ಹಸಿವೆಯಿಂದ ಕಂಗೆಟ್ಟ ದಿಲ್ಲಿ ನಿವಾಸಿಗಳು: 1 ಲೀಟರ್ ಹಾಲಿಗೆ 100 ರೂ.!

Update: 2020-03-01 17:16 GMT

ಹೊಸದಿಲ್ಲಿ, ಮಾ.1: ಹಿಂಸಾಚಾರದಿಂದ ಕಂಗೆಟ್ಟಿದ್ದ ಈಶಾನ್ಯ ದಿಲ್ಲಿಯಲ್ಲಿ ಈಗ ಜನಜೀವನ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ತಮಗೆ ಈಗ ಆಹಾರ ವಸ್ತು ಮತ್ತು ದಿನಬಳಕೆಯ ಸಾಮಗ್ರಿಗಳ ಕೊರತೆ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಗುರುವಾರದಿಂದ ಸರಕಾರೇತರ ಸಂಸ್ಥೆ(ಎನ್‌ಜಿಒ)ಗಳು ಹಾಗೂ ಸ್ವಯಂ ಸೇವಕರು ನಗರದೆಲ್ಲೆಡೆ ಸ್ಥಳೀಯರ ಸಹಕಾರದಿಂದ ಅಗತ್ಯದ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಂಗಡಿಯನ್ನು ದಾಸ್ತಾನು ಕೋಣೆಯನ್ನಾಗಿ ಪರಿವರ್ತಿಸಿ ಅಲ್ಲಿಂದ ಪಡಿತರ ಹಾಗೂ ಆಹಾರ ವಸ್ತುಗಳ ವಿತರಣೆ ಕಾರ್ಯ ನಡೆಸಲಾಗುತ್ತಿದೆ. ಸ್ಥಳೀಯ ಮಹಿಳೆಯರಿಗೆ ಕ್ರಮ ಸಂಖ್ಯೆ ಇರುವ ಚೀಟಿಯನ್ನು ವಿತರಿಸಲಾಗುತ್ತಿದೆ. ಈ ಚೀಟಿಯನ್ನು ತೋರಿಸಿದರೆ ಅನ್ನ, ಖಾದ್ಯ ತೈಲ, ಚಹಾಪುಡಿ, ಸಕ್ಕರೆ ಮತ್ತು ಉಪ್ಪು ಇರುವ ಪ್ಯಾಕೇಟನ್ನು ನೀಡಲಾಗುತ್ತಿದೆ.

ಈಗ ಬದುಕುಳಿಯುವುದೇ ಮಹತ್ವದ ವಿಷಯವಾಗಿದೆ. ನಮ್ಮಲ್ಲಿ ಹಲವರು ಎರಡು ಮೂರು ದಿನಗಳಿಂದ ಊಟವೇ ಮಾಡಿರಲಿಲ್ಲ. ಆದರೆ ಹಸಿದವರ ನೆರವಿಗೆ ಸಂಘ ಸಂಸ್ಥೆಗಳು, ದಾನಿಗಳು ಧಾವಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಪಡಿತರ ಮತ್ತು ಆಹಾರ ವಸ್ತುಗಳನ್ನು ಪಡೆಯುತ್ತಿದ್ದೇವೆ. ಆದರೆ ಶೇರ್‌ಪುರ ಮತ್ತು ಚಾಂದ್‌ಬಾಗ್ ಪ್ರದೇಶದ ಜನತೆ ಇನ್ನೂ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸ್ಥಳೀಯ ಉದ್ಯಮಿ, ಆಹಾರ ವಿತರಣೆ ಪ್ರಕ್ರಿಯೆಯ ಸಂಯೋಜಕ ಮುಹಮ್ಮದ್ ಅಸ್ಲಾಂ ಹೇಳಿದ್ದಾರೆ.

ಶನಿವಾರ ಸಂಜೆ ಆಹಾರದ ಪ್ಯಾಕೇಟ್‌ಗಳನ್ನು ವಿತರಿಸಲಾಗುವುದು ಎಂದು ಯಮುನಾ ವಿಹಾರ ಪ್ರದೇಶದ ಮಹಿಳೆಯರಿಗೆ ತಿಳಿಸಲಾಗಿತ್ತು. ಮಧ್ಯಾಹ್ನದ ವೇಳೆಗೇ ಸುಮಾರು 150 ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಇವರೊಳಗೆ ಮಾತಿನ ಚಕಮಕಿಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ. ದೊಡ್ಡವರು ಹಸಿವೆಯನ್ನು ತಾಳಿಕೊಳ್ಳಬಹುದು. ಆದರೆ ಮಕ್ಕಳಿಗೆ ಆಹಾರ ಅಗತ್ಯವಾಗಿದೆ. ಪತಿ ದಿನಗೂಲಿ ಮಾಡುತ್ತಿದ್ದರು. ಆದರೆ ಈಗ ಮಾಡಲು ಕೆಲಸವಿಲ್ಲದೆ ಉಪವಾಸ ಇರುವಂತಾಗಿದೆ ಎಂದು ಮೌಜ್‌ಪುರದ ನಿವಾಸಿ ರುಬೀನಾ ಎಂಬವರು ಹೇಳಿದ್ದಾರೆ.

