ಲಂಕೇಶ್, ಕುವೆಂಪು ಅವರನ್ನು ಪ್ರತಿಯೊಂದು ಮನೆಗೂ ತಲುಪಿಸಬೇಕು: ಕವಿ ಮುಕುಂದರಾಜ್

Update: 2020-03-08 17:56 GMT

ಬೆಂಗಳೂರು, ಮಾ.8: ಸಿನೆಮಾ ಜಗತ್ತು ಡಾ.ರಾಜ್‌ಕುಮಾರ್‌ರನ್ನು ಜನಮಾನಸದಲ್ಲಿ ಉಳಿಸಿದ ರೀತಿಯಲ್ಲಿ, ಲಂಕೇಶ್, ಕುವೆಂಪು ಅವರನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಲು ಸಾಧ್ಯವಾಗಿಲ್ಲ ಎಂದು ಕವಿ ಎಲ್.ಎನ್.ಮುಕುಂದರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಸ ಥಿಯೇಟರ್, ಬೆಂಗಳೂರು ಆರ್ಟ್ ಫೌಂಡೇಷನ್ ಹಾಗೂ ಅವಿರತ ಪುಸ್ತಕ ಪ್ರಕಾಶನದಿಂದ ಆಯೋಜಿಸಿದ್ದ ಲಂಕೇಶ್ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಲಂಕೇಶ್ ಅವರ ಕೃತಿಗಳು, ಸಾಹಿತ್ಯದ ಓದು ಎಂದರೆ ಕೇವಲ ಕೃತಿಗಳನ್ನು ಅಧ್ಯಯನ ಮಾಡುವುದು, ಅವರ ಬಗ್ಗೆ ಭಾಷಣ ಮಾಡುವುದಲ್ಲ. ಲಂಕೇಶ್‌ರ ಅಗತ್ಯತೆ ಇಂದಿನ ಸಂದರ್ಭಕ್ಕೆ ಅಗತ್ಯವಿದೆ. ಕುವೆಂಪು, ಲಂಕೇಶ್ ಅವರನ್ನು ಪ್ರತಿಯೊಂದು ಮನೆ ಮನೆಗೂ ತಲುಪಿಸಲು ಸಾಧ್ಯವಾಗಿದ್ದರೆ, ಇಂದಿನ ರಾಜಕೀಯ ಸ್ಥಿತಿ ಹೀಗೆ ಇರುತ್ತಿರಲಿಲ್ಲ ಎಂದ ಅವರು, ಈ ಇಬ್ಬರನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕಿದೆ ಎಂದರು.

ಲಂಕೇಶ್‌ರ ಕಾಲಘಟ್ಟದಲ್ಲಿದ್ದ ಪತ್ರಿಕೋದ್ಯಮಕ್ಕೂ, ಇಂದಿನ ಪ್ರತಿಕೋದ್ಯಮಕ್ಕೂ ಅಜಗಜಾಂತರವಿದೆ. ಅಂದು ಅವರು ಜಾತ್ಯಾತೀತ ಪ್ರತಿಕೋದ್ಯಮವನ್ನು ಪರಿಚಯಿಸಿದ್ದರೆ, ಇಂದು ಜಾತಿಯ ಪತ್ರಿಕೋದ್ಯಮವಿದೆ ಎಂದ ಅವರು, ಲಂಕೇಶ್ ಅವರ ಪತ್ರಿಕೆಯಲ್ಲಿ ಸ್ವ ಜಾತಿಯವರಿಗಿಂತ ಅನ್ಯ ಜಾತಿಯವರಿಗೆ ಹೆಚ್ಚು ಆದ್ಯತೆ ನೀಡಿದ್ದರು. ಅವರನ್ನು ವರದಿಗಾರರನ್ನಾಗಿ, ಬರಹಗಾರರನ್ನಾಗಿಸುವ ಮೂಲಕ ಜಾತ್ಯತೀತ ಸಮಾಜ ನಿರ್ಮಾಣದ ಕನಸು ಕಂಡವರಾಗಿದ್ದರು ಎಂದು ಹೇಳಿದರು.

