ತಾರಾ ಬಾಯಿಯ ಮರು ಓದು...

Update: 2020-03-07 18:34 GMT

1881ರಲ್ಲಿ ‘ಪುಣೆ ವೈಭವ್’ನಲ್ಲಿ ಪ್ರಕಟವಾದ ಲೇಖನವೊಂದು ತಾರಾಬಾಯಿಯವರನ್ನು ತೀವ್ರವಾಗಿ ಬಾಧಿಸಿರಬೇಕು. ಬ್ರಾಹ್ಮಣ ವಿಧವೆಯೊಬ್ಬಳ ಗರ್ಭಪಾತಕ್ಕೆ ಸಂಬಂಧಿಸಿದ ಲೇಖನವದು. ಸೂರತ್‌ನ ವಿಜಯಲಕ್ಷ್ಮೀ ಎಂಬ ಬ್ರಾಹ್ಮಣ ವಿಧವೆಯ ಕರುಣಾಜನಕ ಕತೆ ಅದು. ಸಮಾಜದ ತಿರಸ್ಕಾರ-ಬಹಿಷ್ಕಾರಗಳಿಗೆ ಅಂಜಿ ಗರ್ಭಪಾತಮಾಡಿಸಿಕೊಳ್ಳುವ ಈ ನತದೃಷ್ಟೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತಂತೆ. ಇದನ್ನು ಓದಿ ಕನಲಿದ ತಾರಾಬಾಯಿಯವರು ‘ಸ್ತ್ರೀ-ಪುರುಷ್ ತುಲನ್’ ಕಿರುಹೊತ್ತಿಗೆ ರಚಿಸಿ ಪ್ರಕಟಿಸಿದರು. ಈ ಹೊತ್ತಿಗೆ ಬಿರುಗಾಳಿಯನ್ನೇ ಎಬ್ಬಿಸಿತು. ಪುರುಷ ಪ್ರಧಾನ ಸಮಾಜ ಹಾಗೂ ಜಾತಿವ್ಯವಸ್ಥೆಯ ಕಟು ಟೀಕೆಯಾದ ಈ ಹೊತ್ತಿಗೆ 1882ರಲ್ಲಿ ಪುಣೆಯಲ್ಲಿ ಪ್ರಕಟಗೊಂಡಿತು. ಪುರುಷರು ಮತ್ತು ಜಾತಿವ್ಯವಸ್ಥೆ ಕುರಿತು ಹೊತ್ತಿಗೆಯೊಂದನ್ನು ರಚಿಸಿದ ಹತ್ತೊಂಬತ್ತನೆಯ ಶತಮಾನದ ಮೊದಲ ಸ್ತ್ರೀವಾದಿ ಲೇಖಕಿ ಎನ್ನುವ ಮಾನ್ಯತೆಗೆ ತಾರಾಬಾಯಿ ಪಾತ್ರರಾದರು.


ಇಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನ. ಪ್ರಪಂಚದಾದ್ಯಂತ ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆ ಕುರಿತು ಮತ್ತೊಮ್ಮೆ ಚರ್ಚಾ ಗೋಷ್ಠಿಗಳು, ಉತ್ಸವಗಳು ನಡೆಯಲಿವೆ. ಠರಾವುಗಳು ಅಂಗೀಕಾರವಾಗಲಿವೆ. ನಾಳೆ ಪತ್ರಿಕೆಗಳಲ್ಲಿ ಇವುಗಳೊಟ್ಟಿಗೆ ಮಹಿಳೆಯರ ಮೇಲಣ ದೌರ್ಜನ್ಯಗಳು, ಶೋಷಣೆಗಳು, ಭಯ ‘ನಿರ್ಭಯ’ ಪ್ರಕರಣಗಳೂ ಪ್ರಕಟವಾಗುತ್ತದೆ, ಎಂದಿನಂತೆ. ನಮ್ಮ ದೇಶದಲ್ಲಂತೂ ಮಹಿಳೆಯರನ್ನು ಯತ್ರ ನಾರ್ಯಂತೆ.... ಎಂದು ಪೂಜಿಸುವ ಮಾತನಾಡುತ್ತಾ, ವಾಸ್ತವದಲ್ಲಿ ಅವರನ್ನು ಸಾಧ್ಯವಾದಲೆಲ್ಲ ಮಟ್ಟಹಾಕುವ ಪುರುಷ ‘ಅಹಂ’ ಕೆಲಸ ಮಾಡುತ್ತಲೇ ಇರುತ್ತದೆ. ಇದು ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಪುರುಷ ಪ್ರಧಾನ ವ್ಯವಸ್ಥೆಯ ಈ ಅಪ್ರಮಾಣಿಕತೆ, ಸೋಗಲಾಡಿತನಗಳ ವಿರುದ್ಧ ಹತ್ತೊಂಬತ್ತನೆಯ ಶತಮಾನದಲ್ಲೇ ದನಿ ಎತ್ತಿದ ದಿಟ್ಟ ಮಹಿಳೆ ತಾರಾ ಬಾಯಿ ಶಿಂಧೆ. ಯಾರು ಈ ತಾರಾ ಬಾಯಿ ಎಂದಿರಾ? ತಾರಾಬಾಯಿ ಶಿಂಧೆ, ‘ಸ್ತ್ರೀ ಪುರುಷ್ ತುಲನಾ’ ಎನ್ನುವ ಹೊತ್ತಿಗೆ ರಚಿಸಿ ಭಾರತೀಯ ನಾರಿಯರ ಸ್ಥಿತಿಗತಿ ಮತ್ತು ಪುರುಷರ ಗೋಮುಖವ್ಯಾಘ್ರತನವನ್ನು ಜಗಜ್ಜ್ಜಾಹೀರುಗೊಳಿಸಿದ ಭಾರತದ ಮೊದಲ ಸ್ತ್ರೀವಾದಿ ಹೋರಾಟಗಾರ್ತಿ.

