ಪ್ರತಿಭಟನೆಯ ಧ್ವನಿಯನ್ನು ಹೊಸಕಿ ಹಾಕುವ ಸಂಚು

Update: 2020-03-02 06:13 GMT

ಬೆ ಂಗಳೂರಿನ ಟೌನ್‌ಹಾಲ್ ಬೇರೆ ಬೇರೆ ಕಾರಣಗಳಿಗಾಗಿ ಸುದ್ದಿಯಾಗುತ್ತಾ ಬಂದಿದೆ. ಹಿಂದೊಮ್ಮೆ ಇದೇ ಟೌನ್‌ಹಾಲ್‌ನ್ನು ಸಾಲಕ್ಕಾಗಿ ಅಡವಿಡಲು ಬೆಂಗಳೂರು ನಗರಪಾಲಿಕೆ ನಿರ್ಧರಿಸಿತ್ತು. ಬರೀ 200 ಕೋಟಿ ರೂಪಾಯಿ ಸಾಲ ಪಡೆಯಲು ಪಾರಂಪರಿಕ ಕಟ್ಟಡವಾದ ಟೌನ್‌ಹಾಲ್‌ನ್ನು ಅಡವಿಡಲು ಮುಂದಾದಾಗ ಇದೇ ಟೌನ್‌ಹಾಲ್ ಮುಂದೆ ಕನ್ನಡ ಪ್ರೇಮಿಗಳು ಪ್ರತಿಭಟನೆ ನಡೆಸಿದ್ದರು. ಟೌನ್ ಹಾಲ್ ಎನ್ನುವುದು ಬೆಂಗಳೂರಿನ ಕುತ್ತಿಗೆಯ ಕರಿಮಣಿ ಸರದಂತೆ. ಕರಿಮಣಿ ಸರವನ್ನು ಅಡವಿಟ್ಟು ಸಾಲ ಪಡೆಯಲು ಮುಂದಾದ ನಗರಪಾಲಿಕೆಯ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಟೌನ್‌ಹಾಲ್‌ನ ಕುರಿತಂತೆ ಬಿಬಿಎಂಪಿ ಅದೆಷ್ಟು ಸಂಕುಚಿತ ಮನಸ್ಥಿತಿಯನ್ನು ಹೊಂದಿದೆ ಎನ್ನುವುದನ್ನು ಇದು ತಿಳಿಸುತ್ತ್ತದೆ. ಟೌನ್ ಹಾಲ್ ಎಂದರೆ ಬಿಬಿಎಂಪಿಗೆ ಹಣ ಸಂಪಾದಿಸಿಕೊಡುವ ಒಂದು ಸಭಾಭವನ ಅಷ್ಟೇ ಎಂದು ಅದು ತಿಳಿದುಕೊಂಡಿದೆ. ಅದಕ್ಕಿರುವ ಸಾಂಸ್ಕೃತಿಕ ಹಿನ್ನೆಲೆ ಬೇಡವಾಗಿದೆ.

ಈ ಟೌನ್‌ಹಾಲ್ ಎನ್ನುವುದು ಬೆಂಗಳೂರಿನ ಹೃದಯವಿದ್ದಂತೆ. ಕನ್ನಡಿಗರ ಮಾತುಗಳು, ಭಾವನೆಗಳು, ಕಳೆದ ನೂರು ವರ್ಷಗಳಿಂದ ಇಲ್ಲಿ ಅಂಕುರವೊಡೆದಿವೆ. ಚಿಗುರು ಬಿಟ್ಟಿವೆ. ಕಾಯಾಗಿ, ಹಣ್ಣಾಗಿ ಫಲಕೊಟ್ಟಿವೆ. ಇಲ್ಲಿ ಅನುರಣಿಸಿದ ಗೆಜ್ಜೆಗಳ ಸದ್ದುಗಳು, ಘೋಷಣೆಗಳು, ಹಿರಿಯರ ಭಾಷಣಗಳು, ರಾಜಕೀಯ ನಿರ್ಧಾರಗಳು ಕರ್ನಾಟಕವನ್ನು ಕಟ್ಟುವಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸಿದೆ. ಟೌನ್‌ಹಾಲ್‌ಗೆ ಸುದೀರ್ಘ ಇತಿಹಾಸವಿದೆ. ಅದು ತಲೆಯೆತ್ತಿದ್ದು 1933ರಲ್ಲಿ ಕೃಷ್ಣ ರಾಜೇಂದ್ರ ಒಡೆಯರ್ ಕಾಲದಲ್ಲಿ. ಅವರೇ ಈ ಟೌನ್‌ಹಾಲ್‌ಗೆ ಶಿಲಾನ್ಯಾಸ ನೆರವೇರಿಸಿದರು. ಮಿರ್ಝಾ ಇಸ್ಮಾಯೀಲ್ ನೇತೃತ್ವದಲ್ಲಿ ಈ ಕಟ್ಟಡ ನಿರ್ಮಾಣ ನಡೆಯಿತು. ಸೆಪ್ಟಂಬರ್ 11, 1935ರಂದು ಕಂಠೀರವ ನರಸಿಂಹ ರಾಜ ಒಡೆಯರ್ ಈ ಕಟ್ಟಡವನ್ನು ಉದ್ಘಾಟಿಸಿದರು. ಒಡೆಯರ ಕಣ್ಗಾವಲಿನಲ್ಲೇ ಮುಂದೆ ಕಟ್ಟಡಕ್ಕೆ ಒಂದು ಅಂತಸ್ತು ದೊರಕಿತು. ಎರಡು ಬಾರಿ ಈ ಕಟ್ಟಡ ಪುನರ್‌ನವೀಕರಣಗೊಂಡಿದೆ. ಈ ಟೌನ್ ಹಾಲ್ ಹಲವು ದಶಕಗಳಿಂದ ಕನ್ನಡದ ಧ್ವನಿಯನ್ನು ಪ್ರತಿನಿಧಿಸುತ್ತಾ ಬಂದಿದೆ. ವಿಶೇಷವೆಂದರೆ, ಬೆಂಗಳೂರಿನ ಟೌನ್‌ಹಾಲ್ ಸುದ್ದಿಯಲ್ಲಿರುವುದು ಅದರ ಒಳಗಡೆ ನಡೆಯುವ ಕಾರ್ಯಕ್ರಮಗಳಿಗಿಂತ, ಹೊರಗೆ ನಡೆಯುವ ಪ್ರತಿಭಟನೆಗಳಿಗಾಗಿ. ಇದರ ಮುಂದೆ ನಿಂತು ಅದೆಷ್ಟೋ ಪ್ರತಿಭಟನಾಕಾರರು ಈ ನೆಲದ ಬೇಡಿಕೆಗಳನ್ನು ಮುಂದಿಟ್ಟು ಘೋಷಣೆಗಳನ್ನು ಕೂಗಿದ್ದಾರೆ. ರೈತರು, ಕಾರ್ಮಿಕರು, ಕಲಾವಿದರು, ಚಿಂತಕರು, ಸಾಹಿತಿಗಳು...ಹೀಗೆ ಬೇರೆ ಬೇರೆ ಕ್ಷೇತ್ರಗಳ ಜನರು ಈ ನಾಡಿನ ಅಸ್ಮಿತೆಗೆ ಅನ್ಯಾಯವಾದಾಗ ಈ ಟೌನ್‌ಹಾಲ್ ಮುಂದೆಯೇ ನಿಂತು ಧ್ವನಿಯೆತ್ತಿದ್ದಾರೆ. ಮುಖ್ಯವಾಗಿ, ಅದು ಟೌನ್‌ಹಾಲ್‌ನ ಹೊರಗಿನ ಧ್ವನಿಯೇ ಅಲ್ಲ, ಟೌನ್‌ಹಾಲ್‌ನ ಒಳಗಿರುವ ಧ್ವನಿಯ ಪ್ರತಿಧ್ವನಿಯಾಗಿದೆ.

