ಹಿಂಸಾಚಾರ ತಡೆಯಲು ಪೊಲೀಸರು ಸಿದ್ಧವಾಗಿಯೇ ಇದ್ದರು, ಆದರೆ ಆದೇಶವೇ ಬರಲಿಲ್ಲ

Update: 2020-03-06 08:07 GMT

►ಆಘಾತಕಾರಿ ವಿಷಯಗಳು ಬಹಿರಂಗ

ಹೊಸದಿಲ್ಲಿ, ಮಾ.6: ಈಶಾನ್ಯ ದಿಲ್ಲಿಯಲ್ಲಿ ಫೆ.23ರಿಂದ ಫೆ.26ರ ನಡುವೆ ನಡೆದಿದ್ದ ಹಿಂಸಾಚಾರವನ್ನು ತಡೆಯುವಲ್ಲಿ ದಿಲ್ಲಿ ಪೊಲೀಸರ ವೈಫಲ್ಯ ಮತ್ತು ಪರಿಣಾಮವಾಗಿ ಪಡೆಯ ವರ್ಚಸ್ಸಿಗೆ ಉಂಟಾಗಿರುವ ಹಾನಿಯ ಬಗ್ಗೆ ಹಲವಾರು ಹಿರಿಯ ಅಧಿಕಾರಿಗಳಲ್ಲಿ ವಿಷಾದ ಮಡುವುಗಟ್ಟಿದೆ.

ಹಿಂಸಾಗ್ರಸ್ತ ದಿನಗಳಲ್ಲಿ ಪೊಲೀಸರು ಹಾಗೇಕೆ ವರ್ತಿಸಿದ್ದರು ಎನ್ನುವುದನ್ನು ತಿಳಿಯಲು ಸುದ್ದಿ ಜಾಲತಾಣ ‘thequint.com’ ಕೆಲವು ಇಂತಹ ಅಧಿಕಾರಿಗಳನ್ನು ಮಾತನಾಡಿಸಿದ್ದಾರೆ.

‘ದಿಲ್ಲಿಯ ಹಿಂದಿನ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರು ದಿಲ್ಲಿ ದಂಗೆಗಳಿಗಾಗಿ ನೆನಪಿನಲ್ಲಿರುವುದು ಮಾತ್ರವಲ್ಲ,ದಿಲ್ಲಿ ಪೊಲೀಸರ ವರ್ಚಸ್ಸನ್ನು ಉತ್ತರ ಪ್ರದೇಶ ಪೊಲೀಸರ ಮಟ್ಟಕ್ಕೆ, ಬಹುಶಃ ಅದಕ್ಕೂ ಕೆಳಗಿನ ಮಟ್ಟಕ್ಕಾಗಿ ತಂದಿರುವುದಕ್ಕಾಗಿಯೂ ನೆನಪಿನಲ್ಲಿ ಉಳಿಯಲಿದ್ದಾರೆ. 2005ರ ಸರಣಿ ಬಾಂಬ್ ಸ್ಫೋಟಗಳಿರಲಿ ಅಥವಾ ನಿರ್ಭಯಾ ಅತ್ಯಾಚಾರ-ಹತ್ಯೆ ಪ್ರಕರಣವಿರಲಿ, ನಗರದಲ್ಲಿ ಪ್ರಮುಖ ಅಹಿತಕರ ಘಟನೆಗಳು ನಡೆದಾಗ ಜನರು ನಮ್ಮನ್ನು (ದಿಲ್ಲಿ ಪೊಲೀಸ್) ಟೀಕಿಸಿದ್ದು ಹೌದು, ಆದರೆ ಅವರು ನಮ್ಮಲ್ಲಿ ವಿಶ್ವಾಸವನ್ನು ಕಳೆದುಕೊಂಡಿರಲಿಲ್ಲ. ಆದರೆ ಈಗ ಸರಿಪಡಿಸಲೂ ಸಾಧ್ಯವಾಗದಷ್ಟು ಹಾನಿಯಾಗಿದೆ ’ಎಂದು ದಿಲ್ಲಿ ಪೊಲೀಸ್ ಪಡೆಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿಯೋರ್ವರು ನೋವನ್ನು ತೋಡಿಕೊಂಡರು.

