ಸಂವಿಧಾನದ ಪ್ರಸ್ತಾವನೆಯಲ್ಲಿರುವಂತೆ ನಡೆದುಕೊಳ್ಳುವ ರಾಜಕಾರಣ ನಮ್ಮದಾಗಬೇಕು: ಸ್ಪೀಕರ್ ಕಾಗೇರಿ

Update: 2020-03-03 17:43 GMT

ಬೆಂಗಳೂರು, ಮಾ. 3: ‘ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಿರುವಂತೆ ನಡೆದುಕೊಳ್ಳುವ ರಾಜಕಾರಣ ನಮ್ಮದಾಗಬೇಕು. ಆಗ ಮಾತ್ರ ರಾಜಕಾರಣಕ್ಕೆ ಅರ್ಥ ಬರುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿರುವುದನ್ನು ಸಾಧನೆ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಸಾಧಿಸುವ ಛಲ ನಾವು ಹೊಂದಬೇಕಾದ ಅಗತ್ಯತೆ ಹಿಂದಿಗಿಂತಲೂ ಇಂದು ಇದೆ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತ ಯತ್ನಾಳ್‌ರ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿಪಕ್ಷ ಕಾಂಗ್ರೆಸ್ ಧರಣಿ, ಗದ್ದಲದ ಮಧ್ಯೆ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಸಂವಿಧಾನದ ಕುರಿತ ವಿಶೇಷ ಚರ್ಚೆ ಮೇಲೆ ಪ್ರಸ್ತಾವಿಕ ಭಾಷಣ ಮಾಡಿದರು.

‘ನಗರೀಕರಣ ಹೆಚ್ಚುತ್ತಿದ್ದು, ಗ್ರಾಮೀಣ ಮತ್ತು ನಗರದ ಅಂತರಗಳು ನಿವಾರಣೆಯಾಗುತ್ತಿದೆ. ಆದರೆ, ಗ್ರಾಮೀಣ ಜೀವನ ಮತ್ತು ಸಂಸ್ಕೃತಿ ಅಪಾಯದ ಅಂಚಿನಲ್ಲಿದೆ. ಮಾಹಿತಿ ಯುಗದ ಸಂದರ್ಭದಲ್ಲಿ ಗ್ರಾಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ತುರ್ತು ಅಗತ್ಯತೆಯಲ್ಲಿ ನಾವು ಕೆಲಸ ಮಾಡಬೇಕಿದೆ’ ಎಂದು ಕಾಗೇರಿ ಸಲಹೆ ಮಾಡಿದರು.

‘ನಮ್ಮ ದೇಶದ ರಾಜ್ಯಾಂಗ ಹಾಗೂ ಕಾರ್ಯಾಂಗದ ಮುಂದೆ ಇರುವ ಬೆಟ್ಟದಂತಹ ಸವಾಲು ಎಂದರೆ ಬಡತನ ನಿರ್ಮೂಲನೆ ಮಾಡುವುದು. ಭ್ರಷ್ಟಾಚಾರ, ಅಸಮಾನತೆಯ ವಾತಾವರಣವನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ಹಾಗೂ ರಾಜಕೀಯ ಇಚ್ಛಾಶಕ್ತಿ ಕುಸಿತಗೊಂಡಿದೆ ಎನ್ನುವ ಮನೋಭಾವ ಸಾರ್ವಜನಿಕರಲ್ಲಿ ಬೇರೂರಿದೆ. ಹಾಗಾಗಿ ಜನರ ನಂಬಿಕೆ ಹಾಗೂ ಆಶೋತ್ತರಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಜನಪ್ರತಿನಿಧಿಗಳಾದ ನಾವು ಸಮಾಜದ ಅಭಿವೃದ್ಧಿಗಾಗಿ ದೃಢ ಸಂಕಲ್ಪದೊಂದಿಗೆ ಸಂವಿಧಾನದ ರಚನಾಕಾರರ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಈಡೇರಿಸುವತ್ತ ಶ್ರಮಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಸಂವಿಧಾನದಲ್ಲಿರುವ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಲ್ಲಿ ದೇಶವು ಅಭಿವೃದ್ಧಿ ಹೊಂದಿದ ದೇಶವೆಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲ. ಜನಪ್ರತಿನಿಧಿಗಳಾದ ನಾವು ಬದ್ಧತೆ, ಶಿಸ್ತು, ಪ್ರಾಮಾಣಿಕತೆ, ಪಾರದರ್ಶಕ ಗುಣಗಳಿಂದ ಕಾರ್ಯ ನಿರ್ವಹಿಸಿ ರಾಜ್ಯವೂ ಸೇರಿದಂತೆ ಭಾರತ ಒಂದು ಅಭಿವೃದ್ಧಿ ಹೊಂದಿದ ದೇಶವೆಂದು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಈ ಪ್ರಜಾಸತ್ತಾತ್ಮಕ ಹಾಗೂ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸೋಣ.

