ದೇಶದಲ್ಲಿ ‘ಏಕರೂಪತೆ’ ಆಲೋಚನೆ ಮೂರ್ಖತನದ ಪರಮಾವಧಿ: ಮಾಜಿ ಸಚಿವ ಕೃಷ್ಣಬೈರೇಗೌಡ

Update: 2020-03-10 17:17 GMT

ಬೆಂಗಳೂರು, ಮಾ. 10: ‘ಕೇವಲ 13.50 ಲಕ್ಷ ಜನಸಂಖ್ಯೆಯುಳ್ಳ ಇಸ್ತೋನಿಯಾ ರಿಪಬ್ಲಿಕ್‌ನಂತಹ ಸಣ್ಣ ದೇಶದಲ್ಲಿ ‘ಏಕರೂಪತೆ’ ಸಾಧ್ಯವಾಗಿಲ್ಲ. ಹೀಗಾಗಿರುವಾಗ ಸಾವಿರಾರು ಭಾಷೆ, ಸಂಸ್ಕೃತಿ, ಧರ್ಮ, ಪರಂಪರೆಯುಳ್ಳ ಭಾರತ ದೇಶದಲ್ಲಿ ‘ಏಕರೂಪತೆ’ ತರುವ ಪ್ರಯತ್ನ ಮೂರ್ಖತನದ ಪರಮಾವಧಿ’ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಟೀಕಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಸಂವಿಧಾನದ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿನ ವೈವಿಧ್ಯತೆಯನ್ನು ಹತ್ತಿಕ್ಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ದೇಶದಲ್ಲಿನ ವೈವಿಧ್ಯತೆಯನ್ನು ಸಂಭ್ರಮಿಸಬೇಕೇ ಹೊರತು ಅದಕ್ಕೆ ಧಕ್ಕೆ ತಂದು ಏಕರೂಪತೆ ತರುತ್ತೇವೆ ಎಂಬುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕಳವಳ: ಇತ್ತೀಚಿನ ದಿನಗಳಲ್ಲಿ ವೈವಿಧ್ಯತೆ ಮತ್ತು ಸ್ವಾತಂತ್ರ್ಯಕ್ಕೆ ಕುತ್ತು ಬರುತ್ತಿರುವುದು ಕಳಕಳಕಾರಿ ವಿಷಯ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಕೃಷ್ಣ ಬೈರೇಗೌಡ ಸಲಹೆ ಮಾಡಿದರು.

ಮೌಲ್ಯಾಂಕದಲ್ಲಿ ಕುಸಿತ: ಪ್ರಜಾಪ್ರಭುತ್ವ ದೇಶಗಳ ಮೌಲ್ಯಮಾಪನ ಸಂಬಂಧ ಅಂತರ್‌ರಾಷ್ಟ್ರೀಯ ಸಂಸ್ಥೆಯೊಂದು ವರದಿ ಬಿಡುಗಡೆ ಮಾಡಿದೆ. 2014ರಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ 27ನೆ ಸ್ಥಾನದಲ್ಲಿತ್ತು. ಆದರೆ, ಇದೀಗ ಅದು 21ನೆ ಸ್ಥಾನಕ್ಕೆ ಕುಸಿದಿದೆ ಎಂದು ಅವರು ಉಲ್ಲೇಖಿಸಿದರು.

ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಸಂವಿಧಾನಕ್ಕೆ ನಾವು ನಿಜವಾದ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದ ಅವರು, ಇಷ್ಟೊಂದು ಜಾತಿ, ಧರ್ಮ, ಸಂಸ್ಕೃತಿ, ಆಚರಣೆಗಳಿದ್ದರೂ, ಎಪ್ಪತ್ತು ವರ್ಷಗಳಾದರೂ ನಮ್ಮನ್ನು ಸಂವಿಧಾನ ಕಾಪಾಡಿದೆ ಎಂದರು.

