ಕಾಂಗ್ರೆಸ್ ಕ್ಷಮೆಯಾಚಿಸಲು ಸಚಿವ ಸಿ.ಟಿ.ರವಿ ಒತ್ತಾಯ

Update: 2020-03-03 16:52 GMT

ಬೆಂಗಳೂರು, ಮಾ. 3: ಇಂದಿರಾ ಗಾಂಧಿಯವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ವೇಳೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜಯಪ್ರಕಾಶ್ ನಾರಾಯಣ್ ಅವರನ್ನು ಜೈಲಿಗೆ ಕಳುಹಿಸಿದ ತಪ್ಪಿಗೆ ಇಂದು ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಸಚಿವ ಸಿ.ಟಿ.ರವಿ ಒತ್ತಾಯಿಸಿದರು.

ಮಂಗಳವಾರ ಪರಿಷತ್ತಿನಲ್ಲಿ ನಿಯಮ 342 ಅಡಿಯಲ್ಲಿ ಎಸ್.ಆರ್.ಪಾಟೀಲ್ ವಿಷಯ ಪ್ರಸ್ತಾಪಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವರು, ದೊರೆಸ್ವಾಮಿಯವರ ಬಗ್ಗೆ ಮಾತನಾಡಿದ್ದಕ್ಕೆ ಸಂವಿಧಾನಕ್ಕೆ ಅಪಮಾನ ಎನ್ನುತ್ತಿದ್ದಾರೆ. ಆದರೆ, ಅಂದು ಜಯಪ್ರಕಾಶ್ ನಾರಾಯಣ್‌ರನ್ನು ಜೈಲಿಗೆ ಕಳಿಸಿದ್ದು ಸಂವಿಧಾನ ವಿರೋಧಿಯಲ್ಲವೇ. ಅದರ ಬಗ್ಗೆ ಮಾತನಾಡುವುದಿಲ್ಲ ಯಾಕೆ ಎಂದು ತಿರುಗೇಟು ನೀಡಿದರು.

ಯಾರೇ ಆಗಲಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧವಾಗಿ ಮಾತನಾಡುವುದು ತಪ್ಪು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್ ಬ್ರಿಗೇಡ್‌ನ ಸದಸ್ಯರು ಯಾರನ್ನೆಲ್ಲಾ ಜೈಲಿಗೆ ಹಾಕಬೇಕು ಎನ್ನುವ ಪಟ್ಟಿ ನೀಡುತ್ತಿದ್ದರು. ಆ ಪಟ್ಟಿ ನೀಡುತ್ತಿದ್ದವರಲ್ಲಿ ನಿಮ್ಮಲ್ಲಿ ಯಾರಾದರೂ ಇದ್ದಿರಬಹುದು ಎಂದು ಕಾಂಗ್ರೆಸ್ ಸದಸ್ಯರನ್ನು ಸಚಿವರು ಮೂದಲಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಚ್.ಎಂ. ರೇವಣ್ಣ, ವಿದ್ಯಾರ್ಥಿ ಸಂಘಟನೆಯಿಂದ ಬೆಳೆದು ಬಂದವರು ನಾವು. ನಿಮ್ಮ ಮಾತುಗಳನ್ನು ವಾಪಸ್ ಪಡೆಯಿರಿ ಎಂದು ಒತ್ತಾಯಿಸಿದರು.

ಚರ್ಚೆ ಮುಂದುವರಿಸಿದ್ದ ಎಸ್.ಆರ್.ಪಾಟೀಲ್, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿರುವ ಜೈಲುಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಲಪಾನಿ ಶಿಕ್ಷೆ ನೀಡುತ್ತಿದ್ದರು. ಇದು ಅತ್ಯಂತ ಕ್ರೂರವಾದ ಶಿಕ್ಷೆಯಾಗಿದೆ. ಇಂತಹ ಅಮಾನವೀಯ ಶಿಕ್ಷೆಗಳಿಂದ ತಪ್ಪಿಸಿಕೊಂಡು ಹೋರಾಟಗಾರರು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ನಾರಾಯಣಸ್ವಾಮಿ ಮತ್ತು ತೇಜಸ್ವಿನಿ, ಈ ಶಿಕ್ಷೆಯನ್ನು ಸಾವರ್ಕರ್ ಸಹ ಅನುಭವಿಸಿದ್ದರು ಎಂದು ಹೇಳಿದರು.

ಇವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಎಚ್.ಎಂ.ರೇವಣ್ಣ ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟವರು ಸ್ವಾತಂತ್ರ್ಯ ಹೋರಾಟಗಾರ ಹೇಗಾಗುತ್ತಾರೆ ಎಂದರು. ಇದಕ್ಕೆ ತೇಜಸ್ವಿನಿ ಪ್ರತಿಕ್ರಿಯಿಸಿ, ಅದು ಸುಳ್ಳು ಇತಿಹಾಸಕಾರರು ಸೃಷ್ಟಿಸಿರುವುದಾಗಿದೆ ಎಂದು ಸಾವರ್ಕರ್‌ರನ್ನು ಸಮರ್ಥಿಸಿಕೊಂಡ ಪ್ರಸಂಗ ನಡೆಯಿತು. ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷದವರು ಸಾವರ್ಕರ್ ಕುರಿತು ಎಲ್ಲಿಯೂ ಒಂದೇ ಒಂದು ಮಾತನ್ನೂ ಪ್ರಸ್ತಾಪ ಮಾಡಲಿಲ್ಲ ಎಂದು ಟೀಕಿಸಿದರು. ಇದೇ ವೇಳೆ ಕಾಂಗ್ರೆಸ್ ಸದಸ್ಯ ಎಚ್.ಎಂ.ರೇವಣ್ಣ, ಭಾರತ್ ಮಾತಾಕಿ ಜೈ ಅಂದ ಮಾತ್ರಕ್ಕೆ ದೇಶಪ್ರೇಮ ಆಗಲ್ಲ ಎಂದರು. ಇದಕ್ಕೆ ಬಿಜೆಪಿ ಸದಸ್ಯೆ ತೇಜಸ್ವಿನಿ, ಭಾರತ್ ಮಾತಾಕಿ ಜೈ ಅನ್ನದೇ, ಪಾಕಿಸ್ತಾನಕ್ಕೆ ಜೈಕಾರ ಹಾಕಬೇಕಾ ಎಂದು ತಿವಿದರು. ಈ ವೇಳೆ ತೇಜಸ್ವಿನಿಯ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಸಭಾಪತಿಯು ಎಸ್.ಆರ್.ಪಾಟೀಲ್ ಬಿಟ್ಟು ಯಾರ ಹೇಳಿಕೆಯೂ ಕಡತಕ್ಕೆ ಹೋಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News