‘ಪರಿವರ್ತನೆಯ ಪರಿಕಲ್ಪನೆಯೆಂದರೆ ಹಳತನ್ನು ಕೆಡವಿ ಹೊಸತನ್ನು ನಿರ್ಮಿಸುವುದೇ ಅಥವಾ ಇರುವುದನ್ನು ಮಾರ್ಪಡಿಸಿ ಹೊಸ ಅವಶ್ಯಕತೆಗಳಿಗೆ ತಕ್ಕಂತೆ ಸರಿ ಹೊಂದಿಸುವುದೇ ಎಂಬ ಜಿಜ್ಞಾಸೆಯು ಬರುತ್ತದೆ. ಅದೇ ಸಂವಿಧಾನವು ಪರಿವರ್ತನೆ ಎಷ್ಟರ ಮಟ್ಟಿಗೆ ತರುತ್ತದೆ, ಅದು ಜನಾಭಿಪ್ರಾಯವನ್ನು ಮೀರಬಲ್ಲುದೇ ಮತ್ತು ಎಷ್ಟರ ಮಟ್ಟಿಗೆ ಬದಲಾದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳಿಗೆ ತಕ್ಕಂತೆ ಸಂವಿಧಾನವು ತಾವೇ ಪರಿವರ್ತಿತವಾಗುತ್ತದೆ ಎಂಬ ಪ್ರಶ್ನೆಯೂ ಮೂಡುತ್ತದೆ’ ಎಂದು ಅವರು ಉಲ್ಲೇಖಿಸಿದರು.

ಆಶಯ ಪೂರ್ಣ: ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳುವುದೇ ಸಾಂವಿಧಾನಿಕ ನೈತಿಕತೆ. ಈ ನೈತಿಕತೆಯನ್ನು ಮತದಾರರಿಂದ ಹಿಡಿದು ರಾಷ್ಟ್ರಪತಿಯವರೆಗೂ ಪಾಲಿಸಬೇಕಿದೆ. ವೃತ್ತಿ ಬದುಕು, ಸಾಮಾಜಿಕ ಜೀವನ ಮತ್ತು ವೈಯಕ್ತಿಕ ನೆಲೆಯಲ್ಲೂ ನೈತಿಕತೆಯನ್ನು ಮೆರೆದರೆ ಸಂವಿಧಾನದ ಆಶಯ ಪೂರ್ಣಗೊಳ್ಳುತ್ತದೆ. ಶಾಸನ ಸಭೆಗಳಲ್ಲಿ ನಾವು ವ್ಯಕ್ತಪಡಿಸುವ ನೈತಿಕತೆ ಎಂತಹದ್ದು ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ. ನಮ್ಮ ನೈತಿಕತೆ ಸಂವಿಧಾನಿಕ ಹಾಗೂ ಮಾನಸಿಕ ನಡಳವಳಿಕೆಗೆ ಪೂರಕವಾಗಿರಬೇಕು. ಇದು ನಮ್ಮೆಲ್ಲರ ಹೊಣೆ ಆಗಿರಬೇಕು ಎಂದು ಕಾಗೇರಿ ಪ್ರತಿಪಾದಿಸಿದರು.

ನಾವೆಲ್ಲರೂ ಸಂವಿಧಾನದ ಕುರಿತು ಯುವ ಪೀಳಿಗೆಯಲ್ಲಿ ಅರಿವು ಹಾಗೂ ಬದ್ಧತೆಯನ್ನು ಮೂಡಿಸಲು ಪ್ರಯತ್ನಿಸೋಣ. ಈ ನಿಟ್ಟಿನಲ್ಲಿ ತಾವುಗಳೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ಸಂವಿಧಾನದ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾಗೇರಿ ಕೆರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News