ತಾರಾಬಾಯಿ ಶಿಂಧೆ ಜನಿಸಿದ್ದು 1850ರಲ್ಲಿ, ಇಪ್ಪತ್ತನೇ ಶತಮಾನದ ಪ್ರಾರಂಭಿಕ ವರ್ಷಗಳವರೆಗೆ ಜೀವಿಸಿದ್ದರು. ಗತಿಸಿದ್ದು 1910ರಲ್ಲಿ. ಅವರು ಹುಟ್ಟಿದ ಸ್ಥಳ ಮಹಾರಾಷ್ಟ್ರದ ಈಗಿನ ಬೆರಾರ್ ಪ್ರದೇಶದಲ್ಲಿದೆ. ಅವರ ಕುಟುಂಬ ಅಲ್ಪಸ್ವಲ್ಪ ಜಮೀನು ಹೊಂದಿತ್ತು. ಈಕೆಯ ತಂದೆ ಬುಲ್ದಾನಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ತೀವ್ರ ಸುಧಾರಣಾವಾದಿಯಾಗಿದ್ದ ತಂದೆ ಆ ಕಾಲದ ಸಮಾಜ ಸುಧಾರಕ ಜ್ಯೋತಿ ರಾವ್ ಫುಲೆಯವರ ಸತ್ಯಶೋಧಕ ಸಮಾಜದ ಸದಸ್ಯರಾಗಿದ್ದರು. ಆ ಪ್ರದೇಶದಲ್ಲಿ ಹೆಣ್ಣುಮಕ್ಕಳ ಶಾಲೆ ಇರಲಿಲ್ಲವಾದ್ದರಿಂದ ತಾರಾ ಬಾಯಿಯ ಬಾಲ್ಯ ಶಿಕ್ಷಣ ಮನೆಯಲ್ಲೇ. ತಂದೆಯೇ ಗುರು. ತಂದೆಯಿಂದ ಮರಾಠಿ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತರು. ಎಳೆಯ ವಯಸ್ಸಿನಲ್ಲೇ ತಾರಾ ಬಾಯಿಯ ವಿವಾಹವಾಯಿತು. ಕೈಹಿಡಿದ ಗಂಡನೂ ಮಾವನ ಮನೆಯಲ್ಲೇ ವಾಸ್ತವ್ಯ ಹೂಡಿದ್ದರಿಂದ ತಾರಾಬಾಯಿಗೆ ಅತ್ತಮನೆಯ ಕಟ್ಟುಪಾಡುಗಳು, ಪ್ರತಿಬಂಧಕಗಳು, ಶಿಕ್ಷೆಗಳು ಇರಲಿಲ್ಲ. ಹೀಗಾಗಿ ಅವರಿಗೆ ತಮ್ಮ ಮನೆಯಲ್ಲೇ ಹೆಚ್ಚಿನ ಸ್ವಾತಂತ್ರ್ಯ ವಿತ್ತು. ತಾರಾಬಾಯಿ ಜ್ಯೋತಿ ರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರೊಂದಿಗೆ ಸಂಪರ್ಕ ಹೊಂದಿದ್ದು ಸಮಾಜ ಸುಧಾರಣೆಯಲ್ಲಿ, ವಿಶೇಷವಾಗಿ ಮಹಿಳೆಯರ ಬದುಕಿನ ಸುಧಾರಣೆಯಲ್ಲಿ ತೀವ್ರ ಕಾಳಜಿ ಹೊಂದಿದ್ದರು.

ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ ಮಹಾರಾಷ್ಟ್ರ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಭಾರತದ ಉಳಿದ ಪ್ರಾಂತಗಳಿಗೆ ಮಿಗಿಲಾದ ಮುನ್ನಡೆಯನ್ನು ಸಾಧಿಸಿತ್ತು. ಬ್ರಾಹ್ಮಣ ಕುಟುಂಬದ ಮಹಿಳೆಯರು ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಪ್ರವೇಶಿಸಿದ್ದರು. ಈ ವಿದ್ಯಾವಂತ ಮಹಿಳೆಯರಿಂದ ಸ್ತ್ರೀ ಸ್ವಾತಂತ್ರ್ಯದ ಸೊಲ್ಲು ಶುರುವಾಗಿತ್ತು. ಮಹಿಳೆಯರನ್ನು ಮನೆ ಚಾಕರಿಯಿಂದ ಮುಕ್ತಗೊಳಿಸಬೇಕೆಂದು ಆಗ್ರಹಪಡಿಸತೊಡಗಿದ್ದರು.

1877ರಲ್ಲಿ ಮಹಿಳೆಯರಿಗಾಗಿಯೇ ಮರಾಠಿ ನಿಯತಕಾಲಿಕವೊಂದರ (ಪುಣೆ ವೈಭವ್) ಪ್ರಕಟನೆ ಶುರುವಾಯಿತು. ಬ್ರಾಹ್ಮಣ ಕುಟುಂಬಗಳಲ್ಲಿನ ಪತ್ನಿ-ಪುತ್ರಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರ ಬೇಕು-ಬೇಡಗಳಿಗೆ ದನಿಯಾಗಿ ಈ ಪತ್ರಿಕೆ ಪ್ರಕಟವಾಗುತ್ತಿತ್ತೆಂದು ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹಾ ಬರೆಯುತ್ತಾರೆ. ವಿಧವಾ ವಿವಾಹ, ಹೆಣ್ಣುಮಕ್ಕಳ ಶಿಕ್ಷಣ, ಸತಿ ನಿಷೇಧ ಇಂತಹ ವಿಚಾರಗಳ ಚರ್ಚೆಗೆ ವೇದಿಕೆಯಾಗಿದ್ದ ಈ ಪತ್ರಿಕೆಗೆ ತಾರಾಬಾಯಿಯವರೂ ಬರೆಯುತ್ತಿದ್ದರು. ಮಹಿಳೋದ್ಧಾರ ಆ ಕಾಲದ ಸುಧಾರಣಾವಾದಿಗಳ ಮುಖ್ಯ ಕರೆಯಾಗಿದ್ದರೆ, ತಾರಾ ಬಾಯಿ ಶಿಂಧೆಯವರ ಕರೆ ಅದಕ್ಕಿಂತ ಹೆಚ್ಚು ತೀವ್ರಗಾಮಿಯಾಗಿತ್ತು. ಸ್ತ್ರೀ-ಪುರುಷರ ನಡುವಣ ಸಮಾನತೆ ಅವರ ಮುಖ್ಯ ಕಾಳಜಿಯಾಗಿತ್ತು. ಪುರುಷ ಪ್ರಧಾನ ವ್ಯವಸ್ಥೆಯ ಸಾಂಸ್ಕೃತಿಕ ಪೂರ್ವಾಗ್ರಹಗಳನ್ನು ಅವರು ಪ್ರಶ್ನಿಸಲಾರಂಭಿಸಿದ್ದರು. ಜ್ಯೋತಿ ರಾವ್ ಫುಲೆಯವರ ಪ್ರಕಾರ, ಬ್ರಾಹ್ಮಣ ಧರ್ಮ ಕೆಳಜಾತಿಯ ಜನರನ್ನು ಶೋಷಿಸುತ್ತಿತ್ತು. ಏಕೆಂದರೆ ಈ ಧರ್ಮವನ್ನು ರೂಪಿಸಿದವರು ಬ್ರಾಹ್ಮಣರೇ ಆಗಿದ್ದರು. ಪುರುಷರು ಸ್ತ್ರೀಯರನ್ನು ಶೋಷಿಸುತ್ತಿದ್ದಾರೆ ಎಂಬುದು ತಾರಾ ಬಾಯಿಯವರ ವಾದವಾಗಿತ್ತು. ಏಕೆಂದರೆ, ಪುರುಷ ಪ್ರಧಾನವ್ಯವಸ್ಥೆಯನ್ನು ರೂಪಿಸಿದವರು, ಮಹಿಳೆಯರನ್ನು ಕೀಳಾಗಿ ಕಾಣುವ ವ್ಯವಸ್ಥೆಯನ್ನು ರೂಪಿಸಿದವರು ಪುರುಷರೇ ಆಗಿದ್ದರು.

