ಶಸ್ತ್ರಾಸ್ತ್ರ ಆಮದು : ದ್ವಿತೀಯ ಸ್ಥಾನ ಕಾಯ್ದುಕೊಂಡ ಭಾರತ

Update: 2020-03-09 17:38 GMT

ಹೊಸದಿಲ್ಲಿ, ಮಾ.9: 2015ರಿಂದ 2019ರ ವರೆಗಿನ ಅವಧಿಯಲ್ಲಿ ಅತ್ಯಂತ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಂಡ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಪ್ರಥಮ ಸ್ಥಾನದಲ್ಲಿದ್ದರೆ ಭಾರತ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದೆ ಎಂದು ಶಸ್ತ್ರಾಸ್ತ್ರ ವರ್ಗಾವಣೆ ಕುರಿತು ವರದಿ ನೀಡುವ ಅಂತರಾಷ್ಟ್ರೀಯ ಸಂಸ್ಥೆ ತಿಳಿಸಿದೆ. 

ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ) ಸೋಮವಾರ ಬಿಡುಗಡೆಗೊಳಿಸಿದ ತನ್ನ ವಾರ್ಷಿಕ ವರದಿಯಲ್ಲಿ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿರುವ ಐದು ರಾಷ್ಟ್ರಗಳ ಪಟ್ಟಿಯನ್ನು ನೀಡಿದ್ದು ಸೌದಿ ಅರೇಬಿಯಾ, ಭಾರತ , ಈಜಿಪ್ಟ್, ಆಸ್ಟ್ರೇಲಿಯಾ ಮತ್ತು ಚೀನಾ ಮೊದಲ ಐದು ಸ್ಥಾನದಲ್ಲಿವೆ. ಪಾಕಿಸ್ತಾನ 11ನೇ ಸ್ಥಾನದಲ್ಲಿದೆ. ಅತ್ಯಧಿಕ ಶಸ್ತ್ರಾಸ್ತ್ರ ರಫ್ತು ಮಾಡಿದ ದೇಶಗಳಲ್ಲಿ ರಶ್ಯಾ ಮೊದಲ ಸ್ಥಾನದಲ್ಲಿದೆ. ಆದರೆ ಭಾರತಕ್ಕೆ ರಶ್ಯಾದಿಂದ ಆಮದು ಆಗುವ ಶಸ್ತ್ರಾಸ್ತ್ರಗಳ ಪ್ರಮಾಣ 56%ಕ್ಕೆ ಕುಸಿದಿದೆ(ಈ ಹಿಂದೆ 72% ಇತ್ತು). ಭಾರತವು ರಶ್ಯಾ, ಅಮೆರಿಕ, ಫ್ರಾನ್ಸ್ ಮತ್ತು ಇಸ್ರೇಲ್‌ನಿಂದ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು, ಸಬ್‌ಮೆರೀನ್‌ಗಳು, ಯುದ್ಧ ನೌಕೆಗಳು, ತೋಪುಗಳು, ಬಂದೂಕುಗಳು ಮತ್ತಿತರ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಅಲ್ಲದೆ 2015-19ರ ಅವಧಿಯಲ್ಲಿ ಭಾರತವು ಡೆನ್ಮಾರ್ಕ್‌ನಿಂದ ಸ್ಕಾಂಟರ್-6000 ರಾಡಾರ್‌ಗಳು, ಜೆಟ್ ವಿಮಾನ, ಜರ್ಮನಿಯಿಂದ ಶಬ್ನ ಪ್ರಸರಣ ವ್ಯವಸ್ಥೆ(ಸಬ್‌ಮೆರಿನ್‌ಗೆ ಬಳಸುವ ವ್ಯವಸ್ಥೆ), ಇಟಲಿಯಿಂದ ಸೂಪರ್ ರ್ಯಾಪಿಡ್ 76ಎಂಎಂ ನೌಕಾದಳದ ಗನ್‌ಗಳು, ದಕ್ಷಿಣ ಕೊರಿಯಾದಿಂದ 155 ಎಂಎಂ ಆರ್ಟಿಲರಿ ಗನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. 2010-14ರ ಅವಧಿಯಲ್ಲಿ ರಶ್ಯಾ ದೇಶ ಭಾರತಕ್ಕೆ ಅತ್ಯಧಿಕ ಶಸ್ತ್ರಾಸ್ತ್ರ ರಫ್ತು ಮಾಡುತ್ತಿತ್ತು. 2010-14ರ ಅವಧಿಯಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಸಂಬಂಧ ವೃದ್ಧಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಎರಡನೇ ಸ್ಥಾನಕ್ಕೆ ಏರಿತ್ತು. ಆದರೆ 2014ರಿಂದ 2019ರ ಅವಧಿಯಲ್ಲಿ ಭಾರತವು ಹಲವು  ಪೂರೈಕೆದಾರರ ಕುರಿತು ಗಮನ ನೀಡಿದ್ದರಿಂದ ಅಮೆರಿಕದ ರಫ್ತು ಪ್ರಮಾಣ, 2010-14ಕ್ಕೆ ಹೋಲಿಸಿದಲ್ಲಿ 51% ಕಡಿಮೆಯಾಗಿತ್ತು ಎಂದು ವರದಿ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಸ್ರೇಲ್ ಮತ್ತು ಫ್ರಾನ್ಸ್‌ನಿಂದ ಆಮದಾಗುವ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

