ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ಚರ್ಚೆಗೆ ಸ್ಪೀಕರ್ ರೂಲಿಂಗ್

Update: 2020-03-03 16:43 GMT

ಬೆಂಗಳೂರು, ಮಾ.3: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನ್ನು ಈ ಅಧಿವೇಶನ ಅವಧಿಯಲ್ಲಿ ಸದನದಿಂದ ಉಚ್ಛಾಟಿಸಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಸತತ ಎರಡು ದಿನಗಳಿಂದ ನಡೆದ ವಿಧಾನಭೆಯ ಚರ್ಚೆ ಸಂಬಂಧ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೀರ್ಪು ಒಂದನ್ನು ಪ್ರಕಟಿಸಿ ಗಮನ ಸೆಳೆದರು.

ಮಂಗಳವಾರ ವಿಧಾನಸಭೆಯಲ್ಲಿ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ನಿಯಮ 363ರಡಿ ಸೂಚನೆಯೊಂದನ್ನು ನೀಡಿ ವಿಧಾನಸಭೆ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಉಚ್ಛಾಟಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಇದು ನಿಯಮ ವ್ಯಾಪ್ತಿಗೆ ಬರುವುದಿಲ್ಲ, ಆದರೂ, ನಾನು ವಿವೇಚನಾಧಿಕಾರ ಬಳಸಿ ಚರ್ಚಿಸಲು ಒಪ್ಪಿದ್ದೆ ಎಂದರು.

ಸದನದ ಸದಸ್ಯರೊಬ್ಬರ ಮೇಲೆ ಆಪಾದನೆ ಮಾಡುತ್ತಿರುವುದರಿಂದ ನಿಯಮ 328ರ ಮೇರೆಗೆ ಸೂಚನೆ ಕೊಡಬೇಕಾಗಿತ್ತು. ಸೂಚನೆಯ ಪ್ರತಿಯನ್ನು ನಾನೇ ಸದಸ್ಯರಿಗೆ, ಸಂಸದೀಯ ವ್ಯವಹಾರಗಳ ಸಚಿವರಿಗೆ ನೀಡಬೇಕಾಗಿತ್ತು. ಅಲ್ಲದೆ, ಸೂಚನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿವೆ. ಕೌಲ್ ಆಂಡ್ ಶಖ್ದರ್ ಪುಸ್ತಕದ ಪುಟ ಸಂಖ್ಯೆ 1024ರಲ್ಲಿ ವಿವರಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯ ಆಧಾರದ ಮೇಲೆ ಮಾಡಲಾಗುವ ಆಪಾದನೆ ಪ್ರಸ್ತಾಪಿಸಲು ಅನುಮತಿ ನೀಡುವುದಕ್ಕೆ ಅವಕಾಶವಿರುವುದಿಲ್ಲ ಎಂದು ವಿವರಿಸಿದರು.

ವಿರೋಧ ಪಕ್ಷದ ನಾಯಕರು ನೀಡಿರುವ ಸೂಚನೆಯಲ್ಲಿ ಯತ್ನಾಳ್ ಬಗ್ಗೆ ಹೇಳಬೇಕಾದ್ದೆಲ್ಲವನ್ನು ಹೇಳಿ ಅವರಿಗೆ ಯಾವ ರೀತಿಯ ಶಿಕ್ಷೆಯನ್ನು ವಿಧಿಸಬೇಕು ಎಂಬುದನ್ನು ಸಹ ತಿಳಿಸಿದ್ದಾರೆ. ಆದರೆ, ಸದಸ್ಯರಿಗೆ ಶಿಕ್ಷೆಯನ್ನು ವಿಧಿಸುವ ಅಧಿಕಾರ ಮಾನ್ಯ ಸಭಾಧ್ಯಕ್ಷರು ಮತ್ತು ಸದನಕ್ಕೆ ಸೇರಿರುತ್ತದೆ ಎಂದರು.

ಸೂಚನೆಯಲ್ಲಿ ಪ್ರಸ್ತಾಪಿಸಿರುವ ಘಟನೆಯು ಸದನದ ಹೊರಗಡೆ ನಡೆದಿದೆ. ಅಲ್ಲದೆ, ಸಂವಿಧಾನದ ಅನುಚ್ಛೇದ 51 ಎ ಅಡಿಯಲ್ಲಿ ವಿವರಿಸಿರುವ ಮೂಲಭೂತ ಕರ್ತವ್ಯಗಳ ಉಲ್ಲಂಘನೆಯನ್ನು ಯತ್ನಾಳ್ ಮಾಡಿಲ್ಲ ಎಂದು ಕಂಡು ಬಂದಿರುವ ಹಿನ್ನೆಲೆ ವಿಪಕ್ಷದ ನಾಯಕರ ಸೂಚನೆ ಪರಿಗಣಿಸುವುದಿಲ್ಲ. ಹೀಗಾಗಿ, ಸೂಚನೆ ತಿರಸ್ಕರಿಸಲಾಗಿದೆ ಎಂದು ತೀರ್ಪು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News