ತಕ್ಷಣ ಕಾರ್ಯಾಚರಣೆಗಿಳಿಯುವಲ್ಲಿ ಪೊಲೀಸರ ವೈಫಲ್ಯವು ಹಿಂಸಾಚಾರವು ದಿನಗಳ ಕಾಲ ಮುಂದುವರಿಯಲು ಅವಕಾಶ ನೀಡಿತ್ತು ಎಂದು ಹೇಳಿದ ಮಾಜಿ ದಿಲ್ಲಿ ಪೊಲೀಸ್ ಆಯುಕ್ತ ಅಜಯ ರಾಜ್ ಶರ್ಮಾ ಅವರು, ಕಪಿಲ ಮಿಶ್ರಾ ಮತ್ತು ಪ್ರವೇಶ ವರ್ಮಾ ಅವರ ದ್ವೇಷಭಾಷಣಗಳು ಜನರನ್ನು ಪ್ರಚೋದಿಸಿದ್ದವು. ಆದರೆ ಪೊಲೀಸರು ಏನೂ ಮಾಡಿರಲಿಲ್ಲ. ದಂಗೆಗಳು ಆರಂಭಗೊಂಡ ತಕ್ಷಣ ಪೊಲೀಸರು ಕಾರ್ಯಾಚರಿಸಬೇಕಿತ್ತು ಮತ್ತು ಜನರನ್ನು ಬಂಧಿಸಬೇಕಿತ್ತು ಎಂದರು.

ಹಿಂಸಾಚಾರದ ಬಗ್ಗೆ ಮಾಹಿತಿ ಪೊಲೀಸರನ್ನು ತಲುಪುವುದು ವಿಳಂಬವಾಗಿತ್ತೇ?ಅವರ ಬಳಿ ಸಾಕಷ್ಟು ಸಿಬ್ಬಂದಿ ಬಲವಿರಲಿಲ್ಲವೇ?

ಶಾಹೀನ್‌ಬಾಗ್ ಪ್ರತಿಭಟನೆ ಆರಂಭಗೊಂಡ ಬಳಿಕ ದಿಲ್ಲಿಯಲ್ಲಿ ದಂಗೆಯಂತಹ ಸ್ಥಿತಿಯನ್ನು ಪೊಲೀಸರು ನಿರೀಕ್ಷಿಸಬೇಕಿತ್ತು. ಪೊಲೀಸ್ ಠಾಣೆಗಳ ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ)ಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದರು? ಯಾವುದೂ ಇಲ್ಲ ಎಂದು ಹಾಲಿ ದಿಲ್ಲಿ ಪೊಲೀಸ್‌ನಲ್ಲಿ ಸೇವೆಯಲ್ಲಿರುವ ಐಪಿಎಸ್ ಅಧಿಕಾರಿಯೋರ್ವರು ‘thequint.com’ಗೆ ತಿಳಿಸಿದರು. ಫೆ.23ರಂದು ಆರಂಭಗೊಂಡಿದ್ದ ಹಿಂಸಾಚಾರವನ್ನು ಸುಲಭವಾಗಿ ನಿಯಂತ್ರಿಸಬಹುದಿತ್ತು, ಆದರೆ ಪೊಲೀಸರು ಫೆ.25ರವರೆಗೂ ನಿಷ್ಕ್ರಿಯರಾಗಿದ್ದರು ಎಂದರು.

