ಪ್ರತಿಧ್ವನಿಸುವ ಕನ್ನಡದ ದನಿಗಳು

Update: 2020-03-08 18:44 GMT

ನ್ನಡ ದನಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಲೇಖಕರಾದ ಡಾ. ಎಸ್. ತುಕಾರಾಮ್ ತಮ್ಮ ‘ಕಾಡುವ ಕನ್ನಡ ದನಿಗಳು’ ಕೃತಿಯಲ್ಲಿ ಮಾಡಿದ್ದಾರೆ. ಸಾಮಾಜಿಕ ವಿಮರ್ಶೆಯ ಲೇಖನಗಳು ಎಂದು ಕೃತಿಯನ್ನು ಸ್ವತಃ ಲೇಖಕರೇ ಕರೆದುಕೊಂಡಿದ್ದಾರೆ. ಸಾಮಾಜಿಕ ವಿಮರ್ಶೆ ಎನ್ನುವುದಕ್ಕಿಂತಲೂ, ಕನ್ನಡದ ವರ್ತಮಾನದ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ವಿವಿಧ ವ್ಯಕ್ತಿತ್ವಗಳ ಮೂಲಕ ಒಟ್ಟು ಕನ್ನಡ ವೌಲ್ಯಗಳನ್ನು ಒಂದೆಡೆಗೆ ಹಿಡಿದಿಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಇಲ್ಲಿ ಕನ್ನಡವನ್ನು ಅಗಾಧವಾಗಿ ಪ್ರೀತಿಸುವ ವ್ಯಕ್ತಿಗಳಿದ್ದಾರೆ, ಕನ್ನಡ ವೌಲ್ಯಗಳನ್ನು ಎತ್ತಿ ಹಿಡಿಯುವ ಅವರ ವ್ಯಕ್ತಿತ್ವಗಳಿವೆ ಹಾಗೂ ಅವರ ಮೂಲಕ ಹೊಮಿ್ಮರುವ ಕೃತಿಗಳ ಪರಿಚಯವೂ ಇವೆ.

ಕೃತಿಯಲ್ಲಿ ಎರಡು ಅಧ್ಯಾಯಗಳಿವೆ. ಮೊದಲನೇ ಅಧ್ಯಾಯದಲ್ಲಿ, ವ್ಯಕ್ತಿಚಿತ್ರದ ಮೂಲಕವೇ ಕನ್ನಡ ಚಿಂತನೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ವಾಲ್ಮೀಕಿ, ದೇವನೂರು, ಕನಕ-ಅಂಬೇಡ್ಕರ್, ಜೆನ್ನಿ ಬ್ರದರ್ ಮೊದಲಾದ ವ್ಯಕ್ತಿಗಳ ಮೂಲಕ ವರ್ತಮಾನದ ತಲ್ಲಣಗಳನ್ನು ಹೇಳುವ ಪ್ರಯತ್ನ ಮಾಡುತ್ತಾರೆ. ಇಲ್ಲಿರುವ ‘ಕಾಡುವ ಕನ್ನಡ ದನಿಗಳು’ ಒಟ್ಟು ಕೃತಿಯ ಉದ್ದೇಶವನ್ನು ಹೇಳುತ್ತದೆ. ‘ಕನ್ನಡದ ದನಿಯನ್ನು ಜತನದಿಂದ ಕಾಪಾಡಿದ ಮಹತ್ವದ ಕಾಲ ವಚನ ಕಾಲ’ ಎಂದು ಈ ಲೇಖನ ಅಭಿಪ್ರಾಯ ಪಡುತ್ತದೆ. ಇಂಗ್ಲಿಷ್-ಕನ್ನಡದ ನಡುವಿನ ಭಾಷೆಯ ಸಂಘರ್ಷವನ್ನು ಮಾತ್ರವಲ್ಲ, ಬದುಕಿನ ಸಂಘರ್ಷವನ್ನೂ ಇದು ಹೇಳುತ್ತದೆ. ಇನ್ನೊಂದೆಡೆ ‘ಜೀವಿಕ’ ಎನ್ನುವ ಸಂಘಟನೆಯ ಬಗ್ಗೆ ಹೇಳುತ್ತಾ ಕನ್ನಡದ ತಳಸ್ತರ ಬದುಕನ್ನು ಮೇಲೆತ್ತುವುದಕ್ಕೆ ಸಂಘಟಿತರಾುವ ಅಗತ್ಯವನ್ನು ವಿವರಿಸುತ್ತಾರೆ.

ಕೃತಿಯ ಬೆನ್ನುಡಿಯಲ್ಲಿ ಎಚ್. ಎಸ್. ರೇಣುಕಾರಾಧ್ಯ ಹೀಗೆ ಹೇಳುತ್ತಾರೆ ‘‘ಡಾ. ಎಸ್. ತುಕಾರಾಮ್ ಅವರ ‘ಕಾಡುವ ಕನ್ನಡ ಧ್ವನಿಗಳು’ ಕೃತಿಯ ಬರಹಗಳು ಆಳಕ್ಕಿಳಿದು ವಿಶ್ಲೇಷಣೆಗೆ ಒಳಪಡಿಸಿ ಬಿಸಾಡಬಲ್ಲ ಬೌದ್ಧಿಕ ವಿಲಾಸದ ಬರಹಗಳಲ್ಲ. ಒಂದು ವಿಷಯಕ್ಕೆ ಮತ್ತೊಂದು ವಿಷಯವನ್ನು ಜೋಡಿಸುತ್ತಾ ಆಲದ ಬಿಳಲುಗಳಂತೆ ಒಂದರೊಡನೆ ಮತ್ತೊಂದು ಸೇರಿ ಹರಡಿಕೊಂಡು, ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ ಪ್ರತಿಯೊಂದನ್ನು ತಾಯ್ತನದ ನೆಲೆಯಲ್ಲಿ ನೋಡುವ ಒಂದು ಬಗೆಯ ಸಂಯಮದ ಮಾದರಿಯವು’’

 ‘ತನ್ನೆದುರಿನ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಿರುವ ತಲ್ಲಣಗಳನ್ನು ಲೇಖಕರು ಅತ್ಯಂತ ಆತಂಕಿತ ಸ್ಥಿತಿಯಲ್ಲಿ ನಮ್ಮ ಮನಸ್ಸಿನ ಭಿತ್ತಿಯಲ್ಲಿ ಅಚ್ಚೊತ್ತಿದ್ದಾರೆ’ ಎಂದು ಮುನ್ನುಡಿಯಲ್ಲಿ ಡಾ. ಪ್ರಕಾಶ ಬಡವನಹಳ್ಳಿ ಹೇಳುತ್ತಾರೆ. ರೂಪ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 204. ಮುಖಬೆಲೆ 160 ರೂಪಾಯಿ. ಆಸಕ್ತರು 97313 67262 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News