ದಿಲ್ಲಿ ಹಿಂಸಾಚಾರದ ಬೆನ್ನಿಗೇ ಸಿಎಎ ಪರ ಒಡಿಶಾದಲ್ಲಿ ಅಮಿತ್ ಶಾ ರ್ಯಾಲಿ

Update: 2020-02-28 05:31 GMT

ಭುವನೇಶ್ವರ, ಫೆ.28: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿ ದಿಲ್ಲಿಯಲ್ಲಿ ಹಿಂಸಾಚಾರ ಸಂಭವಿಸಿ ಭಾರೀ ಸಾವು-ನೋವು ಪ್ರಕರಣ ನಡೆದ ಬೆನ್ನಿಗೇ ಗೃಹ ಸಚಿವ ಅಮಿತ್ ಶಾ ಭುವನೇಶ್ವರದ ಜನತಾ ಮೈದಾನದಲ್ಲಿ ಶುಕ್ರವಾರ ಪೌರತ್ವ ಬೆಂಬಲಿಸಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಪೌರತ್ವ ಕಾಯ್ದೆ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿಯನ್ನು ತೀವ್ರವಾಗಿ ಖಂಡಿಸುತ್ತಿರುವ ಮಮತಾ ಬ್ಯಾನರ್ಜಿ ಸಹಿತ ನಾಲ್ವರು ಮುಖ್ಯಮಂತ್ರಿಗಳ ಜೊತೆ ಪೂರ್ವ ವಲಯ ಕೌನ್ಸಿಲ್(ಇಝೆಡ್‌ಸಿ)ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಅಮಿತ್ ಶಾ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಕೌನ್ಸಿಲ್ ಸಭೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಲಿದ್ದಾರೆ. ಪಟ್ನಾಯಕ್ ಹಾಗೂ ನಿತೀಶ್ ಕುಮಾರ್ ಸಿಎಎಗೆ ಬೆಂಬಲಿಸಿದರೆ, ಎನ್‌ಆರ್‌ಸಿಯನ್ನು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯಕ್ಕೆ ಎನ್‌ಆರ್‌ಸಿ ಅಗತ್ಯವಿಲ್ಲ ಎಂದು ಬಿಹಾರ ಅಸೆಂಬ್ಲಿನಲ್ಲಿ ಇತ್ತೀಚೆಗೆ ನಿರ್ಣಯ ಅಂಗೀಕರಿಸಲಾಗಿದೆ. ಎನ್‌ಆರ್‌ಸಿಗೆ ತನ್ನ ಬೆಂಬಲ ಇಲ್ಲ ಎಂದು ಘೋಷಿಸಿರುವ ಮೊದಲ ಎನ್‌ಡಿಎ ಆಡಳಿತವಿರುವ ರಾಜ್ಯ ಬಿಹಾರ. ಪಟ್ನಾಯಕ್ ನೇತೃತ್ವದ ಬಿಜು ಜನತಾದಳ(ಬಿಜೆಡಿ)ಒಡಿಶಾದಲ್ಲಿ ಎನ್‌ಪಿಆರ್ ಜಾರಿಗೆ ತರಬೇಕಾದರೆ ಅದರಲ್ಲಿ ಕೆಲವೊಂದು ಬದಲಾವಣೆ ಮಾಡಬೇಕಾಗಿದೆ ಎಂದಿದೆ.

‘‘ಪೌರತ್ವ ಕಾಯ್ದೆ ಬೆಂಬಲಿಸಿ ನಡೆಯುವ ರ್ಯಾಲಿಯಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ರ್ಯಾಲಿಯು ದೇಶಾದ್ಯಂತ ನಡೆಯುತ್ತಿರುವ ಸಿಎಎ ಪರ ಜಾಗೃತಿ ಮೂಡಿಸುವ ಕಾರ್ಯಕ್ರಮದ ಒಂದು ಭಾಗವಾಗಿದೆ’’ ಎಂದು ಒಡಿಶಾದ ಬಿಜೆಪಿ ಅಧ್ಯಕ್ಷ ಸಮೀರ್ ಮೊಹಾಂತಿ ಹೇಳಿದ್ದಾರೆ.

ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಬಾಬುಲ್ ಸುಪ್ರಿಯೋ ಹಾಗೂ ಗಿರಿರಾಜ್ ಸಿಂಗ್ ಹಾಗೂ ಬಿಜೆಪಿ ಸಂಸದೆ ರೂಪಾ ಗಂಗುಲಿ ಈಗಾಗಲೇ ಸಿಎಎಯನ್ನು ಬೆಂಬಲಿಸಿ ಒಡಿಶಾದ ಕಟಕ್, ಬೆಹ್ರಾಂಪುರ, ಸಂಬಾಲ್ಪುರ ಹಾಗೂ ಜೇಪೋರ್‌ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News