1881ರಲ್ಲಿ ‘ಪುಣೆ ವೈಭವ್’ನಲ್ಲಿ ಪ್ರಕಟವಾದ ಲೇಖನವೊಂದು ತಾರಾಬಾಯಿಯವರನ್ನು ತೀವ್ರವಾಗಿ ಬಾಧಿಸಿರಬೇಕು. ಬ್ರಾಹ್ಮಣ ವಿಧವೆಯೊಬ್ಬಳ ಗರ್ಭಪಾತಕ್ಕೆ ಸಂಬಂಧಿಸಿದ ಲೇಖನವದು. ಸೂರತ್‌ನ ವಿಜಯಲಕ್ಷ್ಮೀ ಎಂಬ ಬ್ರಾಹ್ಮಣ ವಿಧವೆಯ ಕರುಣಾಜನಕ ಕತೆ ಅದು. ಸಮಾಜದ ತಿರಸ್ಕಾರ-ಬಹಿಷ್ಕಾರಗಳಿಗೆ ಅಂಜಿ ಗರ್ಭಪಾತಮಾಡಿಸಿಕೊಳ್ಳುವ ಈ ನತದೃಷ್ಟೆಗೆ ಗಲ್ಲು ಶಿಕ್ಷೆ ವಿಧಿಸಲಾಯಿತಂತೆ. ಇದನ್ನು ಓದಿ ಕನಲಿದ ತಾರಾಬಾಯಿಯವರು ‘ಸ್ತ್ರೀ-ಪುರುಷ್ ತುಲನ್’ ಕಿರುಹೊತ್ತಿಗೆ ರಚಿಸಿ ಪ್ರಕಟಿಸಿದರು. ಈ ಹೊತ್ತಿಗೆ ಬಿರುಗಾಳಿಯನ್ನೇ ಎಬ್ಬಿಸಿತು. ಪುರುಷ ಪ್ರಧಾನ ಸಮಾಜ ಹಾಗೂ ಜಾತಿವ್ಯವಸ್ಥೆಯ ಕಟು ಟೀಕೆಯಾದ ಈ ಹೊತ್ತಿಗೆ 1882ರಲ್ಲಿ ಪುಣೆಯಲ್ಲಿ ಪ್ರಕಟಗೊಂಡಿತು. ಪುರುಷರು ಮತ್ತು ಜಾತಿವ್ಯವಸ್ಥೆ ಕುರಿತು ಹೊತ್ತಿಗೆಯೊಂದನ್ನು ರಚಿಸಿದ ಹತ್ತೊಂಬತ್ತನೆಯ ಶತಮಾನದ ಮೊದಲ ಸ್ತ್ರೀವಾದಿ ಲೇಖಕಿ ಎನ್ನುವ ಮಾನ್ಯತೆಗೆ ತಾರಾಬಾಯಿ ಪಾತ್ರರಾದರು. ರೋಸಾಲಿಂಡ್ ಒ ಹೆನ್ಸಾನ್ ಎಂಬುವರು ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಪ್ರಕಟಿಸಿದ್ದಾರೆ.

*** 

‘‘ಸ್ತ್ರೀಯರಿಗೆ ಈ ಲೋಕದಲ್ಲಿ ಎಲ್ಲ ಕಾಲಕ್ಕೂ ಕಷ್ಟಗಳು ಕಟ್ಟಿಟ್ಟ ಬುತ್ತಿ. ಎಲ್ಲ ಕಷ್ಟಕೋಟಲೆಗಳನ್ನು ಸಹಿಸಿಕೊಂಡು ಬದುಕುವ ಅವಳು ಪುರುಷನಿಂದ ಬಯಸುವುದು ಒಂದು ಒಳ್ಳೆಯ ಮಾತನ್ನು. ಪ್ರೀತಿಯ, ಪ್ರಶಂಸೆಯ ಒಂದು ಮಾತಿಗಾಗಿ ಅವಳು ಕಾತರದಿಂದ ನಿಮ್ಮತ್ತ ನೋಡುತ್ತಿರುತ್ತಾಳೆ. ಆದರೆ ನೀವೋ ಅವಳನ್ನು ಬಯ್ಯುತ್ತಾ, ಅವಮಾನದ ನುಡಿಗಳನ್ನಾಡುತ್ತ ಎಗರಾಡುತ್ತೀರಿ. ಇದರಲ್ಲಿ ನಿರಾಕರಿಸುವಂತಹದ್ದೇನಿಲ್ಲ, ಸುಳ್ಳು ಎನ್ನಲಾಗದು. ಏಕೆಂದರೆ ಇದು ಅವಳ ನಿಜವಾದ ವಿಧಿ’’ ಎಂದು ಹೆಣ್ಣಿನ ಸ್ಥಿತಿಯನ್ನು ಚಿತ್ರಿಸುತ್ತಲೇ ತಾರಾಬಾಯಿ ಎಂಟು ಅಂಶಗಳನ್ನೆತ್ತಿಕೊಂಡು ಸ್ತ್ರೀ-ಪುರುಷರ ತುಲನೆ ಮಾಡುತ್ತಾರೆ. ಹೆಣ್ಣು ಬುದ್ಧಿಯಲ್ಲಿ ಗಂಡಿಗೆ ಸರಸಾಟಿಯಲ್ಲ, ಅವಳು ಅಬಲೆ ಎನ್ನುವ ವಾದಕ್ಕೆ ತಾರಾಬಾಯಿ ಹೇಳುತ್ತಾರೆ:

