೆಂಟ್ ಹಾಗೂ ನಕಲಿ ಹೋರಾಟಗಾರ ಎಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೊರೆಸ್ವಾಮಿ ಅವರನ್ನು ಟೀಕಿಸುವಂತಹ ಕೀಳುಮಟ್ಟಕ್ಕೆ ಯತ್ನಾಳ್ ಇಳಿದಿರುವುದು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ನಿರ್ಗತಿಕರು, ಬಡವರು, ಶೋಷಿತರ ಪರವಾಗಿ ಇಳಿ ವಯಸ್ಸಿನಲ್ಲಿಯೂ ಬೀದಿಗಿಳಿದು ಹೋರಾಟ ನಡೆಸುವ ದೊರೆಸ್ವಾಮಿ ನಾಡಿನ ಆಸ್ತಿಯಾಗಿದ್ದಾರೆ. ಅವರ ಹೋರಾಟಗಳು ಹಾಗೂ ಚಳವಳಿಗಳಿಂದ ಶೋಷಿತರಿಗೆ ಎಷ್ಟೋ ವಿಷಯಗಳಲ್ಲಿ ನ್ಯಾಯ ದೊರೆತಿದೆ ಎಂದರು.

ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ದೊರೆಸ್ವಾಮಿ ಅಂತಹ ಹಿರಿಯ ವಿರುದ್ಧ ಹೇಳಿಕೆ ನೀಡಿರುವ ಯತ್ನಾಳ್ ಕೂಡಲೇ ಕ್ಷಮೆ ಕೇಳಬೇಕು. ಮುಂದೆ ಇಂತಹ ಹೇಳಿಕೆಗಳು ನೀಡದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಗಾಂಧೀ ಸ್ಮಾರಕ ನಿಧಿಯ ವೂಡೇ ಪಿ.ಕೃಷ್ಣ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News