ವಿಪರ್ಯಾಸವೆಂದರೆ, ಟೌನ್‌ಹಾಲ್‌ನ ಹೊರಗಿನ ಈ ಧ್ವನಿಯನ್ನು ಹೊಸಕಿ ಹಾಕುವುದಕ್ಕೆ ಸ್ವತಃ ಬಿಬಿಎಂಪಿ ಮುಂದಾಗಿದೆ. ಶನಿವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ‘ಟೌನ್‌ಹಾಲ್ ಎದುರು ಇನ್ನು ಮುಂದೆ ಯಾವುದೇ ರೀತಿಯ ಮುಷ್ಕರ, ಪ್ರತಿಭಟನೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಅನುಮತಿ ನೀಡಬಾರದು’ ಎಂಬ ನಿರ್ಣಯವನ್ನು ಅವಿರೋಧವಾಗಿ ತೆಗೆದುಕೊಳ್ಳಲಾಗಿದೆ. ಸಭಾ ಕಾರ್ಯಕ್ರಮಗಳನ್ನು ನಡೆಸಲು ಇದರಿಂದ ತೊಂದರೆಯಾಗುತ್ತದೆ ಎನ್ನುವುದು ಬಿಬಿಎಂಪಿಯ ಆಕ್ಷೇಪವಾಗಿದೆ. ಸದ್ಯದ ದಿನಗಳಲ್ಲಿ ವ್ಯವಸ್ಥೆ ಪ್ರತಿಭಟನೆಗಳನ್ನು ಹೊಸಕಿ ಹಾಕುವುದಕ್ಕೆ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಿವೆ. ಅದರ ಒಂದು ಭಾಗವಾಗಿ ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಯಬಾರದು ಎಂದು ಬಿಬಿಎಂಪಿ ಬಯಸುತ್ತಿದೆಯೇ ಹೊರತು, ಟೌನ್‌ಹಾಲ್‌ನೊಳಗೆ ನಡೆಯುವ ಕಾರ್ಯಕ್ರಮಗಳ ಮೇಲಿನ ಹಿತಾಸಕ್ತಿಯಿಂದಲ್ಲ. ಟೌನ್‌ಹಾಲ್‌ನ ಮುಂದೆ ನಡೆಯುವ ಪ್ರತಿಭಟನೆಯಿಂದ ವಾಹನಸಂಚಾರಕ್ಕೆ ತೊಂದರೆಯಾಗುತ್ತದೆ, ಕಾರ್ಯಕ್ರಮಗಳಿಗೆ ಅಡಚಣೆಯಾಗುತ್ತದೆ ಎನ್ನುವುದೇ ಹಸಿ ಸುಳ್ಳು. ಯಾವಾಗ, ಯಾವ ಕಾರ್ಯಕ್ರಮಗಳಿಗೆ ಪ್ರತಿಭಟನೆಯಿಂದ ಅನಾನುಕೂಲವಾಗಿದೆ ಎನ್ನುವುದನ್ನು ಬಿಬಿಎಂಪಿ ಸ್ಪಷ್ಟ ಪಡಿಸಿಲ್ಲ. ಹಾಗೆ ನೋಡಿದರೆ ಟೌನ್‌ಹಾಲ್‌ನ ಮುಂದೆ ನಡೆಯುವ ಪ್ರತಿಭಟನೆಗಳ ಬಗ್ಗೆ ಈ ಹಿಂದೆ ಕೆಲವು ನಾಟಕಕಾರರು, ಕಲಾವಿದರು ಬಿಬಿಎಂಪಿಗೆ ಮನವಿ ನೀಡಿದ್ದರು. ಅವರೆಲ್ಲ ಮೃದುವಾದ ‘ಬಲಪಂಥೀಯ ನಿಲುವಿನ ಕಲಾವಿದರು’ ಎನ್ನುವ ಅಂಶವನ್ನು ನಾವು ಗಮನಿಸಬೇಕು. ಸರಕಾರವನ್ನು ಓಲೈಸುವುದಕ್ಕಾಗಿಯೇ ಆ ಕಲಾವಿದರು ಪ್ರತಿಭಟನಾಕಾರರ ವಿರುದ್ಧ ಮನವಿಯನ್ನು ಸಲ್ಲಿಸಿದ್ದರು. ನಾಟಕ, ಕಲೆ ಪರೋಕ್ಷವಾಗಿ ಈ ನಾಡಿನ ಶ್ರೀಸಾಮಾನ್ಯನ ಬದುಕಿನ ಪ್ರತಿಧ್ವನಿಯೆನ್ನುವುದನ್ನು ಈ ಸಂದರ್ಭದಲ್ಲಿ ಕಲಾವಿದರು ಮರೆತಿದ್ದರು. ಟೌನ್‌ಹಾಲ್‌ನ ಹೊರಗೆ ನಡೆಯುವ ಪ್ರತಿಭಟನೆ ಕಲಾವಿದರಿಗೆ ತೊಂದರೆಯಾಗುತ್ತದೆಯಾದರೆ, ಟೌನ್‌ಹಾಲ್‌ನ ಒಳಗೆ ನಡೆಯುವ ನಾಟಕಗಳೂ ಪ್ರಭುತ್ವಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ. ನಾಟಕಗಳ ಉದ್ದೇಶ ಕೇವಲ ಮನರಂಜಿಸುವುದಲ್ಲ ಎನ್ನುವುದನ್ನು ಈ ಕಲಾವಿದರು ಅರ್ಥ ಮಾಡಿಕೊಂಡಿಕೊಳ್ಳಬೇಕು. ಇದೀಗ ಕಲಾವಿದರ ಮನವಿಯನ್ನೇ ಮುಂದಿಟ್ಟು ಬಿಬಿಎಂಪಿಯೊಳಗಿರುವ ರಾಜಕೀಯ ಶಕ್ತಿಗಳು ಪ್ರತಿಭಟನೆಗಳಿಗೆ ತಡೆಯೊಡ್ಡಲು ಮುಂದಾಗಿದ್ದಾರೆ.