ದಾರಿದೀಪ: ದೇಶಕ್ಕೆ 1947ರಲ್ಲಿ ಸ್ವಾತಂತ್ರ ಸಿಕ್ಕ ಸಂದರ್ಭದಲ್ಲಿ ಒಂದು ಗುಂಡುಸೂಜಿಯನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಆಹಾರ ಧಾನ್ಯಗಳನ್ನು ಹೊರಗಿನಿಂದ ತರಿಸಿಕೊಳ್ಳಬೇಕಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೃಷಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ. ಇದಕ್ಕೆ ಸಂವಿಧಾನವೇ ದಾರಿದೀಪ ಎಂದು ಅಂಕಿ-ಸಂಖ್ಯೆಗಳೊಂದಿಗೆ ಎಳೆಎಳೆಯಾಗಿ ಬಿಚ್ಚಿಟ್ಟರು.

ಪೋಲ್ಯಾಂಡ್, ಗ್ರೀಕ್, ಫ್ರಾನ್ಸ್, ನಿಕರಾಗುವ, ವೆನಿಜುವೆಲಾ, ಡಾಮಿನಿಕ್ ರಿಪಬ್ಲಿಕ್, ಪಕ್ಕದ ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಇನ್ನಿತರ ದೇಶಗಳಲ್ಲಿ ಹತ್ತು ಹಲವು ಬಾರಿ ಸಂವಿಧಾನ ಬದಲಾವಣೆ ಮಾಡಲಾಗಿದೆ. ಆದರೆ, ನಮ್ಮ ದೇಶದಲ್ಲಿ ಎಪ್ಪತ್ತು ವರ್ಷಗಳಾದರೂ ನಮ್ಮನ್ನು ಇಂದಿಗೂ ಕಾಪಾಡುತ್ತಿದೆ. ಇದನ್ನು ಹಲವು ಭಾಷೆ, ಬಣ್ಣಗಳಿದ್ದರೆ ಭಾರತೀಯರೆಲ್ಲರೂ ಸಂವಿಧಾನವನ್ನು ಗೌರವಿಸುತ್ತಿರುವುದೇ ದೊಡ್ಡ ಸಾಧನೆ ಎಂದು ಅವರು ಕೃಷ್ಣಬೈರೇಗೌಡ ಬಣ್ಣಿಸಿದರು.

ಐಕ್ಯತೆ ಎಂದರೆ ಏಕತೆ. ಏಕರೂಪತೆ ಅಲ್ಲ. ಏಕರೂಪ ಬೇರೆ, ಏಕತೆ ಬೇರೆ. ದೇಶದಲ್ಲಿ ವೈವಿಧ್ಯತೆ ಉಳಿಯದಿದ್ದರೆ ಐಕ್ಯತೆ ಉಳಿಯುವುದಿಲ್ಲ. ಭಾರತ ದೇಶದ ಶಕ್ತಿಯೇ ಅದರ ವೈವಿಧ್ಯತೆಯಲ್ಲಿ ಅಡಗಿದೆ. ಭಾರತದ ಸಂವಿಧಾನ ಪ್ರಪಂಚದಲ್ಲಿ ವೈವಿಧ್ಯತೆಯನ್ನು ಸಂಭ್ರಮಿಸುವ ಏಕಮಾತ್ರ ಸಂವಿಧಾನ ಎಂದು ತಜ್ಞರು ಹೇಳಿದ್ದಾರೆ. ಬೇರೆ ಯಾವ ದೇಶದ ಸಂವಿಧಾನವೂ ನಮ್ಮ ಸಂವಿಧಾನಕ್ಕೆ ಹೋಲಿಕೆಯೇ ಅಲ್ಲ ಎಂದು ಕೃಷ್ಣಬೈರೇಗೌಡ ಪ್ರತಿಪಾದಿಸಿದರು.