‘‘ಬುದ್ಧಿಯ ವಿಷಯ ಬಂದಾಗ ನೀವು ಅವಳಿಗಿಂತ ಹೆಚ್ಚು ಬುದ್ಧಿಶಾಲಿಗಳು. ಈ ಬುದ್ಧಿಮತ್ತೆಯಿಂದಾಗಿ ನೀವು ಮಾಡದೇ ಇರುವಂತಹ ಸಾಹಸವೇನಾದರೂ ಇದೆಯಾ? ನೀವು ಮಾಡದೇ ಇರುವಂತಹ ರಾಕ್ಷಸೀ ಕೃತ್ಯ ಏನಾದರೂ ಬಾಕಿ ಉಂಟೆ? ನೀವು ಮತ್ತು ನಮ್ಮ ಶಕ್ತಿಸಾಮರ್ಥ್ಯಗಳ ಮುಂದೆ ಹೆಣ್ಣಿಗೆ ಏನು ಬಲವಿದ್ದೀತು? ಏನೇನೂ ಇಲ್ಲ.’’
ಭಾವನೆಗಳು, ಭ್ರಮೆಗಳಲ್ಲಿ ತೇಲಾಡುವ ಹೆಂಗಸರು ಹುಚ್ಚಾಟ, ಕೊಂಕಾಟ, ಖಯಾಲಿಗಳಲ್ಲಿ ಯಾರಿಗೂ ಕಮ್ಮಿಯಲ್ಲವಾದರೂ ಗಂಡಸಿನಂತೆ ಮೋಸಮಾಡುವ ಹುನ್ನಾರ, ಪಿತೂರಿಗಳನ್ನು ನಡೆಸುವುದಿಲ್ಲ ಎನ್ನುತ್ತಾ ತಾರಾಬಾಯಿ, ಹೇಳುತ್ತಾರೆ:

‘‘....ಈ ಭೂಮಿಯ ಮೇಲಿರುವ ಎಲ್ಲ ಮಹಿಳೆಯರೂ ಸೂರ್ಯನ ಬೆಳಕಿನಂತೆ ಪ್ರಕಾಶಮಾನರಲ್ಲ. ಅಥವಾ ಗಂಗೆಯಂತೆ ಒಳಗೂ ಹೊರಗೂ ಪವಿತ್ರರಲ್ಲ. ಆದರೆ ಪ್ರಪಂಚದ ಎಲ್ಲ ಮಹಿಳೆಯರನ್ನು ತಕ್ಕಡಿಯಲ್ಲಿಟ್ಟು ತೂಗಿ ನೋಡಿದಲ್ಲಿ, ನೂರರಲ್ಲಿ ಒಬ್ಬರು ನಿಮ್ಮಂತಿರಬಹುದು, ನಿಮ್ಮ ಮನಸ್ಸಿನಂತೆಯೇ ಪರಿಭ್ರಮಿಸುತ್ತಿರಬಹುದು. ಆದರೆ ಪುರುಷರಾದ ನಿಮ್ಮಲ್ಲಿ ಇವುಗಳಿಂದ ಮುುಕ್ತರಾದವರು ಒಬ್ಬರೂ ಇಲ್ಲ.’’

