ಒಳಗಿದ್ದವರಿಗೆ ಬರ್ಬರ ಹಲ್ಲೆ ನಡೆಸಿ, ಮಸೀದಿಗೆ ಬೆಂಕಿ ಹಚ್ಚಿದ ‘ಸಮವಸ್ತ್ರಧಾರಿಗಳು’

Update: 2020-03-11 17:30 GMT

   ಹೊಸದಿಲ್ಲಿ,ಮಾ.11: ಈಶಾನ್ಯ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಫಾರೂಕಿಯಾ ಮಸೀದಿಗೆ ಸಮವಸ್ತ್ರದಲ್ಲಿದ್ದ ವ್ಯಕ್ತಿಗಳು ಬೆಂಕಿಹಚ್ಚಿದ್ದು, ಅದಕ್ಕೂ ಮುನ್ನ ಅವರು ತಮ್ಮ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದವರು ತಿಳಿಸಿರುವುದಾಗಿ ‘Caravanmagazine.com’ ವರದಿ ಮಾಡಿದೆ.

 ಫೆಬ್ರವರಿ 25ರಂದು ಸಂಜೆ 7:00 ಗಂಟೆಯ ವೇಳೆಗೆ ಮುಸ್ತಫಾಬಾದ್ ಪ್ರದೇಶದ ಬ್ರಿಜ್‌ಪುರಿಯಲ್ಲಿರುವ ಮಸೀದಿಯಲ್ಲಿ ತಾವು ಮಗ್ರಿಬ್ ನಮಾಝ್ ನಿರ್ವಹಿಸುತ್ತಿದ್ದಾಗ, ಈ ದಾಳಿ ನಡೆದಿದ್ದಾಗಿ ಮೂವರು ಸಂತ್ರಸ್ತರು ದೂರಿದ್ದಾರೆ. ದಾಳಿ ನಡೆಸಿದವರು ಸಮವಸ್ತ್ರದಲ್ಲಿದ್ದ ಪೊಲೀಸರೆಂದು ಅವರು ಹೇಳಿದ್ದಾರೆ.

  ಮಸೀದಿಯೊಳಗೆ 16 ಸಿಸಿಸಿಟಿವಿ ಕ್ಯಾಮರಾಗಳಿದ್ದು, ಮದ್ರಸದ ನೆಲ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ ಈ ದೃಶ್ಯಾವಳಿಗಳ ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿಡಲಾಗುತ್ತಿತ್ತು. ಸಮವಸ್ತ್ರದಲ್ಲಿ ದಾಳಿಕೋರರು ಆ ಕೊಠಡಿಯನ್ನು ನಾಶಪಡಿಸಿದ್ದಾರೆಂದು ಹಲ್ಲೆಗೊಳಗಾದವರಲ್ಲೊಬ್ಬರಾದ ಮಸೀದಿಯ ಇಮಾಮ್ ಮುಫ್ತಿ ಮುಹಮ್ಮದ್ ತಾಹಿರ್ ತಿಳಿಸಿದ್ದಾರೆ.

   ಸಮವಸ್ತ್ರಧಾರಿಗಳು ತಮ್ಮ ಮೇಲೆ ಲಾಠಿಗಳಿಂದ ಬರ್ಬರವಾಗಿ ಹೊಡೆದಿದ್ದಾರೆ ಎಂದು ಹಲ್ಲೆಗೊಳಗಾದವರಾದ ಸ್ಥಳೀಯ ನಿವಾಸಿ ತಾಹಿರ್, ಟೈಲರ್ ವೃತ್ತಿಯ ಫಿರೋಝ್ ಅಖ್ತರ್ ಹಾಗೂ ಮಸೀದಿಯಲ್ಲಿ ಆಝಾನ್‌ಗೆ ಕರೆ ನೀಡುವ ಮುಅದ್ದೀನ್ ಆದ ಜಲಾಲುದ್ದೀನ್ ತಿಳಿಸಿದ್ದಾರೆ. ಈ ಮೂವರಿಗೂ ದಾಳಿಯಲ್ಲಿ ಗಂಭೀರವಾದ ಗಾಯಗಳಾಗಿವೆ.

