ವಚನ-ಕೀರ್ತನೆಗಳನ್ನು ಜೊತೆಯಾಗಿ ಬೋಧನೆ ಮಾಡುವುದು ಮುಕ್ತ ವಿಚಾರಗಳನ್ನು ನಾಶ ಮಾಡಿದಂತೆ

Update: 2020-02-28 15:08 GMT

ಬೆಂಗಳೂರು, ಫೆ.28: ಪ್ರಾಥಮಿಕ ಪಠ್ಯ ಪುಸ್ತಕಗಳಲ್ಲಿ ವಚನ, ಕೀರ್ತನೆಗಳನ್ನು ಜೊತೆ ಜೊತೆಯಾಗಿ ಬೋಧನೆ ಮಾಡುತ್ತಾರೆ. ಆದರೆ, ಇದು ಅಮೃತ ಮತ್ತು ವಿಷವನ್ನಿಟ್ಟು ಮುಕ್ತ ವಿಚಾರಗಳನ್ನೇ ನಾಶ ಮಾಡಿದಂತೆ ಎಂದು ಹಿರಿಯ ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಮಿಷಿನ್ ರಸ್ತೆಯ ಎಸ್‌ಸಿಎಂ ಹೌಸ್ ಸಭಾಂಗಣದಲ್ಲಿ ಅನೇಕ ಸಂಸ್ಥೆ ಏರ್ಪಡಿಸಿದ್ದ, ವಚನ ಚಳವಳಿ-ಲಿಂಗತ್ವ ಮತ್ತು ಲೈಂಗಿಕತೆ ವಿಷಯಗಳ ಒಳನೋಟ ಕುರಿತು ಅವರು ಮಾತನಾಡಿದರು. ಪ್ರಾಥಮಿಕ ಶಾಲೆಗಳಲ್ಲಿ ವಚನಗಳನ್ನು ಹೇಳಿಕೊಡಲಾಗುತ್ತದೆ.ಉದಾಹರಣೆಗೆ ಪಠ್ಯ ಪುಸ್ತಕಗಳಲ್ಲಿ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವುದು ಸರಳ ವಚನ. ಇದರ ಜೊತೆಯಲ್ಲಿಯೇ ಕೀರ್ತನೆ ಕಲಿಸುತ್ತಾರೆ. ಆದರೆ, ವಚನ ಮತ್ತು ಕೀರ್ತನೆಗಳಿಗೆ ಬಹಳ ವ್ಯತ್ಯಾಸ ಇದೆ ಎಂದು ತಿಳಿಸಿದರು.

ಹೀಗೆ, ನೋಡಿದರೆ ದೇವರನ್ನು ಪ್ರಶ್ನಿಸುವ ವಚನವೊಂದರಲ್ಲಿ ಅಲ್ಲಮ ಪ್ರಭು, ‘ಉಳಿ ಮುಟ್ಟಿದ ಲಿಂಗವ ಮನ ಮುಟ್ಟಬಲ್ಲದೆ ಗುಹೇಶ್ವರಾ’ ಎಂದು ಪ್ರಶ್ನಿಸುತ್ತಾರೆ. ಇದರ ಅರ್ಥ, ದೇವರನ್ನು ಒಂದು ಕಲ್ಲಿಗೆ ಇಳಿಸುತ್ತಾರೆ ಎಂಬುದಲ್ಲ. ಬದಲಾಗಿ, ಕಲ್ಲಿಗೂ ಸಹ ದೇವತ್ವದ ಘನತೆ ಇದೆ ಎಂದರ್ಥ.

ಆದರೆ, ಇಲ್ಲಿ(ಕೀರ್ತನೆಗಳಲ್ಲಿ) ಕಾಗಿನೆಲೆ ಆದಿಕೇಶವ ಎಲ್ಲರನ್ನೂ ಸಲಹುತ್ತಾನೆ ಸಂಶಯ ಪಡದಿರು ಎಂದು ಹೇಳಿಕೊಡಲಾಗುತ್ತಿದೆ. ಅಷ್ಟೇ ಅಲ್ಲದೆ, ಕಲ್ಲು, ಕಾಡು ಎಲ್ಲಾದರೂ ಇರು, ಕಲ್ಲಿನೊಳಗಿನ ಕಪ್ಪೆಗೂ ನೀರು ಸುರಿದು ಪೋಷಿಸುತ್ತಾನೆ ಕಾಗಿನೆಲೆ ಆದಿಕೇಶವ, ಇದಕ್ಕೆ ಸಂಶಯ ಬೇಡ ಎನ್ನುತ್ತಾರೆ.

ಕೀರ್ತನೆ ಯಥಾಸ್ಥಿತಿ ಹೇಳುವ ಪಠ್ಯವಾದರೆ, ವಚನ, ಕ್ರಿಯೆ ಅರಿವು, ಆಲೋಚನೆ ಕಲಿಸುವುದಾಗಿದೆ. ಜೊತೆಗೆ ಬದುಕನ್ನು ಚದುರಿಸಬೇಕು, ಮನುಷ್ಯ ಘನತೆಗೆ ಕ್ರಿಯೆ ನೀಡಬೇಕು. ಏಜೆನ್ಸಿ ರೂಪ ನೀಡಿ, ಏನಾದರೂ ಮಾಡು ಎಂದು ಉತ್ತೇಜಿಸುವುದೇ ಇದರ ಮೂಲ ಆಶಯವಾಗಿದೆ. ನೀವು ಏನು ಮಾಡಬೇಕು ಅದನ್ನು ಏಜೆನ್ಸಿ ನಿರ್ದೇಶನ ಮಾಡಲಿದೆ ಎನ್ನುವುದು ಕೀರ್ತನೆ ಪರಂಪರೆಯ ಮುಖ್ಯವಾದ ಲಕ್ಷಣ. ಆದರೆ, ಇವೆರಡನ್ನು ಪಕ್ಕ ಪಕ್ಕದಲ್ಲಿ ಮಕ್ಕಳ ತಲೆಗೆ ತುಂಬುವುದು ಸರಿಯಲ್ಲ ಎಂದು ನಾರಾಯಣಸ್ವಾಮಿ ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಬರಹಗಾರ ಹುಲಿಕುಂಟೆ ಮೂರ್ತಿ, ಅನೇಕ ಸಂಸ್ಥೆಯ ನಿರ್ದೇಶಕಿ ರೂಮಿ ಹರೀಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಭಾಷೆ ಬದಲಾಗಬೇಕು’

ಪರಸ್ಪರ ನಿಂದನೆ, ಜಗಳ ಮಾಡಿಕೊಳ್ಳುವ ವೇಳೆ, ಉದ್ದೇಶ ಪೂರ್ವಕವಾಗಿ ತೃತೀಯ ಲಿಂಗಿ ಸಮುದಾಯವನ್ನು ಎಳೆತಂದು ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಇಂತಹ ಭಾಷೆಗೆ ಕಡಿವಾಣ ಹಾಕಬೇಕಾಗಿದೆ.

-ರೂಮಿ ಹರೀಶ್, ನಿರ್ದೇಶಕ ಅನೇಕ ಸಂಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News