 ಮಹಿಳೆಯರಿಗೆ ಹೆಚ್ಚು ಓದುಬರಹ ಬಾರದಿರಬಹುದು. ಅಂದ ಮಾತ್ರಕ್ಕೆ ದೇವರು ಅವರಿಗೆ ಬುದ್ಧಿಶಕ್ತಿ ಕೊಟ್ಟಿಲ್ಲ ಎಂದರ್ಥವೇ? ಅವರು ಪುರುಷರಿಗಿಂತ ಎಷ್ಟೋ ವಾಸಿ ಎಂಬುದಕ್ಕೆ ತಾರಾಬಾಯಿ ಅಪರಾಧಗಳ ನಿದರ್ಶನ ನೀಡುತ್ತಾರೆ: ‘‘.......ನೀವು ಪುರುಷರು ಜಾಣರು. ಅದು ನಿಜ. ಒಂದು ಸಲ ಜೈಲಿಗೆ ಹೋಗಿ ನೋಡಿ ಬನ್ನಿ....ಎಷ್ಟು ಜೈಲುಗಳು ಹೆಂಗಸರಿಂದ ಭರ್ತಿಯಾಗಿವೆ? ಎರಡು ಸಾವಿರ ಅಥವಾ ಮೂರು ಸಾವಿರ ಪುರುಷ ಕೈದಿಗಳಿದ್ದಲ್ಲಿ ಸ್ತ್ರೀ ಕೈದಿಗಳ ಸಂಖ್ಯೆ ನೂರನ್ನೂ ದಾಟಲಾರರು. ಅವಿಚಾರಿಯಾದ ಹೆಂಗಸರು ಮಾಡಿರಬಹುದಾದ ಘೋರ ಅಪರಾಧವೆಂದರೆ ಅದು ವ್ಯಭಿಚಾರವಾಗಿರುತ್ತದೆ.ಹೆಂಗಸೊಬ್ಬಳು ವ್ಯಭಿಚಾರಮಾಡುವಾಗ ಅದರಲ್ಲಿ ಮೊದಲ ಹೆಜ್ಜೆ ಇಡುವವರು ಯಾರು?’’

-ಎಂದು ಪ್ರಶ್ನಿಸುತ್ತಲೇ ‘‘ಹೆಂಗಸು ಯಾವತ್ತೂ ಸ್ವಇಚ್ಛೆಯಿಂದ ವ್ಯಭಿಚಾರಕ್ಕಿಳಿಯುವುದಿಲ್ಲ, ವೇಶ್ಯೆಯರು ನಿಮ್ಮ ಸೃಷ್ಟಿ’’ ಎಂದು ಘೋಷಿಸುತ್ತಾರೆ. ಬಾಬಾಗಳು, ಬುವಾಗಳ ಖೋಟಾ ಆಧ್ಯಾತ್ಮಿಕತೆಯನ್ನು ಜಾಲಾಡಿರುವ ತಾರಾಬಾಯಿ, ‘‘ಹೊರಗೆ ಕಾಷಾಯ ವಸ್ತ್ರಧಾರಿಗಳಾಗಿ ಓಡಾಡುತ್ತಾರೆ. ಒಳಗೆಲ್ಲ ದುಷ್ಟ ಆಲೋಚನೆಗಳ ವ್ರಣ. ದಾನರೂಪದಲ್ಲಿ ಹಣ ಸ್ವೀಕರಿಸಿ ಅದನ್ನು ವೇಶ್ಯೆಯರ ಸೆರಗಿಗೊಪ್ಪಿಸುವುದು...’’ ಎಂದು ಕಪಟ ಸನ್ಯಾಸವನ್ನು ಬಯಲುಮಾಡುತ್ತಾರೆ. ‘‘ಹೆಂಗಸರು ಎಂದಾದರೂ ಗೋಸಾವಿ ಅಥವಾ ಸಾಧುಗಳಂತೆ ವೇಷ ಧರಿಸಿ ಪುರುಷನನ್ನು ಹಾರಿಸಿಕೊಂಡು ಹೋದದ್ದುಂಟೆ? ಒಂದು ನಿದರ್ಶನ ಕೊಡಿ’’ ಎಂದು ಸವಾಲೆಸೆಯುತ್ತಾರೆ.

