'ಹೋಳಿ ಹಬ್ಬದ ನಂತರವಷ್ಟೇ ದಿಲ್ಲಿ ಹಿಂಸಾಚಾರದ ಬಗ್ಗೆ ಚರ್ಚೆ': ಸ್ಪೀಕರ್ ಮಾತಿಗೆ ವಿಪಕ್ಷಗಳ ಆಕ್ರೋಶ

Update: 2020-03-03 11:11 GMT

ಹೊಸದಿಲ್ಲಿ: ಸಂಸತ್ತಿನಲ್ಲಿ ದಿಲ್ಲಿ ಹಿಂಸಾಚಾರದ ಕುರಿತ ಚರ್ಚೆ ಮಾರ್ಚ್ 10ರ ಹೋಳಿ ಹಬ್ಬದ ನಂತರವಷ್ಟೇ ನಡೆಯುವುದು ಎಂದು ವಿಪಕ್ಷಗಳ ಕೋಲಾಹಲದ ನಡುವೆ ಸ್ಪೀಕರ್ ಓಂ ಬಿರ್ಲಾ ಇಂದು ಘೋಷಿಸಿದರು.

"ನೀವೆಲ್ಲರೂ ಅಧ್ಯಕ್ಷರ ತೀರ್ಮಾನವನ್ನು ಒಪ್ಪುವುದಾಗಿ ಹೇಳಿದ್ದೀರಿ. ಸರಕಾರ ಕೂಡ ಚರ್ಚೆಗೆ ಸಿದ್ಧವಿದೆ. ಇದು ಹೋಳಿಯ ನಂತರ ಮಾರ್ಚ್ 11ರಂದು ನಡೆಯಲಿದೆ'' ಎಂದು ಸ್ಪೀಕರ್ ಹೇಳಿದರು.

48 ಮಂದಿಯನ್ನು ಬಲಿ ಪಡೆದ ಕಳೆದ ವಾರದ ಹಿಂಸಾಚಾರದ ಕುರಿತಂತೆ  ಚರ್ಚೆ ನಡೆಯಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿರುವಂತೆಯೇ ಸ್ಪೀಕರ್ ಅವರ ಈ ಘೋಷಣೆ ವಿಪಕ್ಷ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಈ ಕುರಿತು ಚರ್ಚೆ ನಡೆಸಲು ಈಗ ಸಕಾಲವಲ್ಲ ಎಂದು ವಿಪಕ್ಷಗಳ ಒತ್ತಾಯದ ನಡುವೆಯೂ ಸ್ಪೀಕರ್ ಹೇಳಿದರು. ಹೋಳಿ ಹಬ್ಬದ ನಂತರ ಚರ್ಚೆ ನಡೆಯುವುದು ಎಂದು ಸ್ಪೀಕರ್ ಹೇಳುತ್ತಿದ್ದಂತೆಯೇ ಕೆರಳಿದ ಹಲವು ವಿಪಕ್ಷ ಸದಸ್ಯರು ಕಾಗದದ ಚೂರುಗಳನ್ನು ಹಾಗೂ ಕಾಗದದ ಉಂಡೆಗಳನ್ನು ಸ್ಪೀಕರ್ ಕುರ್ಚಿಯತ್ತ ಎಸೆದರೆ ಕೆಲವರು ಪ್ರತಿಭಟಿಸಲು  ಧಾವಿಸಿ ಬಂದರು.

ತಮ್ಮ ಮಾತುಗಳನ್ನು ಆಲಿಸದೆ ಪ್ರತಿಭಟಿಸಲು ಯತ್ನಿಸುವ ಸದಸ್ಯರನ್ನು ಇಡೀ ಅಧಿವೇಶನದ ಅವಧಿಗೆ ವಜಾ ಮಾಡಲಾಗುವುದು ಎಂದು ಸ್ಪೀಕರ್ ಎಚ್ಚರಿಸಿದರೂ ಕಾಂಗ್ರೆಸ್ ಪಕ್ಷದ ಅಧೀರ್ ರಂಜನ್ ಚೌಧುರಿ ಆಡಳಿತ ಪಕ್ಷಗಳ ಸದಸ್ಯರು ಕುಳಿತೆಡೆ ತೆರಳಿದ್ದರು. ಕೊನೆಗೆ ವಾದ ವಿವಾದಗಳು ತಣ್ಣಗಾಗುವ ಲಕ್ಷಣಗಳು ಕಾಣದೆ ದಿನದ ಕಲಾಪವನ್ನು ಸ್ಪೀಕರ್ ಮುಂದೂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News