2010-14ರ ಅವಧಿಗೆ ಹೋಲಿಸಿದರೆ ಏಶ್ಯಾಕ್ಕೆ ಅಮೆರಿಕದಿಂದ ರಪ್ತು ಆದ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ 20% ಕಡಿಮೆಯಾಗಿದೆ. 2010-14 ಮತ್ತು 2014-19ರ ಮಧ್ಯೆ ಭಾರತ ಮತ್ತು ಪಾಕಿಸ್ತಾನ ಆಮದು ಮಾಡಿಕೊಂಡಿರುವ ಶಸ್ತ್ರಾಸ್ತ್ರಗಳ ಪ್ರಮಾಣದಲ್ಲಿ ಕ್ರಮವಾಗಿ 32% ಮತ್ತು 39% ಕಡಿಮೆಯಾಗಿದೆ. ಎರಡೂ ರಾಷ್ಟ್ರಗಳು ಸ್ವತಃ ಶಸ್ತ್ರಾಸ್ತ್ರ ಉತ್ಪಾದನೆಗೆ ಹೆಚ್ಚಿನಒಲವು ಹೊಂದಿದ್ದರೂ ಪ್ರಮುಖ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿವೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನ 2010-14ರಲ್ಲಿ ಚೀನಾದಿಂದ 51% ಶಸ್ತ್ರಾಸ್ತ್ರ ಆಮದು ಮಾಡಿಕೊಂಡಿದ್ದರೆ ಈ ಪ್ರಮಾಣ 2014-19ರ ಅವಧಿಯಲ್ಲಿ 73%ಕ್ಕೆ ಹೆಚ್ಚಿದೆ. ಅಲ್ಲದೆ ಟರ್ಕಿಯಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನೂ ಪಾಕಿಸ್ತಾನ ಕ್ರಮೇಣ ಹೆಚ್ಚಿಸಿಕೊಂಡಿದೆ ಎಂದು ವರದಿ ತಿಳಿಸಿದೆ.  ವಿಶ್ವದಲ್ಲಿ ಅತ್ಯಧಿಕ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 23ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ಮ್ಯಾನ್ಮಾರ್, ಶ್ರೀಲಂಕಾ ಮತ್ತು ಮಾರಿಷಸ್ ಭಾರತದಿಂದ ಅತ್ಯಧಿಕ ಶಸ್ತ್ರಾಸ್ತ್ರ ಖರೀದಿಸುವ ರಾಷ್ಟ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News