ಪರ್ಯಾಯ ಹಂಬಲಗಳ ಪರಿಶೀಲನೆ

Update: 2021-12-16 07:50 GMT

‘ಚಹರೆಗಳೆಂದರೆ, ಗಾಯಗಳೂ ಹೌದು’ ಗೆಳೆಯರಾದ ಡಾ. ಎ.ಎಸ್. ಪ್ರಭಾಕರ ಅವರ ಸಮುದಾಯ ಕಥನಗಳ ಕುರಿತು ಮಾತನಾಡುವ ಕೃತಿ. ಇಂತಹದ್ದೊಂದು ಅಪರೂಪದ ಕೃತಿಯನ್ನು ಓದುವಾಗ ಮತ್ತೆ ಮತ್ತೆ ಓದುಗನನ್ನು ‘ಸಾಂಸ್ಕೃತಿಕ ಪ್ರಜ್ಞೆ’ ಎನ್ನುವುದು ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಈ ಮೇಲಿನ ಮಾತುಗಳನ್ನು ಮನನ ಮಾಡುವುದು ಅನಿವಾರ್ಯ, ಸಾಂಸ್ಕೃತಿಕ ಅಧ್ಯಯನ ಸಂಶೋಧನೆ ಎನ್ನುವ ಮಾದರಿಯೊಂದು ಸಹಜವಾಗಿಯೇ ಈ ಕೃತಿಯೊಳಗೆ ಹರಳುಗಟ್ಟಿದೆ. ಪದ, ವಾಕ್ಯ, ಅಕ್ಷರಗಳಿಗೆ ಅರ್ಥ ತುಂಬುವುದು, ಲೇಖನಕ್ಕೊಂದು ಆಶಯವೆನ್ನುವುದು, ಬರಹಗಾರನ ನಿಜದ ಕಾಳಜಿಗಳೆನ್ನುವುದನ್ನೆಲ್ಲಾ ಈ ಕೃತಿ ನಿಧಾನವಾಗಿ ಅರಿವು ಮಾಡಿಸುತ್ತದೆ.

ಕೃತಿ, ವಿಶಿಷ್ಟ ಕೊಡುಗೆ ಎನ್ನುವುದೊಂದು ಸಾಮಾನ್ಯ ಮಾತಿನಂತಾಗದೆ ಬರಹ ಮತ್ತು ಬರಹಗಾರರ ಬದ್ಧತೆ ಮತ್ತು ಕಾಳಜಿಗಳ ರೂಪಕವಾಗುತ್ತದೆ. ಪ್ರತಿ ವಿಷಯದ ಆಯ್ಕೆ ಯೋಚಿಸಿ, ಯೋಜಿಸಿದಂತಾಗಿಲ್ಲ. ಪ್ರತಿಯೊಂದು ಬರೆಯಲೇಬೇಕು, ದಾಖಲಾಗಬೇಕು, ವಾಸ್ತವದೊಂದಿಗೆ ಸಂವಾದಿಸಬೇಕು ಎಂಬ ತುಡಿತದೊಂದಿಗೆ ಬರೆಸಿಕೊಂಡ ಲೇಖನಗಳಾಗಿವೆ. ಸಮುದಾಯಗಳ ಚಹರೆಗಳು ಮತ್ತು ಗಾಯಗಳು ಎನ್ನುವಲ್ಲಿಯೇ ಖಚಿತವಾಗುವ ಗಾಂಭೀರ್ಯಕ್ಕೆ ಭಾವುಕತೆಯ ಲೇಪವಿಲ್ಲ. ನಾಗರಿಕತೆ, ಆಧುನಿಕತೆಯ ಹುಳುಕುಗಳ ದರ್ಪಣವೂ ಆದಂತಾಗುತ್ತದೆ. ಒಬ್ಬ ಪ್ರಾಮಾಣಿಕ ಸಂಶೋಧಕ ಜೀವಪರ ಸಂವೇದನೆಯ ಲೇಖಕ ಅಂತಃಕರಣವನ್ನು ಹೊಂದಿದಾಗ ಈ ಬಗೆಯ ಕೃತಿಯೊಂದು ಹೆರಿಗೆಯ ಸಂಕಟವೊಂದನ್ನು ಅವುಡುಗಚ್ಚಿ ಸಹಿಸುತ್ತಲೇ ಹೊಸ ಜನ್ಮಕ್ಕೆ ಕಾರಣವಾಗುವ ಬಗೆಯಾಗುತ್ತದೆ.

