ಬೆಂಗಳೂರಿನಲ್ಲಿ ನಿಗೂಢ ವಸ್ತು ಸ್ಫೋಟ: ಓರ್ವ ವ್ಯಕ್ತಿಗೆ ಗಂಭೀರ ಗಾಯ

Update: 2020-03-08 18:47 GMT

ಬೆಂಗಳೂರು, ಮಾ.8: ರಾಜಧಾನಿ ಬೆಂಗಳೂರಿನಲ್ಲಿ ನಿಗೂಢ ವಸ್ತುಯೊಂದು ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರವಿವಾರ ವರದಿಯಾಗಿದೆ.

ಆಡುಗೋಡಿ ನಿವಾಸಿ ನರಸಿಂಹಯ್ಯ (50) ಎಂಬವರು ಗಾಯಗೊಂಡಿದ್ದು, ಸ್ಥಳೀಯರ ಸಹಾಯದಿಂದ ಇಲ್ಲಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ನಗರದ ಹೊಸೂರು ಮುಖ್ಯ ರಸ್ತೆಯ ಡೈರಿ ವೃತ್ತದ ವ್ಯಾಪ್ತಿಯಲ್ಲಿ ಕಸ ಶೇಖರಣೆ ಮಾಡಿದ್ದ ವೇಳೆ, ರವಿವಾರ ಮಧ್ಯಾಹ್ನ ಸುಮಾರಿಗೆ ಏಕಾಏಕಿ ಸ್ಫೋಟವಾಗಿದೆ. ಈ ಸಂದರ್ಭದಲ್ಲಿ ಚಿಂದಿ ಆಯುವ ನರಸಿಂಹಯ್ಯ ಅವರ ಕಾಲು ಮತ್ತು ಕೈಗಳಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಸ್ಥಳಕ್ಕೆ ಧಾವಿಸಿದ ಎಫ್‌ಎಸ್‌ಎಲ್ ತಂಡ, ಶ್ವಾನದಳ ಪರಿಶೀಲನೆ ನಡೆಸಿದರು. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಆಡುಗೋಡಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಡುಗೋಡಿ ಬಳಿ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದೆ. ಗ್ರಾನೈಟ್ ಕತ್ತರಿಸಲು ಬಳಸಲ್ಪಡುತ್ತಿದ್ದ ನಿಷೇಧಿತ ಕೆಮಿಕಲ್ ಲಿಕ್ವಿಡ್ ಸ್ಫೋಟ ಸಂಭವಿಸಿ, ಓರ್ವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News