***

ತಾರಾ ಬಾಯಿ ಶಿಂಧೆಯವರ ವಿಚಾರಧಾರೆ ಮೇಲ್ನೋಟದಲ್ಲಿ ಇವತ್ತಿಗೆ ಅಪ್ರಸ್ತುತ ಎನಿಸಬಹುದು. ಹೌದು, ಈ ಎರಡು ಶತಮಾನಗಳ ಅವಧಿಯಲ್ಲಿ ಸ್ತ್ರೀ ಪರವಾದ ಅನೇಕ ಕಾನೂನುಗಳಾಗಿವೆ. ಶಿಕ್ಷಣ, ಉದ್ಯೋಗ ಮೊದಲಾದ ಕ್ಷೇತ್ರಗಳಲ್ಲಿ ಸಾಕಷ್ಟು ಮಹಿಳಾ ಪ್ರಗತಿಯೂ ಆಗಿದೆ. ಬುದ್ಧಿಶಕ್ತಿ, ಸಾಮರ್ಥ್ಯಗಳಲ್ಲಿ ಹೆಣ್ಣು ಗಂಡಿಗಿಂತ ಕಡಿಮೆಯಲ್ಲ ಎನ್ನುವುದು ಸಾಬೀತಾಗಿದೆ. ನಗರಪ್ರದೇಶಗಳ ಮೇಲ್ವರ್ಗ ಮತ್ತು ಮಧ್ಯಮವರ್ಗಗಳ ಹೆಣ್ಣು ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನಗಳ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮುಂದಿದ್ದಾರೆ. ಆದರೆ ಇದೇ ಮಾತನ್ನು ನಾವು ಗ್ರಾಮೀಣ ಹೆಣ್ಣುಮಕ್ಕಳ ಬಗ್ಗೆ ಹಾಗೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ, ಇತರ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ವರ್ಗಗಳ ಹೆಣ್ಣುಮಕ್ಕಳ ಬಗ್ಗೆ ಹೇಳಲಾಗದು. ಬಡತನ ಮೊದಲಾದ ಕಾರಣಗಳಿಂದಾಗಿ ಈ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದ ಇನ್ನೂ ವಂಚಿತರಾಗಿಯೇ ಉಳಿದಿದ್ದಾರೆ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಕೆಲವೊಂದು ವರ್ಗಗಳ ಹೆಣ್ಣುಮಕ್ಕಳಿಗೆ ಅವಕಾಶಗಳ ಬಾಗಿಲು ತೆರೆದಿದೆಯಾದರೂ ಇದರಿಂದ ಸಮಾನತೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಗಳು ಸಂಪೂರ್ಣವಾಗಿ ಸಿಕ್ಕಿದೆಯೆಂದು ಹೇಳಲಾಗದು. ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಇಂದು ಪುರುಷನಿಗೆ ಸರಿಸಮನಾಗಿ ದುಡಿಯುತ್ತಿದ್ದರೂ ಸಮಾನತೆ ಎಂಬುದು ಗಗನಕುಸುಮವೇ ಆಗಿದೆ. ಅಧಿಕಾರ ಮತ್ತು ವೇತನಗಳಲ್ಲಿ ಅಸಮಾನತೆ ಇದ್ದೇ ಇದೆ. ಮಹಿಳೆ ಸೈನ್ಯದ ವಿವಿಧ ಹುದ್ದೆಗಳಲ್ಲಿ ಪುರುಷರಿಗೆ ಸರಿಸಮನಾಗಿ ದುಡಿದರೂ ಮಹಿಳಾ ಸೇನಾಧಿಕಾರಿಗಳು ದಂಡನಾಯಕತ್ವದ ಹುದ್ದೆ ಪಡೆಯಲು ಸುಪ್ರೀಂ ಕೋರ್ಟ್ ನ್ಯಾಯದ ನೆರವು ಬೇಕಾಯಿತು.(ಪುರುಷ ಸೈನಿಕರು ಮಹಿಳಾ ಸೇನಾಧಿಕಾರಿಗಳ ಆಧಿಪತ್ಯವನ್ನು ಇಷ್ಟಪಡುವುದಿಲ್ಲ ಎಂಬುದು ಸರಕಾರದ ವಾದವಾಗಿತ್ತು). ದುಡಿಯುವ ಮಹಿಳೆಯರಲ್ಲಿ ಎಲ್ಲರೂ ಆರ್ಥಿಕವಾಗಿ ಸ್ವತಂತ್ರರು ಎಂದು ಹೇಳಲಾಗದು. ಅವರಲ್ಲಿ ಬಹುತೇಕ ಮಂದಿ ಪುರುಷರ ಅಧೀನರೇ. ರಾಜಕೀಯದಲ್ಲೂ ಮಹಿಳೆಯರಿಗೆ ಪೂರ್ಣ ರಾಜಕೀಯ ಸ್ವಾತಂತ್ರ್ಯ ದೊರಕಿದೆ ಎನ್ನಲಾಗದು. ಸಂಸತ್ತು, ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಪ್ರಾತಿನಿಧ್ಯವನ್ನು ಕೊಡಲು ಯಾವ ರಾಜಕೀಯ ಪಕ್ಷವೂ ಸಿದ್ಧವಿಲ್ಲ. ಕೊಟ್ಟರೆ ತಮ್ಮ ಯಜಮಾನಿಕೆಗೆ ದಕ್ಕೆ ಬರುತ್ತದೆ ಎಂಬ ಭೀತಿ. ಕೆಲವು ದೇವಸ್ಥಾನ, ಪುಣ್ಯ ಕ್ಷೇತ್ರಗಳಲ್ಲಿ ಅವಳಿಗೆ ಪ್ರವೇಶವಿಲ್ಲ. ಸಂವಿಧಾನ ನಿರೂಪಿಸುವ ಸಮಾನತೆ ಪುರುಷನ ಧಾರ್ಮಿಕ ಯಜಮಾನಿಕೆ ಮುಂದೆ ಅವಳ ನೆರವಿಗೆ ಬರದು. ಹೆಣ್ಣು ಭ್ರೂಣ ಹತ್ಯೆಯಂತೂ ನಾಗರಿಕ ಸಮಾಜ ತಲೆತಗ್ಗಿಸುವಂತೆ ನಡೆದೇ ಇದೆ. ಸ್ತ್ರೀಯರ ಮಾನಭಂಗ, ದೌರ್ಜನ್ಯಗಳಿಗಂತೂ ಕೊನೆಯೇ ಇಲ್ಲವೇನೋ ಎನ್ನುವಂತಹ ಪರಿಸ್ಥಿತಿ.