ಮರೆಯಾಗುತ್ತಿರುವ ಸಾಹಿತ್ಯ ಪತ್ರಿಕೆಗಳು: ಹಿಂದಿನ ಕಾಲದಲ್ಲಿ ಅನೇಕ ಸಾಹಿತ್ಯ ಪತ್ರಿಕೆಗಳಿದ್ದವು. ಅವುಗಳು ಪತ್ರಿಕೆಯನ್ನು ಬಿಟ್ಟು ಪರ್ಯಾಯವಾಗಿ ಸಾಹಿತ್ಯವನ್ನು ಜನರಿಗೆ ತಲುಪಿಸಲ್ಲಿ ಮಹತ್ವ ಪಾತ್ರ ವಹಿಸಿವೆ. ಲಂಕೇಶ್ ಸಹ ಅವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಈ ಸಾಹಿತ್ಯ ಪತ್ರಿಕೆಗಳು ಎಂಬುದೇ ಇಲ್ಲದಂತಾಗಿದೆ ಎಂದು ಮುಕುಂದರಾಜ್ ಹೇಳಿದರು.

ಲಂಕೇಶ್‌ರ ಮರಣದ ಬಳಿಕ ಅನೇಕರು ಮಾತನಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ಮಾತಾಡಿದರೆ ಲಂಕೇಶ್‌ರ ಮಗಳಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂಬ ಕರೆಗಳು, ಪತ್ರಗಳು ಬರತೊಡಗಿವೆ. ಇನ್ನೊಂದು ಕಡೆ ಅಕಾಡೆಮಿಗಳ ಸ್ಥಾನಗಳಿಗೆ ನೇಮಿಸುತ್ತಾರೆ, ಪ್ರಶಸ್ತಿ ಸಿಗುತ್ತವೆ ಎಂಬ ಕಾರಣಕ್ಕೋ ಜೋರಾಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ ಎಂದು ಅವರು ದೂರಿದರು.

ಲಂಕೇಶ್ ಹೊಸಕಾಲಿನ ಹಾಗೂ ಸಮಕಾಲೀನವರನ್ನು ಒಂದೆಡೆ ಸೇರಬೇಕು ಎಂಬುದು ಅವರ ಆಸೆಯಾಗಿರುತ್ತಿತ್ತು. ಅದಕ್ಕಾಗಿ ಅವರಿಗಿಂತಲೂ ಸಣ್ಣವರಿದ್ದವು, ಅವರ ಸಮಾನರು ಅನೇಕರು ವರ್ಷದಲ್ಲಿ ಎರಡು-ಮೂರು ಬಾರಿ ಒಂದೆಡೆ ಸೇರುತ್ತಿದ್ದೆವು. ಅದರಲ್ಲಿ ಮರುಳಸಿದ್ದಪ್ಪ, ಶೂದ್ರ ಶ್ರೀನಿವಾಸ್, ಡಿ.ಆರ್.ನಾಗರಾಜ್ ಸೇರಿದಂತೆ ಅನೇಕರಿರುತ್ತಿದ್ದರು. ಅವರು ಸಕಾರಣವಿಟ್ಟು ಟೀಕಿಸುವವರ ಮೇಲೆ ಎಂದೂ ಕೋಪಿಸಿಕೊಂಡವರಲ್ಲ. ತಮ್ಮ ತಪ್ಪಿನ ಅರಿವಾದಾಗ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಉದಾರವಾದ ಮನಸ್ಸುಳ್ಳ ವ್ಯಕ್ತಿಯಾಗಿದ್ದರು ಎಂದು ನೆನಪಿಸಿಕೊಂಡರು.

ಸಿನೆಮಾ ನಿರ್ದೇಶಕ ಜಯತೀರ್ಥ ಮಾತನಾಡಿ, ಲಂಕೇಶ್‌ರನ್ನು ಮೊದಲ ಬಾರಿಗೆ ಓದಲು ಶುರು ಮಾಡಿದಾಗ ಅಷ್ಟು ಸುಲಭವಾಗಿ ಅರ್ಥವಾಗಲಿಲ್ಲ. ಆದರೆ, ಅವರು ಅರ್ಥವಾಗುವ ವೇಳೆ ಅವರ ಒಂದು ಪುಟ್ಟ ಕಾವ್ಯವನ್ನಿಟ್ಟುಕೊಂಡು ನಾನು ಸಿನೆಮಾ ಮಾಡಿದೆ. ಇಂದಿಗೂ ಲಂಕೇಶ್ ಅವರ ಕಾವ್ಯಗಳು ಪ್ರತಿಧ್ವನಿಸುತ್ತಲೇ ಇರುತ್ತದೆ. ಮುಂದಿನ ಪೀಳಿಗೆಗೆ ಲಂಕೇಶ್, ಕುವೆಂಪು, ಅಡಿಗರ ಸಾಹಿತ್ಯವನ್ನು ತಲುಪಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಹುಲಿಕುಂಟೆ ಮೂರ್ತಿ ಹಾಗೂ ಕಥೆಗಾರ್ತಿ ಅನುಪಮ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News