ವೈವಿಧ್ಯತೆ: ದೇಶದಲ್ಲಿ 116 ಸಮುದಾಯಗಳು ತಮ್ಮನ್ನು ಹಿಂದೂ ಮತ್ತು ಕ್ರೈಸ್ತ ಎರಡೂ ಆಚರಣೆಗಳನ್ನು ಅನುಸರಿಸುತ್ತಿವೆ. 35 ಸಮುದಾಯಗಳು ತಾವೂ ಹಿಂದೂ-ಮುಸ್ಲಿಮ್ ಅನುಯಾಯಿಗಳಾಗಿದ್ದಾರೆ. 94 ಸಮುದಾಯಗಳು ತಮ್ಮನ್ನು ಕ್ರೈಸ್ತ ಮತ್ತು ಬುಡಕಟ್ಟು ಆಚರಣೆ ಮಾಡುತ್ತಿವೆ. 12 ಸಮುದಾಯಗಳು ತಾವು ಮುಸ್ಲಿಮ್ ಮತ್ತು ಬ್ರಾಹ್ಮಣರು ಕರೆದುಕೊಳ್ಳುತ್ತಾರೆ ಎಂದು ಕೇಂದ್ರ ಸರಕಾರದ ಅಧ್ಯಯನ ಸಂಸ್ಥೆಯೊಂದು ತಿಳಿಸಿದೆ ಎಂದು ವಿವರ ನೀಡಿದರು.

ನಿಮ್ಮ ಧರ್ಮದಲ್ಲಿ ಮುನೇಶ್ವರನಿಗೆಲ್ಲಿ ಸ್ಥಾನ: ನಾನು ಶೂದ್ರ, ನಾವು ಮುನೇಶ್ವರ ಆರಾಧಕರು. ನಿಮ್ಮ ಹಿಂದೂಧರ್ಮದಲ್ಲಿ ಮುನೇಶ್ವರನಿಗೆ ಎಲ್ಲಿದೆ ಸ್ಥಾನ ಎಂದು ಖಾರವಾಗಿ ಪ್ರಶ್ನಿಸಿದ ಕೃಷ್ಣಬೈರೇಗೌಡ, ಸರ್ಕಲ್ ಮಾರಮ್ಮ, ಪ್ಲೇಗ್ ಮಾರಮ್ಮ, ಕತ್ತಿ-ಕರುಮಾರಿಯಮ್ಮ ಭಕ್ತರು ಹಿಂದೂಗಳಲ್ಲವೇ? ಅವರಿಗೆ ಸಮಾನತೆ ನೀಡುವುದು ಬೇಡವೇ? ಅವರ ತನವನ್ನು ಗೌರವಿಸಿ, ಎಲ್ಲರೂ ಕೂಡಿಬಾಳಬೇಕೇ ಹೊರತು, ಯಾವುದೇ ಕಾರಣಕ್ಕೂ ಹತ್ತಿಕ್ಕಬಾರದು ಎಂದು ಆಗ್ರಹಿಸಿದರು.

‘ನಮ್ಮ ಸಂವಿಧಾನದ ಸಹಾಯದಿಂದ ನಾವು ಇತಿಹಾಸ ನಿರ್ಮಿಸಿದ್ದೇವೆ. ಬೇರೆ ಯಾರೂ ಮಾಡಲು ಸಾಧ್ಯವಾಗದಿದ್ದುದನ್ನು ನಾವು ಮಾಡಿದ್ದೇವೆ. ನಮ್ಮ ಪ್ರಗತಿಗೆ ನಮ್ಮ ಐಕ್ಯತೆ ಮತ್ತು ವೈವಿಧ್ಯತೆಯಿಂದ ಉಳಿದಿರುವುದೆ ಮೂಲ ಕಾರಣ. ಇದರಿಂದಲೇ ನಾವು ಜಗತ್ತಿಗೆ ಮಾದರಿಯಾಗಿದ್ದೇವೆ’

-ಕೃಷ್ಣಬೈರೇಗೌಡ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News