ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮ: 19 ಶಾಸಕರು ರಾಜೀನಾಮೆ

Update: 2020-03-10 15:42 GMT

ಭೋಪಾಲ,ಮಾ.10: ಮಾಜಿ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರು ಮಂಗಳವಾರ ಕಾಂಗ್ರೆಸ್‌ನ್ನು ತೊರೆದ ಬೆನ್ನಿಗೇ ಆರು ಸಚಿವರು ಸೇರಿದಂತೆ ಪಕ್ಷದ 20 ಶಾಸಕರು ಮಧ್ಯಪ್ರದೇಶದ ರಾಜ್ಯಪಾಲ ಲಾಲಾಜಿ ಟಂಡನ್ ಅವರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ. ಇವರೆಲ್ಲ ಸಿಂದಿಯಾರ ನಿಕಟವರ್ತಿಗಳು ಎನ್ನಲಾಗಿದ್ದು, ಸೋಮವಾರದಿಂದ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸಿಂದಿಯಾ ಜೊತೆ ಈ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ. ಈ ಶಾಸಕರ ರಾಜೀನಾಮೆಯಿಂದಾಗಿ ಕಮಲನಾಥ್ ಸರಕಾರವು ಬಹುಮತವನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು,ಅದು ಪತನದ ಅಂಚಿನಲ್ಲಿದೆ.

ಬೆಳಿಗ್ಗೆ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಸಿಂದಿಯಾ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಂದಿಯಾ ಬಿಜೆಪಿಯನ್ನು ಸೇರಲಿದ್ದಾರೆ ಮತ್ತು ರಾಜ್ಯದಲ್ಲಿಯ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಆ ಪಕ್ಷಕ್ಕೆ ನೆರವಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಈ ಭೇಟಿಯು ಇನ್ನಷ್ಟು ಇಂಬು ನೀಡಿದೆ.

ತನಗೆ ರಾಜ್ಯಸಭಾ ಸದಸ್ಯತ್ವದ ಭರವಸೆಯನ್ನು ನೀಡದ್ದಕ್ಕಾಗಿ ಮತ್ತು ರಾಜ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನನ್ನಾಗಿ ಮಾಡದ್ದಕ್ಕಾಗಿ ಸಿಂದಿಯಾ ತೀವ್ರ ಅಸಮಾಧಾನಗೊಂಡಿದ್ದರು ಎಂದು ವರದಿಗಳು ತಿಳಿಸಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಈಗಲೂ ಕಮಲನಾಥ ಬಳಿಯೇ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News