ಇಷ್ಟೆಲ್ಲ ಕಾನೂನುಗಳನ್ನು ಮಾಡಿಯೂ ಸ್ತ್ರೀಯರ ಬಗ್ಗೆ ಪುರುಷರ ಮನಃಸ್ಥಿತಿ, ಮನೋಧರ್ಮಗಳು ಬದಲಾಗಿಲ್ಲ. ಮಹಿಳೆಯರೂ ಹಲವಾರು ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾದ, ಕೆಲವೊಮ್ಮೆ ಮಿಗಿಲಾದ ಸಾಧನೆಗಳನ್ನು ಮಾಡಿರುವರಾದರೂ ಇಂದಿಗೂ ಪುರುಷರ ದೃಷ್ಟಿಯಲ್ಲಿ ಅವಳು ಅಬಲೆಯೇ. ಅವಳನ್ನು ‘ವೀಕರ್ ಸೆಕ್ಸ್’ ಎಂದೇ ಬಿಂಬಿಸಲಾಗುತ್ತದೆ. ಸ್ತ್ರೀಯರ ಬಗ್ಗೆ ಪುರುಷರ ಧೋರಣೆ ಮತ್ತು ವರ್ತನೆಗಳು ಪುರಾತನ ಪಾಳೆಯಗಾರಿಕೆ ಮನೋಭಾವವೇ ಆಗಿವೆ. ಈ ಹಿನ್ನೆಲೆಯಲ್ಲಿ ‘‘...ಮಹಿಳೆಯರನ್ನು ಕೀಳಾಗಿ ಕಾಣುವ ವ್ಯವಸ್ಥೆಯನ್ನು ರೂಪಿಸಿದವರು ಪುರುಷರೇ’’ ಎನ್ನುವ ತಾರಾಬಾಯಿಯ ಮಾತು ಇಂದಿಗೂ ಪ್ರಸ್ತುತವಾಗುತ್ತದೆ. ಏಕೆಂದರೆ ಪ್ರಜಾಪ್ರಭುತ್ವದ ಈ ಯುಗದಲ್ಲೂ ಮುಂದುವರಿದಿರುವುದು ಪುರುಷನೇ ರೂಪಿಸಿರುವ ಅದೇ ವ್ಯವಸ್ಥೆ. ಈ ವ್ಯವಸ್ಥೆ ಬದಲಾಗಿ ನಿಜವಾದ ಸ್ವಾತಂತ್ರ್ಯ ಮತ್ತು ಸಮಾನತೆಗಳು ಸ್ತ್ರೀಯರಿಗೆ ದೊರೆಯಬೇಕಾದರೆ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳ ನೀತಿ ರಚನೆ-ನಿರೂಪಣಾ ವ್ಯವಸ್ಥೆಯಲ್ಲಿ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು. ಸ್ತ್ರೀಯರ ದಮನಿತ ಸ್ಥಿತಿಗೆ ಹೆಣ್ಣನ್ನು ಆಳುವ ಪುರುಷನ ಮೂಲಪ್ರವೃತ್ತಿಯೇ ಕಾರಣ ಎನ್ನುವುದು ತಾರಾ ಬಾಯಿಯ ಸ್ತ್ರೀಪರ ಚಿಂತನೆಯ ಮುಖ್ಯ ತಿರುಳು. ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸಮಾನತೆಗಳು ಸಿಗಲು ಪುರುಷ ತನ್ನ ಈ ಮೂಲಪ್ರವೃತ್ತಿಯನ್ನು ತೊರೆಯಬೇಕಾಗಿದೆ. ಯುಗಧರ್ಮವೆಂಬಂತೆ ಪುರುಷನಲ್ಲಿ ಇಂತಹ ‘ಅಹಂ’ ತ್ಯಕ್ತ ಪರಿವರ್ತನೆ ಆಗಬೇಕಿದೆ.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News