ಅನ್ಯಾಯಕ್ಕೊಳಗಾದವರಿಗೆ ಸರಕಾರದಿಂದ ನ್ಯಾಯ ಸಿಗದು: ನ್ಯಾ.ಸಂತೋಷ್ ಹೆಗ್ಡೆ

Update: 2020-02-29 17:56 GMT

ಬೆಂಗಳೂರು, ಫೆ.29: 2015ನೆ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಕೆಪಿಎಸ್ಸಿ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದೇ ಸೂಕ್ತ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಲಹೆ ನೀಡಿದ್ದಾರೆ.

ನಗರದ ಗಾಂಧೀ ಭವನದಲ್ಲಿ ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸೇವಾ ಹುದ್ದೆಗಳ ನೇಮಕಾತಿ- ಭ್ರಷ್ಟಾಚಾರ ನಿರ್ಮೂಲನೆಯ ಅನಿವಾರ್ಯತೆ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್ಸಿ) 2015ನೇ ಗೆಜೆಟೆಡ್ ಪ್ರೊಬೇಷನರಿ 428 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಹೀಗಾಗಿ, ಅದಕ್ಕೆ ಕಾನೂನು ಹೋರಾಟವೇ ಸೂಕ್ತ ಎನಿಸುತ್ತದೆ ಎಂದು ಅವರು ಹೇಳಿದರು.

ಸರಕಾರದಿಂದ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳಿಗೆ ನ್ಯಾಯ ದೊರಕುತ್ತದೆ ಎಂದು ಊಹಿಸುವುದು ಕಷ್ಟಕರ. ನಿಯಮ ಉಲ್ಲಂಘನೆ ಮಾಡಿ ನೇಮಕಾತಿ ಮಾಡಿರುವುದು ನೇರವಾಗಿ ತಿಳಿಯುತ್ತಿದೆ. 2014ರಲ್ಲಿ ಅನುಸರಿಸಿದ ನಿಯಮಗಳನ್ನೂ ಅನುಸರಿಸಿಲ್ಲ ಎಂದು ಸಂತೋಷ್ ಹೆಗ್ಡೆ ಆಪಾದಿಸಿದರು.

ಎರಡು ವರ್ಷದ 7 ತಿಂಗಳು ಆಯ್ಕೆ ಪ್ರಕ್ರಿಯೆಗೆ ತೆಗೆದುಕೊಂಡು, ಆಕ್ಷೇಪಣೆಗೆ ಕೇವಲ 7 ದಿನಗಳು ಅವಕಾಶ ನೀಡಿರುವುದು ವಿಪರ್ಯಾಸ. ಅದರಲ್ಲಿಯೂ ಮೂರು ದಿನಗಳು ಸರಕಾರಿ ರಜೆಗಳಿದ್ದವು. ಇದಕ್ಕೆ ಸೂಕ್ತ ಕಾರಣ ನೀಡದಿರುವುದು ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಲಿದೆ. ನೊಂದ ಅಭ್ಯರ್ಥಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟು, ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು.

ಚಿಂತಕ ಪ್ರೊ.ಮಹೇಶ್ ಚಂದ್ರಗುರು ಮಾತನಾಡಿ, ಸರಕಾರಿ ನೇಮಕಾತಿಗಳಲ್ಲಿ ಪ್ರಮುಖ ಪಾತ್ರ ವಹಿಸುವ ಕೆಪಿಎಸ್‌ಸಿಯು ಮಠಾಧೀಶರಿಂದ ಹಾಗೂ ಜಾತಿ ರಾಜಕಾರಣದಿಂದ ಹಾಳಾಗಿದೆ. ಇದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪಾತ್ರವೂ ಇದೆ. ಅದರಲ್ಲಿಯೂ ಮಾಜಿ ಸಿಎಂ ಕುಮಾರಸ್ವಾಮಿ ಕೆಪಿಎಸ್ಸಿ ಕಳ್ಳರ ಸಂತೆಯಾಗಲು ಹಾಗೂ ಭ್ರಷ್ಟಾಚಾರದ ಕೂಪವಾಗಲು ಪ್ರಮುಖ ಕಾರಣ ಎಂದು ಹೇಳಿದರು.

ಮಾಜಿ ಪ್ರಧಾನಿ ಹಾಗೂ ಮುಖ್ಯಮಂತ್ರಿಯು ಪ್ರಾದೇಶಿಕ ಪಕ್ಷ ನಮ್ಮದು ಎಂದು ಹೇಳಿಕೊಂಡು ಇಡೀ ಕೆಪಿಎಸ್‌ಸಿಯನ್ನೇ ನುಂಗಿ ಹಾಕಿದರು. ಅವರ ಕುಟುಂಬ ಕಂಡವರ ಮಕ್ಕಳನ್ನು ಬಾವಿಗೆ ನೂಕಿ, ಆಳ ನೋಡುವ ಕುಟುಂಬವಾಗಿದೆ. ಕೆಪಿಎಸ್ಸಿಗೆ ಭ್ರಷ್ಟಾಚಾರಿಯೊಬ್ಬರು ಅಧ್ಯಕ್ಷರಾಗಿದ್ದು, ಆತನೂ ಮಠಾಧೀಶರೊಬ್ಬರ ಪ್ರಭಾವದಿಂದ ಆ ಸ್ಥಾನದಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ರವೀಂದ್ರ ಭಟ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕೆ.ಎಸ್.ಶಿವರಾಮು, ಜನಶಕ್ತಿ ಸಂಘಟನೆಯ ಡಾ.ಎಚ್.ವಿ.ವಾಸು, ದಲಿತ ಮುಖಂಡ ಮಹೇಶ್ ಸೋಲೆ ಸೇರಿದಂತೆ ಮತ್ತಿತರರಿದ್ದರು.

2015ರಲ್ಲಿನ ಗೆಜೆಟೆಡ್ ಪ್ರೊಬೇಷನರ್ಸ್ 428 ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಈ ಸಂಬಂಧ ಸೊಮೋಟೋ ಕೇಸ್ ದಾಖಲಿಸಬೇಕು. ಡಿಜಿಟಲ್ ಮೌಲ್ಯಮಾಪನವು ಅಕ್ರಮಗಳಿಂದ ಕೂಡಿದ್ದು, ಅಂಕಗಳನ್ನು ಯಾವಾಗ ಬೇಕಾದರೂ ತಿದ್ದುವ ಸಾಧ್ಯತೆಗಳಿವೆ. ಹಾಗಾಗಿ, ಈ ಹಿಂದಿನ ಮೌಲ್ಯಮಾಪನ ವ್ಯವಸ್ಥೆಯನ್ನೇ ಅನುಸರಿಸಬೇಕು.
-ಆಯಿಷಾ ಫರ್ಝಾನಾ, ಹಿತರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News