​ದೇಶದ ಜಿಡಿಪಿ ಪ್ರಗತಿ ದರ ಏಳು ವರ್ಷದಲ್ಲೇ ಕನಿಷ್ಠ !

Update: 2020-02-29 04:05 GMT

ಹೊಸದಿಲ್ಲಿ : ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ದಾಖಲಾದ ಭಾರತದ ಜಿಡಿಪಿ ಪ್ರಗತಿ ದರ (4.7%) ಕಳೆದ ಏಳು ವರ್ಷಗಳಲ್ಲೇ ಕನಿಷ್ಠ ಪ್ರಮಾಣದ್ದಾಗಿದ್ದು, ದೇಶದಲ್ಲಿ ಆರ್ಥಿಕ ಕುಸಿತದ ಸ್ಪಷ್ಟ ಸೂಚನೆ ಇದಾಗಿದೆ.

2019-20ನೇ ವರ್ಷದ ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ ಉತ್ಪಾದನಾ ಕ್ಷೇತ್ರ, ವಿದ್ಯುತ್, ತೈಲ ಶುದ್ಧೀಕರಣ ವಲಯಗಳಲ್ಲಿ ಹಿಂಜರಿತ ಕಂಡುಬಂದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಕೊರೋನೋ ವೈರಸ್ ಅಪಾಯ ಬೆಳೆಯುತ್ತಿರುವುದು ಹಿಂಜರಿತಕ್ಕೆ ಕಾರಣವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (ಎನ್‌ಎಸ್‌ಓ) ಬಿಡುಗಡೆ ಮಾಡಿರುವ ತ್ರೈಮಾಸಿಕ ವರದಿಯ ಪ್ರಕಾರ ಜಿಡಿಪಿ ಪ್ರಗತಿದರ 4.7% ಆಗಿದೆ. ಇದು ಹಿಂದಿನ ತ್ರೈಮಾಸಿಕದಲ್ಲಿ ದಾಖಲಾದ ಪ್ರಗತಿದರ (5.1%)ಕ್ಕಿಂತ ಕಡಿಮೆ ಹಾಗೂ ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ದಾಖಲಾದ ಶೇಕಡ 5.6ರ ಪ್ರಗತಿಗಿಂತ ಕಡಿಮೆ. 2012-13ನೇ ಹಣಕಾಸು ವರ್ಷದ ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ 4.3% ಪ್ರಗತಿ ದಾಖಲಾಗಿರುವುದನ್ನು ಹೊರತುಪಡಿಸಿದರೆ ಇದು ಕನಿಷ್ಠ ಪ್ರಗತಿದರವಾಗಿದೆ.

2019-20ನೇ ಸಾಲಿನ ಒಟ್ಟಾರೆ ಜಿಡಿಪಿ ಪ್ರಗತಿದರವನ್ನು ಎನ್‌ಎಸ್‌ಓ ಶೇಕಡ 5ಕ್ಕೆ ಇಳಿಸಿದೆ. ಆದರೆ ಜಾಗತಿಕ ಆರ್ಥಿಕ ಪ್ರಗತಿ ಹಿನ್ನಡೆಗೆ ಕಾರಣವಾಗಬಹುದಾದ ಕೊರೋನಾ ವೈರಸ್ ಪರಿಣಾಮದ ಬಗ್ಗೆ ವರದಿ ಉಲ್ಲೇಖಿಸಿಲ್ಲ.

ಕೃಷಿ ಕ್ಷೇತ್ರದಲ್ಲಿ ಮಾತ್ರ ಆಶಾದಾಯಕ ಪ್ರಗತಿ ಕಂಡುಬಂದಿದ್ದು, ಹಿಂದಿನ ತ್ರೈಮಾಸಿಕದಲ್ಲಿ ದಾಖಲಾದ ಶೇಕಡ 2ರ ಪ್ರಗತಿಗೆ ಹೋಲಿಸಿದರೆ, ಡಿಸೆಂಬರ್  ತ್ರೈಮಾಸಿಕದಲ್ಲಿ ಇದು 3.5%ಕ್ಕೆ ಹೆಚ್ಚಿದೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಶೇಕಡ 0.2ರಷ್ಟು ಕುಸಿದಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಈ ಕ್ಷೇತ್ರದಲ್ಲಿ 5.2% ಪ್ರಗತಿ ದಾಖಲಾಗಿತ್ತು. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 0.4ರಷ್ಟು ಕಡಿಮೆ.

ದೇಶದ ಆರ್ಥಿಕತೆಗೆ ಶೇಕಡ 60ರಷ್ಟು ಕೊಡುಗೆ ನೀಡುವ ಸೇವಾ ವಲಯ ಶೇಕಡ 7.4ರಷ್ಟು ಪ್ರಗತಿ ಕಂಡಿದ್ದು, ಇದು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 0.1ರಷ್ಟು ಅಧಿಕ. ಕಳೆದ ವರ್ಷ ಈ ಅವಧಿಯಲ್ಲಿ ಇದೇ ಪ್ರಮಾಣದ ಪ್ರಗತಿ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News