ಸಿಎಎ ವಿರೋಧಿಸಿದ್ದ ವ್ಯಕ್ತಿಯ ಪತ್ನಿಯ ಕ್ಲಿನಿಕ್ ಮೇಲೆ ದಾಳಿ ನಡೆಸಿ ಸೀಲ್ ಮಾಡಿದ ಪೊಲೀಸರು

Update: 2020-03-10 10:51 GMT

ಲಕ್ನೋ: ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ವ್ಯಕ್ತಿಯೊಬ್ಬನ ವೈದ್ಯೆ ಪತ್ನಿಯ ಅಲ್ಟ್ರಾ ಸೌಂಡ್ ಕ್ಲಿನಕ್  ಮೇಲೆ ದಾಳಿ ನಡೆಸಿದ ಪೊಲೀಸರು ಕ್ಲಿನಿಕ್ ಅನ್ನು ಸೀಲ್ ಮಾಡಿದ್ದಾರೆ.

ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಪ್ರೊಗ್ರೆಸ್ಸಿವ್ ಮೆಡಿಕೋಸ್ ಆ್ಯಂಡ್ ಸೈಂಟಿಸ್ಟ್ಸ್ ಫೋರಂ ಖಂಡಿಸಿದೆಯಲ್ಲದೆ ಸಿಎಎ ವಿರೋಧಿ ಅಭಿಪ್ರಾಯ ಹೊಂದಿದ ಕುಟುಂಬದ ವಿರುದ್ಧ ಈ ರೀತಿಯ ದ್ವೇಷದ ಕ್ರಮ ಸರಿಯಲ್ಲ ಎಂದು ಹೇಳಿದೆ.

ರವಿವಾರ ಪೊಲೀಸರ ತಂಡವೊಂದು ದಿಲ್ಲಿಯ ಏಮ್ಸ್ ಆಸ್ಪತ್ರೆಯ ಮಾಜಿ ವಿದ್ಯಾರ್ಥಿನಿಯಾಗಿರುವ ಮಾಧವಿ ಮಿತ್ತಲ್ ಅವರು ಅಲಹಾಬಾದ್‍ ನಲ್ಲಿ ನಡೆಸುತ್ತಿದ್ದ  ಕ್ಲಿನಿಕ್ ಮೇಲೆ ದಾಳಿ ನಡೆಸಿತ್ತು. ಆ ಸಂದರ್ಭ ಮಾಧವಿ ಊರಿನಲ್ಲಿರಲಿಲ್ಲ, ಆದರೆ ಪೊಲೀಸರು ಆಕೆಯ ಅನುಪಸ್ಥಿತಿಯಲ್ಲಿಯೇ ಕ್ಲಿನಿಕ್ ಸೀಲ್ ಮಾಡಿದ್ದರು. ತಾಂತ್ರಿಕ ಲೋಪಕ್ಕಾಗಿ ಕ್ಲಿನಿಕ್ ಮುಚ್ಚಲಾಗಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.

ಆದರೆ ಇದು ದ್ವೇಷದ ಕ್ರಮವಾಗಿದೆ ಎಂದು ಫೌಂಡೇಶನ್‍ನ ರಾಷ್ಟ್ರೀಯ ಸಂಚಾಲಕ ಹರ್ಜಿತ್ ಸಿಂಗ್ ಭಟ್ಟಿ ಹೇಳಿದ್ದಾರೆ. ಕ್ಲಿನಿಕ್ ಮತ್ತೆ ಆರಂಭಿಸುವಂತಾಗಲು ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಫೌಂಡೇಶನ್  ವೈದ್ಯಕೀಯ ಸಮುದಾಯವನ್ನು ಆಗ್ರಹಿಸಿದೆ.

ಕ್ಲಿನಿಕ್ ನಡೆಸುತ್ತಿದ್ದ ಮಾಧವಿಯ ಪತಿ ಆಶಿಷ್ ಅಖಿಲ ಭಾರತ ಕಿಸಾನ್ ಮಜ್ದೂರ್ ಸಭಾದ ಪ್ರಧಾನ ಕಾರ್ಯದರ್ಶಿಯಾಗಿದ್ದು  ಅಲಹಾಬಾದ್‍ನ ಮನ್ಸೂರ್ ಪಾರ್ಕ್ ಪ್ರದೇಶದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಬಹಿರಂಗವಾಗಿ ಬೆಂಬಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News