 ಹಿಂಸಾಚಾರದಿಂದ ಉದ್ಯಮ, ಅಂಗಡಿ, ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಅಂಗಡಿ ತೆರೆಯಲೂ ವ್ಯಾಪಾರಿಗಳು ಹೆದರುತ್ತಿದ್ದಾರೆ. ಅಂಗಡಿ ತೆರೆದರೂ ಗ್ರಾಹಕರು ಬರುತ್ತಾರೆ ಎಂಬ ಗ್ಯಾರಂಟಿಯಿಲ್ಲ, ಜನತೆ ಮನೆಯಿಂದ ಹೊರಹೋಗಲು ಇನ್ನೂ ಹೆದರುತ್ತಿದ್ದಾರೆ ಎಂದು ವ್ಯಾಪಾರಿಗಳು ಸಮಸ್ಯೆ ತೋಡಿಕೊಂಡಿದ್ದಾರೆ. ಕೆಲವು ಅಂಗಡಿಯವರು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದು ದೈನಂದಿನ ಬಳಿಕೆಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ.

 ಹಿಂಸಾಚಾರ ಕೊನೆಗೊಂಡಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ನಮ್ಮ ಸಂಘರ್ಷ ಇನ್ನೂ ಮುಂದುವರಿದಿದೆ. ಕಿ.ಗ್ರಾಂಗೆ 20 ರೂ. ಬೆಲೆ ಇರುವ ಬಟಾಟೆಯನ್ನು 50 ರೂ.ಗೆ ಮಾರುತ್ತಿದ್ದಾರೆ. ಕೆಲವು ಅಂಗಡಿಗಳಲ್ಲಿ ಒಂದು ಲೀಟರ್ ಹಾಲನ್ನು 100 ರೂ.ಗೆ ಮಾರುತ್ತಿದ್ದಾರೆ. ದಿನಗೂಲಿ ನೌಕರರಾಗಿರುವ ನಮಗೆ ಈಗ ಉದ್ಯೋಗವೂ ಇಲ್ಲ. ದುಬಾರಿ ಬೆಲೆ ವಿಧಿಸುವ ಕಾರಣ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಿದೆ. ಸದ್ಯಕ್ಕೆ ಇತರರು ನೀಡುವ ಸಹಾಯ ಹಸ್ತವನ್ನೇ ನಂಬಿಕೊಂಡಿದ್ದೇವೆ ಎಂದು ಸಕೀನಾ ಎಂಬವರು ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತರಿಗೆ ಸಹಾಯ ಕೋರಿ ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ದಿಲ್ಲಿ ವಿವಿಯ ಉತ್ತರ ಕ್ಯಾಂಪಸ್ ವಿಭಾಗದವರೂ ಪಡಿತರ ದೇಣಿಗೆ ನೀಡಿದ್ದಾರೆ. ಸಿಖ್ ಸಮುದಾಯದವರು ಲಂಗಾರ್ ವ್ಯವಸ್ಥೆ ಮಾಡಿ ದಿನಕ್ಕೆ ಮೂರು ಬಾರಿ ಉಪಾಹಾರ ಒದಗಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ಸ್ಥಳೀಯರಾದ ಮುಹಮ್ಮದ್ ಅಸ್ಲಾಂ ಹೇಳಿದ್ದಾರೆ.

ಸಾಮುದಾಯಿಕ ಅಡುಗೆ ಕೋಣೆ

ಹಿಂಸಾಚಾರದ ಕಿಚ್ಚಿನಿಂದ ತಪ್ಪಿಸಿಕೊಂಡಿದ್ದ ಕೆಲವು ಮನೆಗಳ ಅಡುಗೆ ಕೋಣೆ ಈಗ ಸಾಮುದಾಯಿಕ ಅಡುಗೆ ಕೋಣೆಯಂತಾಗಿದೆ. ಒಂದು ಮನೆಯ ಅಡುಗೆ ಕೋಣೆಯಲ್ಲಿ ನಾಲ್ಕೈದು ಮನೆಯವರು ಅಡುಗೆ ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಶಿವವಿಹಾರ ಪ್ರದೇಶದಲ್ಲಿ ಹಲವು ಮನೆಗಳು ಹಿಂಸಾಚಾರದ ದಳ್ಳುರಿಯಿಂದ ತಪ್ಪಿಸಿಕೊಂಡಿದ್ದು ಈ ಮನೆಗಳ ಅಡುಗೆ ಕೋಣೆಯಲ್ಲಿ ಉಳಿದಿದ್ದ ಆಹಾರ ಪದಾರ್ಥಗಳನ್ನು ಸಮೀಪದ ಕೆಲವು ಮನೆಗಳಿಗೆ ಹಂಚಲಾಗಿದೆ. ಅಗತ್ಯ ಬಿದ್ದವರಿಗೆ ಚಹಾ, ಬಿಸ್ಕಿಟ್, ತಿಂಡಿಗಳನ್ನು ಒದಗಿಸಿದ್ದೇವೆ. ನಮ್ಮಲ್ಲಿ ಇರುವುದನ್ನು ಹಂಚಿ ತಿನ್ನುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News