  ಎಸ್‌ಎಚ್‌ಒಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಎಷ್ಟೊಂದು ಅಧಿಕಾರವನ್ನು ಹೊಂದಿರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಅವರ ಪ್ರಾಥಮಿಕ ಕರ್ತವ್ಯವಾಗಿದೆ. ಯಾವುದೇ ಪ್ರದೇಶದಲ್ಲಿ ಯಾವುದೇ ಅಪರಾಧ ಅಥವಾ ಅಶಾಂತಿ ಸಂಭವಿಸಿದರೆ ಅದನ್ನು ತನ್ನ ಮೇಲಧಿಕಾರಿಗಳ ಗಮನಕ್ಕೆ ತರುವುದು ಅಲ್ಲಿ ಬೀಟ್ ಕರ್ತವ್ಯದಲ್ಲಿರುವ ಪೊಲೀಸರ ಕರ್ತವ್ಯವಾಗಿದೆ. ವೈರ್‌ಲೆಸ್ ಅತ್ಯಂತ ವೇಗದ ಸಂಪರ್ಕ ಸಾಧನವಾಗಿದೆ. ಹೀಗಾಗಿ ಬೀಟ್ ಪೊಲೀಸ್ ತನ್ನ ಪ್ರದೇಶದಲ್ಲಿ ಹಿಂಸಾಚಾರ ಅಥವಾ ಯಾವುದೇ ಅಪರಾಧದ ಮಾಹಿತಿಯನ್ನು ನೀಡಿದರೆ ಅದು ವೈರ್‌ಲೆಸ್ ಉಪಕರಣಕ್ಕೆ ಸಮೀಪವಿರುವ ದಿಲ್ಲಿಯ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯನ್ನೂ ತಲುಪುತ್ತದೆ. ರವಿವಾರ ಹಿಂಸಾಚಾರ ಆರಂಭಗೊಂಡಾಗ ಬೀಟ್ ಪೊಲೀಸರು ಖಂಡಿತವಾಗಿಯೂ ವೈರ್‌ಲೆಸ್ ಕರೆಗಳನ್ನು ಮಾಡಿದ್ದಾರೆ, ನಾನೇ ಖುದ್ದು ಅದನ್ನು ಕೇಳಿದ್ದೇನೆ. ಹೀಗಿರುವಾಗ ಈಶಾನ್ಯ ದಿಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳೇಕೆ ನಿಷ್ಕ್ರಿಯರಾಗಿದ್ದರು? ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಪೊಲೀಸ್ ಕೇಂದ್ರಕಚೇರಿಯಲ್ಲಿ ಕುಳಿತಿದ್ದ ಉನ್ನತ ಅಧಿಕಾರಿಗಳೇಕೆ ಆದೇಶಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.

ಏಳು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚಿನ ಹಿಂಸಾಚಾರ ನಡೆದಿತ್ತು. ಒಂದು ಠಾಣೆಯಲ್ಲಿ ಕನಿಷ್ಠ 150 ಪೊಲೀಸ್ ಸಿಬ್ಬಂದಿಗಳಿದ್ದಾರೆ. ಫೆ.23-24ರಂದು ಹಿಂಸಾಚಾರ ಪರಾಕಾಷ್ಠೆಯಲ್ಲಿದ್ದಾಗ ಪೊಲೀಸರು ಪ್ರತಿ ನಿಮಿಷಕ್ಕೊಂದು ಹತಾಶ ಕರೆಗಳನ್ನು ಸ್ವೀಕರಿಸಿದ್ದರು ಎಂದು ವರದಿಗಳು ಹೇಳಿವೆ.

ಅಂದರೆ ಕನಿಷ್ಠ 1,050 ಪೊಲೀಸರು ಹಿಂಸಾಚಾರದ ನೇರ ಮಾಹಿತಿಗಳನ್ನು ಪಡೆಯುತ್ತಿದ್ದರು. ಈಶಾನ್ಯ ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಎಸಿಪಿ, ಎಸ್‌ಸಿಪಿ ಮತ್ತು ಅಂತಿಮವಾಗಿ ಪೊಲೀಸ್ ಕಮಿಷನರ್‌ಗೆ ಮಾಹಿತಿಯನ್ನು ತಲುಪಿಸಬೇಕಿತ್ತು. ಆದರೆ ಈ ಯಾವುದೇ ಅಧಿಕಾರಿಗಳು ಆ ಕೆಲಸವನ್ನು ಮಾಡಿರಲಿಲ್ಲ ಮತ್ತು ದಿಲ್ಲಿ ಹೊತ್ತಿ ಉರಿಯುತ್ತಿರುವುದನ್ನು ನೋಡುತ್ತಿದ್ದರು.