ಇಂದು ದೇಶ ಭಾಗಶಃ ತುರ್ತುಪರಿಸ್ಥಿತಿಯ ಕಾವಲಿಯಲ್ಲಿ ಬೇಯುತ್ತಿದೆ. ಕವಿತೆ ಓದಿದ ಕವಿಗಳನ್ನು ಬಂಧಿಸಲಾಗುತ್ತಿದೆ. ಸರಕಾರವನ್ನು ಟೀಕಿಸಿದವರನ್ನು ‘ದೇಶದ್ರೋಹಿ’ಗಳೆಂದು ಕರೆದು ಬಂಧಿಸಲಾಗುತ್ತಿದೆ. ಸಿಎಎ ವಿರುದ್ಧ ಇಡೀ ದೇಶ ಒಂದಾಗಿ ಧ್ವನಿಯೆತ್ತಿದೆ ಮಾತ್ರವಲ್ಲ, ಅದರ ವಿರುದ್ಧ ಸಂಘಟಿತವಾಗುತ್ತಿದೆ. ಬಿಬಿಎಂಪಿಯೊಳಗಿರುವ ಹಿತಾಸಕ್ತಿಗಳಿಗೆ ಈ ಪ್ರತಿಭಟನೆಗಳು ತಲೆನೋವಾಗಿ ಪರಿಣಮಿಸಿದೆ. ಆದುದರಿಂದಲೇ, ಟೌನ್‌ಹಾಲ್‌ನ ಎದುರು ಪ್ರತಿಭಟನೆ ನಿಷೇಧಿಸಲು ಮುಂದಾಗಿದೆ. ಇದು ಮೊದಲ ಹಂತ. ಮುಂದಿನ ದಿನಗಳಲ್ಲಿ ಟೌನ್‌ಹಾಲ್‌ನ ಒಳಗೆ ಎಂತಹ ಕಾರ್ಯಕ್ರಮಗಳು ನಡೆಯಬೇಕು, ನಡೆಯಬಾರದು ಎನ್ನುವುದರ ಬಗ್ಗೆಯೂ ಆದೇಶಗಳು ಬರಬಹುದು. ಆದುದರಿಂದ ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸುವ ತಮ್ಮ ಹಕ್ಕುಗಳಿಗಾಗಿ ಎಲ್ಲ ಕ್ಷೇತ್ರಗಳ ಜನರು ಒಂದಾಗಿ ಬೀದಿಗಿಳಿಯಬೇಕು. ಯಾಕೆಂದರೆ ಇಲ್ಲಿ ಕೇಂದ್ರ ಬಿಂದು ಟೌನ್‌ಹಾಲ್ ಅಲ್ಲ, ಪ್ರತಿಭಟನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಕಲಾವಿದರು, ನಾಟಕಕಾರರು ರಾಜಕಾರಣಿಗಳ ಬಾಲ ಹಿಡಿದು ಕಲೆಯ ವೌಲ್ಯಗಳಿಗೆ ಅಪಮಾನ ಮಾಡದೆ, ಬಿಬಿಎಂಪಿ ನಿರ್ಧಾರವನ್ನು ಟೌನ್‌ಹಾಲ್ ಅಂಗಳದಲ್ಲೇ ನಿಂತು ಪ್ರತಿಭಟಿಸಬೇಕು. ಇಲ್ಲವಾದರೆ ಹಂತಹಂತವಾಗಿ ಪ್ರತಿಭಟನೆ ನಡೆಯುವ ಎಲ್ಲ ಸ್ಥಳಗಳನ್ನು ಸರಕಾರ ನಿಷೇಧಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News