'ದೇವಸ್ಥಾನ, ಕ್ಷೌರದ ಅಂಗಡಿ, ಬೊಗಸೆಯಲ್ಲಿ ನೀರು...': ಸದನದಲ್ಲಿ ಅಸ್ಪೃಶತೆಯ ನೋವು ತೋಡಿಕೊಂಡ ಪರಮೇಶ್ವರ್

Update: 2020-03-09 16:37 GMT

ಬೆಂಗಳೂರು, ಮಾ.9: ಸಂವಿಧಾನ ರಚನೆಯಾಗಿ 70 ವರ್ಷಗಳ ನಂತರ ಇವತ್ತು ನಾವು ಯಾಕೆ ಇದನ್ನು ಚರ್ಚೆ ಮಾಡುತ್ತಿದ್ದೇವೆ. ಸಂವಿಧಾನ ಬದಲಾವಣೆಯ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಅದಕ್ಕೆ ಈ ಚರ್ಚೆ ಅಡಿಪಾಯವಾಗಬಾರದು ಎಂಬ ಆತಂಕ ನನ್ನಲ್ಲಿತ್ತು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೆಸೆಸ್ಸ್ ಮುಖ್ಯಸ್ಥರು ಕಳೆದ ಜ.19ರಂದು ನಡೆದ ‘ಭವಿಷ್ಯ ಕಾ ಭಾರತ್’ ಕಾರ್ಯಕ್ರಮದಲ್ಲಿ ನಾವು ಸಂವಿಧಾನ, ಜನರ ಭಾಷೆ, ಧರ್ಮ ಯಾವುದನ್ನೂ ಬದಲಾವಣೆ ಮಾಡಲು ಬಯಸುವುದಿಲ್ಲವೆಂದು ನೀಡಿದ ಹೇಳಿಕೆಯನ್ನು ನೋಡಿದ ಮೇಲೆ ನನ್ನ ಸಂಶಯ ಸ್ವಲ್ಪಮಟ್ಟಿಗೆ ನಿರಾಳವಾಯಿತು ಎಂದರು.

ನಾನು 7ನೆ ತರಗತಿಯಲ್ಲಿ ಓದುವಾಗ ನಾನು ಹಾಗೂ ನನ್ನ ಅಕ್ಕ ಬೇರೆ ಊರಿಗೆ ಶಾಲೆಗೆ ಹೋಗಬೇಕಿತ್ತು. ಆಗ ಆ ಊರಿನಲ್ಲಿ ಕುಡಿಯಲು ನೀರು ಕೇಳಲು ಹೋದರೆ, ಮೊದಲು ನಮ್ಮನ್ನು ವಿಚಾರಿಸುತ್ತಿದ್ದರು. ನನಗೆ ಮನೆಯ ಹೊರಗೆ ನಿಲ್ಲಿಸಿ ನೀರನ್ನು ಮೇಲಿನಿಂದ ಹರಿಸುತ್ತಿದ್ದರು. ಬೊಗಸೆಯಲ್ಲಿ ಹಿಡಿದು ನೀರು ಕುಡಿಯಬೇಕಾಗಿತ್ತು ಎಂದು ಅವರು ಹೇಳಿದರು.

ನನ್ನ ತಂದೆ ಚಿಕ್ಕಮಗಳೂರಿನಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ಆದರೂ, ನಮಗೆ ಊರಿನಲ್ಲಿದ್ದ ಕ್ಷೌರದ ಅಂಗಡಿಯೊಳಗೆ ಪ್ರವೇಶ ಸಿಗುತ್ತಿರಲಿಲ್ಲ. ಅಂಗಡಿ ಹೊರಗೆ ನಮ್ಮನ್ನು ಕೂರಿಸಿ ಕ್ಷೌರ ಮಾಡುತ್ತಿದ್ದರು. ನಾವು ನಿರ್ಲಕ್ಷಕ್ಕೆ ಒಳಗಾದ, ತುಳಿತಕ್ಕೊಳಗಾಗುವ ಜನ. ಈ ಅವಮಾನವನ್ನು ಸ್ವತಃ ನಾನು ಒಬ್ಬ ದಲಿತನಾಗಿ ಅನುಭವಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