ಕೃತಿಯ ಪ್ರತಿ ಬರಹಗಳಲ್ಲಿರುವ ಆಪ್ತತೆಯ ಸಂವೇದನೆಗೆ ಕಾರಣವಾಗುವುದು. ಲೇಖಕನೇ ಪಾತ್ರವಾಗುವ, ಘಟನೆಯಾಗುವ, ಸಾಕ್ಷಿಯಾಗುವ ಗುಣಗಳಿಂದ ತಾದ್ಯಾತ್ಮತೆ ಎನ್ನುವ ಸರಳ ಅರ್ಥವನ್ನು ಮೀರಿದ ಪ್ರತಿಫಲವಿದು. ಓದುಗರು ಅಕ್ಷರದೊಂದಿಗೆ ಸೇರುತ್ತಲೇ ಮನನ, ಪರಿಶೀಲನೆಯ ಸಾಧ್ಯತೆಗೂ ಚಾಚಿಕೊಳ್ಳು ವಂತಾಗುವುದು ಕೃತಿಯೊಳಗಿನ ಶಕ್ತಿ ಮತ್ತು ಅದೊಂದು ಸಾಂಸ್ಕೃತಿಕ ಹಠವೂ ಹೌದು.

ಹನ್ನೊಂದು ಲೇಖನಗಳು-ವಿಚಾರಗಳ ಕಾರಣಕ್ಕೆ ಎಲ್ಲವೂ ಸ್ವತಂತ್ರ, ಆದರೆ ಒಂದರೊಡನೊಂದು ಪೂರಕವಾದ ಸಂಬಂಧಗಳನ್ನು ಏರ್ಪಡಿಸಿಕೊಳ್ಳುವುದರಲ್ಲಿ ನಿಜದನಿಯ ಸಹಜತೆ ಇದೆ. ‘ಬುಡಕಟ್ಟುಗಳ ಬದುಕಿನ ಮೀಮಾಂಸೆ’ಯೊಂದಿಗೆ ತೆರೆದುಕೊಂಡು ‘ಕರ್ನಾಟಕದ ಆದಿವಾಸಿ ರೈತ ಹೋರಾಟಗಳ ಸ್ವರೂಪ’ ‘ಅಲೆಮಾರಿಗಳ ಶಾಪಗ್ರಸ್ತ ಪಯಣ’ ‘ಒಳಗಿನವರಾಗುವುದು; ಹಾಗೆಂದರೇನು?’ ಎಂದೆಲ್ಲಾ ಮುಂದುವರಿಯುತ್ತದೆ.

ಪುಸ್ತಕ: ಚಹರೆಗಳೆಂದರೆ, ಗಾಯಗಳೂ ಹೌದು

ಲೇಖಕರು:

ಡಾ. ಎ.ಎಸ್. ಪ್ರಭಾಕರ ಪ್ರಕಾಶಕರು: ಗೌರಿ ಮೀಡಿಯಾ ಟ್ರಸ್ಟ್, ನಂ.05, 1ನೇ ಕ್ರಾಸ್, ಹನುಮಂತ ನಗರ, ಬೆಂಗಳೂರು

ಮೊ:9353666821

ಬೆಲೆ: ರೂ. 250

Writer - -ಡಾ. ಜಿ. ಪ್ರಶಾಂತನಾಯಕ

contributor

Editor - -ಡಾ. ಜಿ. ಪ್ರಶಾಂತನಾಯಕ

contributor

Similar News