ದೇವದಾಸಿ ಪದ್ಧತಿಯನ್ನು ಬೇರುಸಮೇತ ನಿರ್ಮೂಲನೆ ಮಾಡಬೇಕಿದೆ: ನಿವೃತ್ತ ನ್ಯಾ.ನಾಗಮೋಹನ್‌ದಾಸ್

Update: 2020-02-27 14:17 GMT

ಬೆಂಗಳೂರು, ಫೆ 27: ಸಮಾಜಕ್ಕೆ ಅಂಟಿಕೊಂಡಿರುವ ದೇವದಾಸಿ ಪದ್ಧತಿಯನ್ನು ಬೇರು ಸಮೇತ ನಿರ್ಮೂಲನೆ ಮಾಡದ ಹೊರತು, ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಹೇಳಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಗುಡ್ ಜಂಟಿಯಾಗಿ ಆಯೋಜಿಸಿದ್ದ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಕುರಿತು ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕಾರಣಗಳಿಂದ ಇಂದು ಸಮಾಜದಲ್ಲಿ ಅಂಟುರೋಗದಂತೆ ಬೇರೂರಿರುವ ದೇವದಾಸಿ ಪದ್ಧತಿ ಹಾಗೂ ಲೈಂಗಿಕ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ಇವುಗಳನ್ನು ತೊಡೆದು ಹಾಕಲು ಬಲವಾದ ಕಾನೂನುಗಳ ಅಗತ್ಯವಿದೆ. ಅದರ ಜತೆಗೆ, ಬುಡಸಮೇತ ಬೇರುಗಳನ್ನು ಕಿತ್ತು ಹಾಕಬೇಕಿದೆ ಎಂದರು.

ಕಾನೂನು ಜಾರಿ ಹಾಗೂ ಉಲ್ಲಂಘನೆ ಅಧಿಕಾರವನ್ನು ರಾಜಕೀಯ ಪ್ರತಿನಿಧಿಗಳು ರೂಪಿಸುತ್ತಿದ್ದು, ಎಲ್ಲ ಅಧಿಕಾರವೂ ಪುರುಷರ ಕೈಗೆ ಸೇರುತ್ತಿದೆ. ಸಮಾಜ ಅರ್ಧದಷ್ಟಿರುವ ಮಹಿಳೆಯರ ಪರ ಸಮರ್ಪಕವಾದ ಕಾನೂನು ರೂಪಿಸಲು ಸಂಸತ್ತು, ವಿಧಾನಸಭೆ ವಿಫಲವಾಗುತ್ತಿವೆ ಎಂದು ಆಪಾದಿಸಿದರು.

ಆಳುವ ವರ್ಗಗಳು ಮಹಿಳೆಯರನ್ನು ಕಡೆಗಣಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಇಂದಿಗೂ ಮಹಿಳೆಯರು ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಆರ್ಥಿಕ ಮತ್ತು ರಾಜಕೀಯ ಶಕ್ತಿಯಿಲ್ಲದ ಮಹಿಳೆಯರು ದಬ್ಬಾಳಿಕೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ, ಮಹಿಳೆಯರನ್ನು ಸಶಕ್ತರನ್ನಾಗಿಸಲು ಕಾನೂನು ಅಗತ್ಯವಿದೆ ಎಂದು ಹೇಳಿದರು.

ದೇಶದಲ್ಲಿ ದೇವದಾಸಿ ಪದ್ಧತಿ ಹಾಗೂ ಲೈಂಗಿಕ ವೃತ್ತಿಯಿಂದ 1 ದಶಲಕ್ಷ ಕೋಟಿ ವ್ಯವಹಾರ ನಡೆಯುತ್ತಿದ್ದು, 80 ಲಕ್ಷಕ್ಕೂ ಹೆಚ್ಚು ಮಂದಿ ಮಹಿಳೆಯರು ವೇಶ್ಯಾವಾಟಿಕೆ ವೃತ್ತಿಯಲ್ಲಿದ್ದಾರೆ. 1 ಕೋಟಿ 50 ಲಕ್ಷ ಮಹಿಳೆಯರ ಹೊರದೇಶಕ್ಕೆ ಮಾರಾಟ ವಸ್ತುವಾಗಿ ಹೋಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹೊರದೇಶಗಳಿಗೆ ಹೋಗುತ್ತಿರುವ ಮಹಿಳೆಯರ ಪೈಕಿ ಶೇ.40 ರಷ್ಟು ಅಪ್ರಾಪ್ತ ಹೆಣ್ಣು ಮಕ್ಕಳಿರುವುದು ಶೋಚನೀಯವಾಗಿದೆ. ಪ್ರಸ್ತುತ 15 ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳು ಈ ವೃತ್ತಿಯಲ್ಲಿದ್ದಾರೆ. ಆದುದರಿಂದಾಗಿ, ಸರಕಾರ ಇವರ ಪುನರ್ ವಸತಿಗೆ ಸೂಕ್ತವಾದ ಯೋಜನೆಗಳನ್ನು ರೂಪಿಸಬೇಕು. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಮಾಜದಲ್ಲಿ ಭಿಕ್ಷೆ, ವೇಶ್ಯಾವಾಟಿಕೆ, ದೇವದಾಸಿ ಪದ್ದತಿಯ ದೊಡ್ಡ ಜಾಲವಿದೆ. ಪ್ರತಿ ವರ್ಷ ಲಕ್ಷಾಂತರ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕಾರಣಗಳು ವರದಿಯಾಗುತ್ತಲೇ ಇವೆ. ಇದರ ವಿರುದ್ಧ ಕಠಿಣ ಕಾನೂನು ಅಗತ್ಯವಿದೆ ಎಂದು ತಿಳಿಸಿದರು.

ದೇವದಾಸಿ ಪದ್ದತಿಗೆ ಪರಿಶಿಷ್ಟ ಸಮುದಾಯದ ಹೆಣ್ಣು ಮಕ್ಕಳೇ ಬಲಿಯಾಗುತ್ತಿದೆ. ಹೀಗಾಗಿ, ಈ ಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕೆಲಸ, ಹಣದ ಆಮಿಷವೊಡ್ಡಿ ಈ ವೃತ್ತಿಗೆ ತಳ್ಳುತ್ತಿರುವುದು ಕಂಡುಬಂದಿದೆ. ಈ ಸಾಮಾಜಿಕ ಪಿಡುಗು ತೊಲಗಿಸಲು ಕಾನೂನು ಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News