ಉನ್ನತ ಶಿಕ್ಷಣಕ್ಕಾಗಿ ನಾನು ಆಸ್ಟ್ರೇಲಿಯ ದೇಶಕ್ಕೆ ಹೋಗಿದ್ದೆ. ಅಲ್ಲಿ ನನ್ನ ಪ್ರೊಫೆಸರ್ ಒಬ್ಬರು ಪರಮೇಶ್ವರ್ ಭಾರತದಲ್ಲಿ ಅಸ್ಪೃಶರು ಎಂದು ಕರೆಯಲ್ಪಡುವವರು ಹೇಗೆ ಕಾಣುತ್ತಾರೆ ಎಂದು ಪ್ರಶ್ನಿಸಿದರು. ನಮ್ಮ ದೇಶದಲ್ಲಿ ನಾವು ಅನುಭವಿಸುವ ನೋವನ್ನು ಇಲ್ಲಿಯೂ ಹೇಳಿಕೊಳ್ಳಬೇಕೆ ಎಂದು ನನಗೆ ಅನಿಸುತ್ತಿತ್ತು ಎಂದು ಅವರು ಹೇಳಿದರು.

1989ರಲ್ಲಿ ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದ ನಂತರ ನನ್ನನ್ನು ಕ್ಷೇತ್ರಾದ್ಯಂತ ಮೆರವಣಿಗೆ ಮಾಡಿಸಿದರು. ಈ ವೇಳೆ ಆಂಜನೇಯ ಸ್ವಾಮಿ ದೇವಸ್ಥಾನವೊಂದಕ್ಕೆ ನನ್ನನ್ನು ಕರೆದುಕೊಂಡು ಹೋದರು. ನಾನು ಅಲ್ಲಿಂದ ತೆರಳಿದ ಬಳಿಕ ನನ್ನನ್ನು ದೇವಸ್ಥಾನದ ಒಳಗೆ ಪ್ರವೇಶ ಕೊಟ್ಟ ವಿಚಾರವನ್ನು ಮುಂದಿಟ್ಟುಕೊಂಡು ಜಗಳ ಮಾಡಲಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾವು ಆಧುನಿಕ ಸಮಾಜದಲ್ಲಿದ್ದೇವೆ ಎಂದು ಹೇಳುತ್ತಿದ್ದೇವೆ. ಆದರೆ, ಇನ್ನು ಎಷ್ಟು ವರ್ಷಗಳು ಬೇಕು ಈ ಪರಿಸ್ಥಿತಿ ಬದಲಾವಣೆಯಾಗಲು. ಮುಂದಿನ ಪೀಳಿಗೆಗೆ ನಾವು ಏನು ಬಿಟ್ಟು ಹೋಗುತ್ತೇವೆ. ಸಂವಿಧಾನದ ಕಲಂ 17ರಲ್ಲಿ ಜಾತಿ ನಿರ್ಮೂಲನೆ ಬಗ್ಗೆ ತಿಳಿಸಲಾಗಿದೆ. ಅದನ್ನು ನಾವು ಆದ್ಯತೆ ಮೇರೆಗೆ ಮಾಡಬೇಕಿದೆ ಎಂದು ಪರಮೇಶ್ವರ್ ಹೇಳಿದರು.

ದೇಶದಲ್ಲಿ ಶೇ.18ರಷ್ಟು ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಅವರು ಭಾರತೀಯರಲ್ಲವೇ ? ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಇವತ್ತು ಆಡಳಿತದಲ್ಲಿದೆ. ಬಿಜೆಪಿಯು 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಗೂ ಟಿಕೆಟ್ ನೀಡಿಲ್ಲ ಎಂದು ಅವರು ಟೀಕಿಸಿದರು.

ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ನಡುವಿನ ಕಂದಕವನ್ನು ಮುಚ್ಚಲು ನಾವೆಲ್ಲ ಪ್ರಯತ್ನಿಸಬೇಕಿದೆ. ದೇಶದಲ್ಲಿ ಶೇ.38ರಷ್ಟು ಬಡತನವಿದೆ. ಆದರೆ, ಈಗ ನಮ್ಮ ಪ್ರಧಾನಿಗೆ ಪೌರತ್ವ ಕೊಡುವುದು ಆದ್ಯತೆಯಾಗಿದೆ. ಈ ದೇಶಕ್ಕೆ ಯಾವುದು ಮುಖ್ಯ ಬಡತನ ನಿವಾರಣೆಯೇ ಅಥವಾ ಜಾತೀಯತೆಯೆ ಎಂದು ಪರಮೇಶ್ವರ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News