ಎಸ್‌ಎಚ್‌ಒ, ಎಸಿಪಿ ಅಥವಾ ಡಿಸಿಪಿ ಬಳಿ ಸಾಕಷ್ಟು ಸಿಬ್ಬಂದಿಗಳಿರದಿದ್ದರೆ ಅವರೇಕೆ ಹೆಚ್ಚುವರಿ ಪಡೆಗಳಿಗಾಗಿ ಕೋರಲಿಲ್ಲ? ಹಿಂಸಾಗ್ರಸ್ತ ಸ್ಥಳಗಳನ್ನು ತಲುಪಲು ಹೆಚ್ಚುವರಿ ಪಡೆಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತಿರಲಿಲ್ಲ. ಈಶಾನ್ಯ ದಿಲ್ಲಿಯಲ್ಲಿ ಏನು ನಡೆಯುತ್ತಿತ್ತು ಎನ್ನುವುದು ನನಗೆ ಚೆನ್ನಾಗಿ ತಿಳಿದಿತ್ತು. ಸೋಮವಾರ ಸಂಜೆಯೇ ನಾನು ನನ್ನ ಸಿಬ್ಬಂದಿಗಳನ್ನು ಸ್ಟಾಂಡ್‌ಬೈ ಆಗಿ ಸನ್ನದ್ಧ ಸ್ಥಿತಿಯಲ್ಲಿರಿಸಿದ್ದೆ. ಆದರೆ ಮೇಲಧಿಕಾರಿಗಳ ಆದೇಶದ ಹೊರತು ನಾನು ನನ್ನ ಪಡೆಯೊಂದಿಗೆ ತೆರಳುವಂತಿರಲಿಲ್ಲ. ಕೊನೆಗೂ ಮಂಗಳವಾರ ಬೆಳಿಗ್ಗ್ಗೆ ಹಿಂಸಾಪೀಡಿತ ಸ್ಥಳಕ್ಕೆ ತೆರಳುವಂತೆ ಆದೇಶ ಲಭಿಸಿತ್ತು ಎಂದು ಹಾಲಿ ಸೇವೆಯಲ್ಲಿರುವ ಐಪಿಎಸ್ ಅಧಿಕಾರಿ ಹೇಳಿದರು.

ಹಿಂಸಾಚಾರದಲ್ಲಿ ನಾಡಪಿಸ್ತೂಲುಗಳು ಬಳಕೆಯಾಗಿದ್ದವು. ಈಶಾನ್ಯ ದಿಲ್ಲಿಯ ಹಲವಾರು ಮನೆಗಳಲ್ಲಿ ಇವು ತಯಾರಾಗುತ್ತಿವೆ. ಪ್ರದೇಶದ ಎಸ್‌ಎಚ್‌ಒಗಳಿಗೂ ಇದು ಗೊತ್ತಿದೆ. ಇಲ್ಲಿ ಕಮಿಷನ್ ಹಲವರ ಜೇಬುಗಳನ್ನು ಸೇರುತ್ತದೆ ಮತ್ತು ಈ ದಂಧೆ ನಿರಾತಂಕವಾಗಿ ಮುಂದುವರಿದಿದೆ. ಇನ್ನಷ್ಟು ಹಿಂಸಾಚಾರವನ್ನು ತಡೆಯಲು ಈಗ ಪೊಲೀಸರು ದಾಳಿ ನಡೆಸಿ ಇಂತಹ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಬೇಕು ಎಂದು ಇನ್ಸ್‌ಪೆಕ್ಟರ್ ಓರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News