 ಮಸೀದಿಯ ಮೇಲೆ ದಾಳಿ ನಡೆಸಿದವರು ನೈಜ ಬುಲೆಟ್‌ ಪ್ರೂಫ್ ಜಾಕೆಟ್ ‌ಗಳನ್ನು ಧರಿಸಿದ್ದರು. ಹೀಗಾಗಿ ಅವರು ನಿಜವಾದ ಪೊಲೀಸರೇ ಅಥವಾ ಅರೆಸ್ಸೆಸ್ ಬೆಂಬಲಿಗರೇ ಎಂಬುದು ನಮಗೆ ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲವೆಂದು ಅವರು ಹೇಳಿದ್ದಾರೆ. ಸಮವಸ್ತ್ರಧಾರಿ ದಾಳಿಕೋರರ ತಂಡವು 30ರಿಂದ 60ರಷ್ಟಿತ್ತೆಂದು ಅವರು ತಿಳಿಸಿದ್ದಾರೆ.

  ಫಾರೂಕಿಯಾ ಮಸೀದಿಯ ಮೇಲೆ ದಾಳಿ ನಡೆದಿರುವ ಕುರುಹುಗಳು ‘ದ ಕಾರವಾನ್’ ವರದಿಗಾರರಿಗೂ ಸ್ಪಷ್ಟವಾಗಿ ಗೋಚರಿಸಿವೆ. ಮಸೀದಿಯ ಗೋಡೆಗಳು ಸುಟ್ಟು ಕರಕಲಾಗಿದ್ದವು ಹಾಗೂ ಹಲವಾರು ಬೆಡ್ಡಿಂಗ್‌ ಗಳು ಹಾಗೂ ಕೂಲರ್ ‌ಗಳು ಕೂಡಾ ಸುಟ್ಟುಹೋಗಿದ್ದವು. ಅಲ್ಲಿದ್ದ ಹಲವು ಪುಸ್ತಕಗಳು ಕೂಡಾ ಸುಟ್ಟುಬೂದಿಯಾಗಿದ್ದವು. ಈ ಬಗ್ಗೆ ವಿವರ ಕೇಳಿ, ಈಶಾನ್ಯ ದಿಲ್ಲಿಯ ಪೊಲೀಸ್ ಆಯುಕ್ತ ವೇದ್ ಪ್ರಕಾಶ್ ಸೂರ್ಯ ಅವರಿಗೆ ತಾನು ಇಮೇಲ್ ಹಾಗೂ ಮೆಸೇಜ್ ಸಂದೇಶ ಕಳುಹಿಸಿದ್ದರೂ, ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲವೆಂದು ‘ದ ಕಾರವಾನ್’ ವರದಿಗಾರರು ತಿಳಿಸಿದ್ದಾರೆ.

   ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈ ಮಸೀದಿಯ ಆವರಣದಲ್ಲಿ ಜನರು 40ಕ್ಕೂ ಹೆಚ್ಚು ದಿನಗಳಿಂದ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದರು. ಧರಣಿ ನಿರತರಿಗೆ ಬೇಕಾದ ಚಾಪೆ, ಇತ್ಯಾದಿ ಆಗತ್ಯ ಸಾಮಗ್ರಿಗಳನ್ನು ಮಸೀದಿಯ ಒಳಗೆ ಶೇಖರಿಸಿಡಲಾಗುತ್ತಿತ್ತು. ಶಾಂತಿಯುತವಾಗಿ ನಡೆಯುತ್ತಿದ್ದ ಈ ಪ್ರತಿಭಟನೆಯಿಂದ ಯಾರಿಗೂ ಅನಾನುಕೂಲವಾಗಿರಲಿಲ್ಲ. ಈ ಪ್ರದೇಶದುದಕ್ಕೂ ಸಂಚರಿಸಲು ನಾವು ದಾರಿ ಮಾಡಿಕೊಟ್ಟಿದ್ದೆವು ಎಂದು ತಾಹಿರ್ ಹೇಳುತ್ತಾರೆ. ದಾಳಿ ನಡೆಸಿದವರು ಮಾಸಿದ ಸೇನಾ ಸಮವಸ್ತ್ರಗಳನ್ನು ಧರಿಸಿದ್ದರೆಂದು ಫಿರೋಝ್ ವಿವರಿಸಿದ್ದರೆ, ದಾಳಿಕೋರರು ಪೊಲೀಸ್ ಸಮವಸ್ತ್ರಗಳನ್ನು ಧರಿಸಿದ್ದರೆಂದು ಜಲಾಲುದ್ದೀನ್ ಹಾಗೂ ತಾಹಿರ್ ಹೇಳಿದ್ದಾರೆ.

  ದಾಳಿಯ ದಿನದಂದು ಬ್ರಿಜ್‌ಪುರಿಯಲ್ಲಿ ಎರಡು ಗುಂಪುಗಳು ಕಲ್ಲೆಸೆತದಲ್ಲಿ ತೊಡಗಿದಾಗ ಪೊಲೀಸರು ಹಾಗೂ ಸಂಘಪರಿವಾರದ ಬೆಂಬಲಿಗರು ಜನರೆಡೆಗೆ ಲಾಠಿಚಾರ್ಜ್ ಹಾಗೂ ಗುಂಡಿನದಾಳಿಯಲ್ಲಿ ತೊಡಗಿದ್ದರು. ಪರಿಸ್ಥಿತಿ ಕೈಮೀರಿದ್ದರಿಂದ ಸಿಎಎ ವಿರೋಧಿ ಮಹಿಳಾ ಪ್ರತಿಭಟನಕಾರರು ಸ್ಥಳವನ್ನು ತೆರವುಗೊಳಿಸಿದ್ದರು.

  ಸಂಜೆಯ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ್ದ ಸಮವಸ್ತ್ರಧಾರಿ ದಾಳಿಕೋರರು ಕೈಗೆ ಸಿಕ್ಕಿದವರಿಗೆಲ್ಲಾ ಹಿಗ್ಗಾಮುಗ್ಗಾ ಥಳಿಸಿದರು. ನಾವು ಹಿಂದೂ-ಮುಸ್ಲಿಂ ಏಕತೆಗೆ ಧ್ವನಿವರ್ಧಕದಲ್ಲಿ ಕರೆ ನೀಡುತ್ತಿದ್ದುದಾಗಿ ಹೇಳಿದವರೂ ಅವರದಕ್ಕೆ ಕಿವಿಗೊಡಲಿಲ್ಲ. ಲಾಠಿ ಧರಿಸಿದ ಸಮವಸ್ತ್ರಧಾರಿಗಳು ಮಾತನಾಡುತ್ತಿರುವ ರೀತಿಯನ್ನು ಕಂಡಾಗ ಅವರು ಬಿಹಾರ ಅಥವಾ ಪೂರ್ವಭಾಗದವರೆಂಬುದು ಸ್ಪಷ್ಟವಾಗುತ್ತಿತ್ತು ಎಂದು ಹಲ್ಲೆಗೊಳಗಾದ ತಾಹಿರ್ ಹೇಳುತ್ತಾರೆ.

ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಪೆಟ್ರೊಲ್, ಡೀಸೆಲ್ ತಂದಿದ್ದ ಸಮವಸ್ತ್ರಧಾರಿಗಳು ಗೋಡೆಗಳು ಹಾಗೂ ಹಾಸಿಗೆ ಕಂಬಳಿಗಳನ್ನು ಒಟ್ಟು ಸೇರಿಸಿ ಬೆಂಕಿಹಚ್ಚಿದರೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News