ಆರೆಸ್ಸೆಸ್ ಮುಖ್ಯ ಕಚೇರಿ ಫೋಟೋ ಕ್ಲಿಕ್ಕಿಸಿದ ಚಿತ್ರ ನಿರ್ದೇಶಕರು ಪೊಲೀಸ್ ವಶಕ್ಕೆ: 24 ಗಂಟೆಗಳ ಕಾಲ ವಿಚಾರಣೆ

Update: 2020-03-10 09:48 GMT

ಮುಂಬೈ: ನಾಗ್ಪುರದಲ್ಲಿರುವ ಆರೆಸ್ಸೆಸ್ ಮುಖ್ಯ ಕಾರ್ಯಾಲಯದ ಕಟ್ಟಡದೆದುರು ಸೆಲ್ಫೀ ಕ್ಲಿಕ್ಕಿಸಿದ ಇಬ್ಬರು ಬೆಂಗಳೂರು ಮೂಲದ ಚಿತ್ರ ತಯಾರಕರನ್ನು ಪೊಲೀಸರು ಅಕ್ರಮವಾಗಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದೇ ಅಲ್ಲದೆ, ಸುಮಾರು 24 ಗಂಟೆಗಳ ಕಾಲ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವಾರ ನಡೆದಿದ್ದ ರಾಯ್ಪುರ್ ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವಕ್ಕೆ ತೀರ್ಪುಗಾರರಾಗಿ ಆಹ್ವಾನಿಸಲ್ಪಟ್ಟಿದ್ದ ಬೆಂಗಳೂರು ಮೂಲದ ನಿಕಿ ನಿರ್ವಿಕಲ್ಪ ಹಾಗೂ ಫಲಾಹ್ ಫೈಝಲ್ ಅವರು ವಿರಾಮದ ವೇಳೆ ನಗರ ಸುತ್ತಾಡಲು ತೆರಳಿದ್ದ ಸಂದರ್ಭ ಆರೆಸ್ಸೆಸ್ ಮುಖ್ಯ ಕಾರ್ಯಾಲಯವನ್ನು ನೋಡಿ ಅಲ್ಲಿ ಸ್ವಲ್ಪ ಹೊತ್ತು ನಿಂತು ಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಆದರೆ ಇದಾದ ಕೆಲವೇ ಕ್ಷಣದಲ್ಲಿ ಅವರನ್ನು ಕೊತ್ವಾಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.

"ಅಲ್ಲಿ 30ಕ್ಕೂ ಅಧಿಕ ಪೊಲೀಸರು ನಮ್ಮನ್ನು ಪ್ರಶ್ನಿಸಿದ್ದರು. ಅವರಲ್ಲಿ ಕೆಲವರು ಎಟಿಎಸ್ ಸಿಬ್ಬಂದಿಯಾಗಿದ್ದರು ಹಾಗೂ ಗುಪ್ತಚರ ಬ್ಯುರೋದವರೂ ಇದ್ದರು'' ಎಂದು ಬಿಡುಗಡೆಗೊಂಡ ನಂತರ ನಿಕಿ ಹೇಳಿದ್ದಾರೆ. ಇಬ್ಬರನ್ನೂ ಮಾರ್ಚ್ 5ರ ಸಂಜೆ ಠಾಣೆಗೆ ಕರೆತಂದು ಮರುದಿನ ತಡ ಸಂಜೆ ಬಿಡುಗಡೆಗೊಳಿಸಲಾಗಿತ್ತು ಎಂದು ಕೊತ್ವಾಲಿ ಠಾಣೆಯ ಅಧಿಕಾರಿ ದೃಢೀಕರಿಸಿದರೂ ಹೆಚ್ಚಿನ ಮಾಹಿತಿ ನೀಡಿಲ್ಲ.

ತಮ್ಮಿಬ್ಬರನ್ನು ಪೊಲೀಸರು ಅಧಿಕೃತವಾಗಿ ಬಂಧಿಸದೇ ಇದ್ದರೂ ತಮ್ಮ ಮೊಬೈಲ್ ಫೋನ್ ಪಡೆದು ಎಲ್ಲಾ ಕಾಂಟ್ಯಾಕ್ಟ್  ಸಂಖ್ಯೆಗಳನ್ನು ಪರಿಶೀಲಿಸಿದ್ದರಲ್ಲದೆ, ನಮ್ಮ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಇಮೇಲ್ ಗಳನ್ನು  ಪರಿಶೀಲಿಸುವುದಾಗಿಯೂ ತಿಳಿಸಿದ್ದರು ಎಂದು ನಿಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News