ಸದನದಲ್ಲಿ 'ದೊರೆಸ್ವಾಮಿಗೆ ಧಿಕ್ಕಾರ' ಘೋಷಣೆ: ಎನ್.ರವಿಕುಮಾರ್ ವಿರುದ್ಧ ಕ್ರಮಕ್ಕೆ ಪ್ರತಿಪಕ್ಷಗಳ ಒತ್ತಾಯ

Update: 2020-03-03 17:09 GMT

ಬೆಂಗಳೂರು, ಮಾ.4: ಸದನದ ಒಳಗೆಯೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕ್ಷಮೆಯಾಚಿಸಬೇಕು. ಇಲ್ಲವೆ, ಸಭಾಪತಿ ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು.

ಮಂಗಳವಾರ ವಿಧಾನಪರಿಷತ್‌ನಲ್ಲಿ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ನನ್ನ 22 ವರ್ಷಗಳ ಸದನದ ಅನುಭವದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಕಂಡಿರಲಿಲ್ಲ. ಆದರೆ, ಇಂದು ಬಿಜೆಪಿ ಸದಸ್ಯರೊಬ್ಬರು ಮಾತನಾಡುವ ಮೂಲಕ ಸದನದ ಘನತೆಗೆ ಧಕ್ಕೆ ತಂದಿದ್ದಾರೆಂದು ವಿಷಾದಿಸಿದರು.

ಎನ್.ಎನ್.ರವಿಕುಮಾರ್ ಸದನದ ಒಳಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯನ್ನು ಅಪಮಾನ ಮಾಡಿರುವುದು ಕೆಳಮನೆಯ ಸದಸ್ಯರೊಬ್ಬರು ಮಾಡಿದ ಅಪಮಾನಕ್ಕಿಂತ ಘೋರವಾದುದ್ದಾಗಿದೆ. ಹೀಗಾಗಿ ಕೂಡಲೇ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಸಭಾಪತಿ ನಿಯಮಾನುಸಾರ ಅವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದರು.

ಇದಕ್ಕೆ ಧ್ವನಿಗೂಡಿಸಿದ ಹಿರಿಯ ಸದಸ್ಯ ಕೆ.ಸಿ.ಕೊಂಡಯ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಧಿಕ್ಕಾರ ಘೋಷಣೆ ಕೂಗುವ ಮೂಲಕ ಸದನಕ್ಕೆ ಅಗೌರವ ತಂದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮವನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವುದು ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಇದನ್ನು ಉಲ್ಲಂಘಿಸಿರುವ ಬಿಜೆಪಿ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸಭಾನಾಯಕ ಶ್ರೀನಿವಾಸ ಪೂಜಾರಿ, ಎಚ್.ಎಸ್.ದೊರೆಸ್ವಾಮಿ ಧಿಕ್ಕಾರ ಕೂಗಿದ ವಿಷಯದಲ್ಲಿ ಎನ್.ರವಿಕುಮಾರ್‌ರವರಿಂದ ಸ್ಪಷ್ಟನೆಗೆ ಅವಕಾಶ ಮಾಡಿಕೊಟ್ಟು, ಅದನ್ನು ಅಲ್ಲಿಗೆ ಮುಗಿಸಬೇಕು. ರಾಜ್ಯದ ಹತ್ತಾರು ಸಮಸ್ಯೆಗಳ ಕುರಿತು ಹಾಗೂ ಪ್ರಶ್ನಾವಳಿಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ನಂತರ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಕೆಳ ಮನೆಯ ಸದಸ್ಯರೊಬ್ಬರು ಸದನದ ಹೊರಗೆ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಅದನ್ನು ಖಂಡಿಸಿ ಸದನದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿಯೇ ಬಿಜೆಪಿ ಸದಸ್ಯ ಎನ್.ರವಿಕುಮಾರ್ ದೊರೆಸ್ವಾಮಿಗೆ ಧಿಕ್ಕಾರ ಕೂಗಿರುವುದು, ಬಿಜೆಪಿ ಸದಸ್ಯರ ವಿರುದ್ಧದ ನಮ್ಮ ಆರೋಪವನ್ನು ಸಾಬೀತು ಮಾಡಿದಂತಾಗಿದೆ. ಇದಕ್ಕೆ ಸಭಾಪತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಮಾತನಾಡಿ, ದೇಶದ ಐಕ್ಯತೆ, ಸುರಕ್ಷತೆಗೆ ಧಕ್ಕೆ ತರುವ ಶಕ್ತಿಗಳಿಗೆ ಎಚ್.ಎಸ್.ದೊರೆಸ್ವಾಮಿ ಬೆಂಬಲಿಸುವುದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ದೊರೆಸ್ವಾಮಿ ದೇಶದ ಐಕ್ಯತೆಗೆ ಎಲ್ಲಿ ಧಕ್ಕೆ ತಂದಿದ್ದಾರೆ. ಅದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು. ಈ ವೇಳೆ ಆರೋಪ-ಪ್ರತ್ಯಾರೋಪಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಭಾಪತಿ ಸದನವನ್ನು ನಾಳೆಗೆ ಮುಂದೂಡಿದರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಸದನದಲ್ಲಿಯೇ ಎಚ್.ಎಸ್.ದೊರೆಸ್ವಾಮಿಯವರನ್ನು ಕೊಲೆ ಪಾತಕಿ ಅಂದಿದ್ದಾರೆ. ಅದು ಕಡತದಲ್ಲಿ ದಾಖಲಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಬಿಜೆಪಿ ಸದಸ್ಯರು ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಇವರ ವಿರುದ್ಧವೂ ಸಭಾಪತಿಗಳು ಕ್ರಮ ಕೈಗೊಳ್ಳಬೇಕು.

-ಎಸ್.ಆರ್.ಪಾಟೀಲ್, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News