ನಿಮ್ಮ ನಡವಳಿಕೆ ರಾಜ್ಯದ ಜನತೆಗೆ ಮಾಡಿದ ಅವಮಾನ: ವಿಪಕ್ಷಗಳ ವಿರುದ್ಧ ಛಾಟಿ ಬೀಸಿದ ಸ್ಪೀಕರ್ ಕಾಗೇರಿ

Update: 2020-03-03 16:05 GMT

ಬೆಂಗಳೂರು, ಮಾ. 3: ‘ನಿಮ್ಮ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನದ ಕುರಿತ ವಿಶೇಷ ಚರ್ಚೆ ವೇಳೆ ಸದನದಲ್ಲಿನ ನಿಮ್ಮ(ಕಾಂಗ್ರೆಸ್) ನಡವಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಸಂವಿಧಾನ ಶಿಲ್ಪಿಗಳಿಗೆ ನೀಡುವ ಗೌರವ ಅಲ್ಲ. ವಿಪಕ್ಷಗಳ ನಡವಳಿಕೆ ರಾಜ್ಯದ ಜನತೆಗೆ ಮಾಡಿದ ಅವಮಾನ’ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಪಕ್ಷ ಕಾಂಗ್ರೆಸ್ ವಿರುದ್ಧ ಛಾಟಿ ಬೀಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತ ಯತ್ನಾಳ್‌ರ ಅವಹೇಳಕಾರಿ ಹೇಳಿಕೆ ಖಂಡಿಸಿ ವಿಪಕ್ಷ ಕಾಂಗ್ರೆಸ್ ಧರಣಿ ಸತ್ಯಾಗ್ರಹ, ಗದ್ದಲದ ಮಧ್ಯೆ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಸಂವಿಧಾನದ ಕುರಿತ ವಿಶೇಷ ಚರ್ಚೆ, ಪ್ರಾಸ್ತಾವಿಕ ಭಾಷಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಕ್ರೋಶಿತರಾಗಿ ಏರಿದ ಧ್ವನಿಯಲ್ಲಿ ಪ್ರತಿಕ್ರಿಯಿಸಿದರು.

ಸ್ಪೀಕರ್ ಕಾಗೇರಿ ಸಂವಿಧಾನದ ಬಗ್ಗೆ ಪ್ರಾಸ್ತಾವಿಕ ಭಾಷಣ ಓದುತ್ತಿದ್ದಾಗಲೂ ಸ್ಪೀಕರ್ ಪೀಠದ ಮುಂದಿನ ಬಾವಿಯಲ್ಲಿದ್ದ ಕಾಂಗ್ರೆಸ್ ಸದಸ್ಯರು ಯತ್ನಾಳ್ ಮತ್ತು ಬಿಜೆಪಿ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಅಲ್ಲದೆ, ಸಂವಿಧಾನ ರಕ್ಷಿಸಿ ಎಂದು ಆಗ್ರಹಿಸಿದರು.

ಗದ್ದಲದ ನಡುವೆಯೆ ಸಂವಿಧಾನದ ಕುರಿತು ಸುದೀರ್ಘ 40 ಪುಟಗಳ ಭಾಷಣದ ಪ್ರತಿಯನ್ನು ಓದಿಸಿದ ಸ್ಪೀಕರ್ ಕಾಗೇರಿ, ‘ಸಂವಿಧಾನದ ಕುರಿತ ಚರ್ಚೆ ವೇಳೆ ಸದನದಲ್ಲಿ ನಿಮ್ಮ ನಡವಳಿಕೆ ಯಾವುದೇ ಸಂದರ್ಭದಲ್ಲಿಯೂ ಶೋಭೆಯಲ್ಲ. ನಿಮ್ಮ ನಡವಳಿಕೆ ಸಂವಿಧಾನದ ಆಶಯಕ್ಕೆ ವಿರುದ್ಧ. ಇದು ಸದನ ಮತ್ತು ಸಂವಿಧಾನಕ್ಕೆ ಗೌರವ ತರುವುದಿಲ್ಲ’ ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ 50ರಿಂದ 60 ವರ್ಷಗಳ ಕಾಲ ಆಡಳಿತ ನಡೆಸಿದ್ದೀರಿ. ಕಲಾಪದಲ್ಲಿ ನೀವು ಹೇಗೆ ನಡೆದುಕೊಂಡಿದ್ದೀರಿ ಎಂದು ರಾಜ್ಯದ ಜನತೆ ನೋಡಿದ್ದಾರೆ. ನಿಮ್ಮ ಬಗ್ಗೆ ಜನತೆ ನಿರ್ಧಾರ ಮಾಡಲಿದ್ದಾರೆ’ ಎಂದು ಸ್ಪೀಕರ್ ಕಾಗೇರಿ, ಎಚ್ಚರಿಕೆ ನೀಡುವ ದಾಟಿಯಲ್ಲೇ ಆಕ್ರೋಶ ಹೊರಹಾಕಿದರು.

ಕೂಡಲೇ ಪ್ರತಿಭಟನೆಯನ್ನು ಕೈಬಿಟ್ಟು ಸದನದಲ್ಲಿ ಸಂವಿಧಾನದ ಕುರಿತಾಗಿ ಚರ್ಚೆಗೆ ಅವಕಾಶ ನೀಡಿ ಎಂದು ವಿನಂತಿ ಮಾಡಿದರೂ, ಕಾಂಗ್ರೆಸ್ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಇದರಿಂದ ಸದನದ ಸ್ಪೀಕರ್ ಕಾಗೇರಿ ಕಲಾಪವನ್ನು ಬುಧವಾರ(ಮಾ.4)ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News